'ರಾಷ್ಟ್ರಧ್ವಜ ಹಾರಿಸದ ಮನೆಗಳ ಚಿತ್ರ ಕ್ಲಿಕ್ಕಿಸಿ' ಎಂದು ಹೇಳಿ ವಿವಾದಕ್ಕೀಡಾದ ಉತ್ತರಾಖಂಡ ಬಿಜೆಪಿ ಅಧ್ಯಕ್ಷ

Update: 2022-08-12 07:10 GMT

ಡೆಹ್ರಾಡೂನ್: "ರಾಷ್ಟ್ರಧ್ವಜಗಳನ್ನು ಹಾರಿಸದ ಮನೆಗಳ ಚಿತ್ರಗಳನ್ನು ಕ್ಲಿಕ್ಕಿಸಿ ನನಗೆ ನೀಡಿ. ಯಾರು ರಾಷ್ಟ್ರೀಯವಾದಿ ಹಾಗೂ ಯಾರು ಅಲ್ಲ ಎಂದು ಜನರು ನೋಡಲು ಬಯಸುತ್ತಾರೆ," ಎಂದು ಉತ್ತರಾಖಂಡ ಬಿಜೆಪಿ ಅಧ್ಯಕ್ಷ ಮಹೇಂದ್ರ ಭಟ್ಟ್ ಹೇಳಿರುವುದು ವಿವಾದಕ್ಕೀಡಾಗಿದೆ.

ಬುಧವಾರ ಹಲ್ದ್ವನಿ ಎಂಬಲ್ಲಿ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು "ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸದ ಜನರ ರಾಷ್ಟ್ರಭಕ್ತಿಯನ್ನು ಪ್ರಶ್ನಿಸಬಹುದು" ಎಂದು ಹೇಳಿರುವುದು ವಿಪಕ್ಷಗಳಿಂದ ಮಾತ್ರವಲ್ಲದೆ ಸ್ಥಳೀಯ ನಿವಾಸಿಗಳಿಂದಲೂ ಟೀಕೆಗೆ ಗುರಿಯಾಗಿದೆ.

ಅವರು ಈ ಹೇಳಿಕೆ ನೀಡುತ್ತಿರುವ ವೀಡಿಯೋ ಕ್ಲಿಪ್ ಕೂಡ ವೈರಲ್ ಆಗಿದೆ. ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

"ಈ ಸ್ವಾತಂತ್ರ್ಯ ದಿನದಂದು ತ್ರಿವರ್ಣ ಧ್ವಜವನ್ನು ಹಾರಿಸದೇ ಇರುವ ಮನೆಗಳ ಮಾಲೀಕರನ್ನು ಜನರು ವಿಶ್ವಾಸದಿಂದ ನೋಡುವುದಿಲ್ಲ, ತಮ್ಮ ಮನೆಯಲ್ಲಿ ರಾಷ್ಟ್ರಧ್ವಜ ಹಾರಿಸುವುದಕ್ಕೆ ಯಾರಿಗೆ ಸಮಸ್ಯೆಯಿರಬಹುದು? ರಾಷ್ಟ್ರಧ್ವಜವನ್ನು ಹಾರಿಸದೇ ಇರುವವರ ಮೇಲೆ ದೇಶ ವಿಶ್ವಾಸವಿರಿಸಲು ಸಾಧ್ಯವಿಲ್ಲ" ಎಂದರು.

ಭಟ್ಟ್ ಹೇಳಿಕೆಯನ್ನು ಖಂಡಿಸಿದ ಉತ್ತರಾಖಂಡ ರಾಜ್ಯ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಗಣೇಶ್ ಗೋಡಿಯಾಲ್, "ಪಕ್ಷವೊಂದರ ರಾಜ್ಯ ಘಟಕದ ಅಧ್ಯಕ್ಷರಾಗಿರುವ ಅವರು ಮಾತನಾಡುವ ಮುನ್ನ ಎರಡು ಬಾರಿ ಯೋಚಿಸಬೇಕು, ಆರ್ಥಿಕ ಸಮಸ್ಯೆಗಳಿಂದ ಹಲವು ಮನೆಗಳಲ್ಲಿ ರಾಷ್ಟ್ರಧ್ವಜಗಳನ್ನು ಹಾರಿಸದೇ ಇರಬಹುದು" ಎಂದು ಹೇಳಿದರು.

ತಮ್ಮ ಹೇಳಿಕೆ ವಿವಾದಕ್ಕೀಡಾದ ಬೆನ್ನಿಗೆ ಪ್ರತಿಕ್ರಿಯಿಸಿದ ಮಹೇಂದ್ರ ಭಟ್ಟ್, "ನನ್ನ ಹೇಳಿಕೆಯನ್ನು ಕಾಂಗ್ರೆಸ್ ತಪ್ಪಾಗಿ ಅರ್ಥೈಸಿದೆ. ಜನರಿಗೆ ಧ್ವಜ ಖರೀದಿಸಲು ಹಣ ಇಲ್ಲವೆಂದು  ಹೇಳುತ್ತಿದೆ. ರಾಷ್ಟ್ರಧ್ವಜಗಳನ್ನು ವಿವಿಧ ಕಡೆಗಳಲ್ಲಿ ವಿತರಿಸಲಾಗುತ್ತಿದೆ, ಪಕ್ಷವೂ ಸಹಾಯ ಮಾಡುತ್ತಿದೆ. ಅಷ್ಟಕ್ಕೂ ರಾಷ್ಟ್ರಧ್ವಜ ಹಾರಿಸುವುದಕ್ಕೆ ಯಾರಿಗೆ ಸಮಸ್ಯೆಯಿದೆ ಎಂಬ ಪ್ರಶ್ನೆಯಿದೆ" ಎಂದರು.

"ಆರೆಸ್ಸೆಸ್ ಮುಖ್ಯ ಕಾರ್ಯಾಲಯದಲ್ಲಿ ಹಲವು ವರ್ಷಗಳ ಕಾಲ ರಾಷ್ಟ್ರಧ್ವಜ ಹಾರಿಸಿಲ್ಲ" ಎಂಬ ವಿಚಾರ ಮುಂದಿಟ್ಟುಕೊಂಡು ಟೀಕಿಸಿದ ಹಿರಿಯ ಕಾಂಗ್ರೆಸ್ ನಾಯಕ ಕರಣ್ ಮೆಹ್ರಾ, "ಬಿಜೆಪಿ ರಾಜ್ಯ ಅಧ್ಯಕ್ಷರ ಮಾತನ್ನು ನಂಬಬೇಕಾದರೆ ಆರೆಸ್ಸೆಸ್ ಅನ್ನೂ ಯಾರು ನಂಬಬಾರದು" ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News