ಪ್ರತಿಭಾ ಕಾರಂಜಿ ಮಕ್ಕಳ ಭವಿಷ್ಯಕ್ಕೆ ಉತ್ತಮ ವೇದಿಕೆ: ಉಮರ್ ಫಾರೂಕ್ ಫರಂಗಿಪೇಟೆ

Update: 2022-08-12 12:20 GMT

ಬಂಟ್ವಾಳ, ಆ.12: ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಲು ಸರಕಾರ ಪ್ರತಿಭಾ ಕಾರಂಜಿಯನ್ನು ಆಯೋಜಿಸುತ್ತಿದ್ದು ಇದು ಮಕ್ಕಳ ಭವಿಷ್ಯಕ್ಕೆ ಇರುವ ಉತ್ತಮ ವೇದಿಕೆಯಾಗಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ, ಟುಡೇ ಫೌಂಡೇಶನ್ ಅಧ್ಯಕ್ಷ ಉಮರ್ ಫಾರೂಕ್ ಫರಂಗಿಪೇಟೆ ಹೇಳಿದರು.  

ದ.ಕ.ಜಿ.ಪಂ.ಹಿ.ಪ್ರಾ. ಪುದು ಮಾಪ್ಳ ಶಾಲೆಯಲ್ಲಿ ಶುಕ್ರವಾರ ನಡೆದ ತುಂಬೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತೀಯೊಂದು ಮಕ್ಕಳಲ್ಲೂ ಬೇರೆ ಬೇರೆ ಪ್ರತಿಭೆಗಳು ಇರುತ್ತದೆ. ಕೆಲವು ಮಕ್ಕಳು ಕಲಿಕೆಯಲ್ಲಿ ಪ್ರತಿಭಾವಂತರಾದರೆ ಕೆಲವು ಮಕ್ಕಳಲ್ಲಿ ಅಟೋಟ, ಸಾಂಸ್ಕೃತಿಕ ಪ್ರತಿಭೆಗಳು ಇರುತ್ತದೆ. ಇದನ್ನು ಪ್ರಾಥಮಿಕ ಹಂತದಲ್ಲೇ ಗುರುತಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದರು. 

ಪೋಷಕರು ತಮ್ಮ ಮಕ್ಕಳಿಗೆ ಕೇವಲ ಓದುವಂತೆ ಒತ್ತಡ ಹಾಕಬಾರದು. ಆಟೋಟ, ಸಾಂಸ್ಕೃತಿಕ ಸಹಿತ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಬೇಕು. ಹೀಗಾದರೆ ಮಾತ್ರ ಮಕ್ಕಳಿಗೆ ಅವರ ಪ್ರತಿಭೆಯನ್ನು ಗುರುತಿಸಲು ಸಾಧ್ಯ ಎಂದು ಅವರು ಹೇಳಿದರು. 

ಇತ್ತೀಚೆಗೆ ನಡೆದ ಕಾಮನ್ ವೆಲ್ತ್ ಕ್ರೀಡಾ ಕೂಟದಲ್ಲಿ ಭಾರತ ಉತ್ತಮ ಸಾಧನೆ ಮಾಡಿದೆ. ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಪ್ರಥಮಿಕ ಶಾಲಾ ಹಂತದಲ್ಲೇ ತರಬೇತಿ ಪಡೆಯುವುದು ಉತ್ತಮ. ಪ್ರಥಮಿಕ ಹಂತದಲ್ಲಿ ಮಕ್ಕಳಿಗೆ ಉತ್ತಮ ತರಬೇತಿ ನೀಡುವುದು ದೈಹಿಕ ಶಿಕ್ಷಕರ ಜವಾಬ್ದಾರಿ ಹೆಚ್ಚಿನದ್ದು ಎಂದು ಹೇಳಿದರು. 

