ACB ರದ್ದು: ಲೋಕಾಯುಕ್ತ ಕಚೇರಿ ಎದುರು ಎಎಪಿಯಿಂದ ಸಂಭ್ರಮಾಚಾರಣೆ

Update: 2022-08-12 12:43 GMT

ಬೆಂಗಳೂರು: ಎಸಿಬಿಯನ್ನು ರದ್ದು ಪಡಿಸಿ ಅಲ್ಲಿನ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸಿದ ಹೈಕೋರ್ಟ್‌ ಆದೇಶವನ್ನು ಸ್ವಾಗತಿಸಿ ಆಮ್‌ ಆದ್ಮಿ ಪಾರ್ಟಿ ನಾಯಕರು ಹಾಗೂ ಕಾರ್ಯಕರ್ತರು ಲೋಕಾಯುಕ್ತ ಕಚೇರಿ ಮುಂಭಾಗ ಕೇಕ್‌ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, “2010 ಹಾಗೂ 2011ರಲ್ಲಿ ಕರ್ನಾಟಕದ ಸಾಮಾಜಿಕ ಹೋರಾಟಗಾರರು ಲೋಕಾಯುಕ್ತ ಸಂಸ್ಥೆಯನ್ನು ಬೆಂಬಲಿಸಿ ʻಭ್ರಷ್ಟಾಚಾರ ಸಾಕುʼ ಹೋರಾಟವನ್ನು ಆರಂಭಿಸಿದರು. ಅರವಿಂದ್‌ ಕೇಜ್ರಿವಾಲ್‌ರವರು ಕೂಡ ಈ ಹೋರಾಟದಲ್ಲಿ ಭಾಗವಹಿಸಿದ್ದರು. ಮುಂದಿನ ದಿನಗಳಲ್ಲಿ ಈ ಹೋರಾಟವು ʻಭ್ರಷ್ಟಾಚಾರ ವಿರೋಧಿ ಭಾರತʼ ಹೆಸರಿನಲ್ಲಿ ದೇಶವ್ಯಾಪಿ ಹರಡಿ, ಆಮ್‌ ಆದ್ಮಿ ಪಾರ್ಟಿ ಜನ್ಮತಾಳಲು ಕಾರಣವಾಯಿತು. ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಕಂಡು ಬೇಸತ್ತಿದ್ದ ಪ್ರಜೆಗಳು ಆಮ್‌ ಆದ್ಮಿ ಪಾರ್ಟಿಯನ್ನು ಬೆಂಬಲಿಸಲು ಶುರುಮಾಡಿದರು” ಎಂದು ಹೇಳಿದರು.

“ಎಸಿಬಿಯಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿರುವ ಪ್ರಕರಣಗಳ ತನಿಖೆಯನ್ನು ಲೋಕಾಯುಕ್ತ ಸಂಸ್ಥೆಯು ತ್ವರಿತಗತಿಯಲ್ಲಿ ನಡೆಸಬೇಕು. ಅದೇ ರೀತಿ, ಎಸಿಬಿಯು ಮುಚ್ಚಿಹಾಕಿರುವ ಪ್ರಕರಣಗಳ ತನಿಖೆಯನ್ನು ಲೋಕಾಯುಕ್ತವು ಪುನರಾರಂಭಿಸಬೇಕು. ಹಲವು ಪ್ರಭಾವಿ ವ್ಯಕ್ತಿಗಳಿಗೆ ಎಸಿಬಿಯಿಂದ ಕ್ಲೀನ್‌ಚಿಟ್‌ ಸಿಕ್ಕಿದ್ದು, ಈಗ ಲೋಕಾಯುಕ್ತವು ಆ ಪ್ರಕರಣಗಳ ನಿಷ್ಪಕ್ಷಪಾತ ತನಿಖೆ ಕೈಗೆತ್ತಿಕೊಂಡರೆ ಅಪರಾಧಿಗಳು ಹೊರಬರುತ್ತಾರೆ. ರಾಜ್ಯ ಸರ್ಕಾರವು ಲೋಕಾಯುಕ್ತ ಸಂಸ್ಥೆಗೆ ಪರಮಾಧಿಕಾರ ನೀಡುವ ಮೂಲಕ ಇದಕ್ಕೆ ಅವಕಾಶ ಮಾಡಿಕೊಡಲಿ” ಎಂದು ಪೃಥ್ವಿ ರೆಡ್ಡಿ ಆಗ್ರಹಿಸಿದರು.

ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, “ಲೋಕಾಯುಕ್ತ ಸಂಸ್ಥೆಗೆ ಶಕ್ತಿಯಿದ್ದರೆ ಹಲವು ನಾಯಕರು ಜೈಲಿಗೆ ಹೋಗಬೇಕಾಗುತ್ತದೆ ಎಂದು ಹೆದರಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು 2016ರಲ್ಲಿ ಎಸಿಬಿ ಎಂಬ ನಾಟಕೀಯ ಸಂಸ್ಥೆಯನ್ನು ರಚಿಸಿತು. ಲೋಕಾಯುಕ್