ನಮ್ಮ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಆಯೋಜಿಸಿರುವುದು ತುಂಬಾ ಖುಷಿ ತಂದಿದೆ. ಇದಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದ. ಕಾರ್ಯಕ್ರಮ ಯಶಸ್ಸು ಆಗಿ ನಡೆಯಲು ಹಲವು ದಿನಗಳಿಂದ ಶ್ರಮ ವಹಿಸಿದ ಈ ಶಾಲೆಯ ಮುಖ್ಯ ಶಿಕ್ಷಕಿ ಹಾಗೂ ಎಲ್ಲಾ ಸಹ ಶಿಕ್ಷಕಿಯರಿಗೆ ಅವರು ಧನ್ಯವಾದ ಸಮರ್ಪಿಸಿದರು. 

ಮುಚ್ಚುವ ಹಂತಕ್ಕೆ ತಲುಪಿದ್ದ ಈ ಶಾಲೆಯಲ್ಲಿ ಇಂದು ಖಾಸಗಿ ಶಾಲೆಯನ್ನೂ ಮೀರಿ ಮಕ್ಕಳು ಇದ್ದಾರೆ. ಇದಕ್ಕೆ ಟುಡೆ ಫೌಂಡೇಶನ್ ನ ಸಹಕಾರ, ಈ ಊರಿನ ಜನರ, ದಾನಿಗಳ ಹಾಗೂ ಶಾಲೆಯ ಪ್ರತಿಯೊಂದು ಶಿಕ್ಷಕಿಯರ ಸಹಕಾರ, ಪರಿಶ್ರಮ ಕೊಡುಗೆ ಮಹತ್ವದ್ದಾಗಿದೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಶಿಕ್ಷಣ ಪರಿವೀಕ್ಷಣಾ ಅಧಿಕಾರಿ ಸುಜಾತಾ ಮಾತನಾಡಿದರು. ಬಂಟ್ವಾಳ ಕ್ಷೇತ್ರ ಶಿಕ್ಷಣಾದಿಕಾರಿ ಜ್ಞಾನೇಶ್ ಎಂ.ಪಿ. ಭೇಟಿ ನೀಡಿ ವೀಕ್ಷಣೆ ನಡೆಸಿದರು. 

ಎಸ್.ಡಿ.ಎಂ.ಸಿ. ಅಧ್ಯಕ್ಷ ರಮ್ಲನ್ ಕುಂಪನಮಜಲು, ಉದ್ಯಮಿ ಹಾಶಿರ್ ಎಂ.ಎನ್.ಟಿ. ಮೇಲ್ಮನೆ, ನಿವೃತ್ತ ಶಿಕ್ಷಕ ಮುಹಮ್ಮದ್ ತುಂಬೆ, ಗ್ರಾಪಂ ಸದಸ್ಯ ಮುಹಮ್ಮದ್ ಮೋನು, ಟುಡೆ ಫೌಂಡೇಶನ್ ಪ್ರಮುಖರಾದ ಮಜೀದ್ ಫರಂಗಿಪೇಟೆ, ಅಬೂಬಕ್ಕರ್ ಫರಂಗಿಪೇಟೆ, ಸ್ಥಳೀಯರಾದ ಕೆ.ಎಚ್.ಕರೀಮ್, ಮುಹಮ್ಮದ್ ಕಣ್ಣೂರು, ಬಿ.ಆರ್.ಪಿ. ವಿದ್ಯಾ, ಸಿ.ಆರ್.ಪಿ. ವನಿತಾ, ಶಿಕ್ಷಕರ ಸಂಘದ ಪ್ರತಿನಿಧಿಗಳಾದ ಪ್ರಮಿಳಾ, ಭಾರತಿ, ಶಾಲೆಯ ಶಿಕ್ಷಕಿಯರು ಉಪಸ್ಥಿತರಿದ್ದರು. 

ಶಾಲೆಯ ಮುಖ್ಯ ಶಿಕ್ಷಕಿ ಎಚ್.ಎಂ. ಶಕುಂತಲಾ ಸ್ವಾಗತಿಸಿದರು. ತುಂಬೆ ಕ್ಲಸ್ಟರ್ ಸಿ.ಆರ್.ಪಿ. ವನಿತಾ ಪ್ರಾಸ್ತಾವಿಕವಾಗಿ ಮಾತನಾಡಿ ಧನ್ಯವಾದಗೈದರು. ಶಿಕ್ಷಕಿಯರಾದ ಶ್ಯಾಲೆಟ್, ಮೋಹಿನಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News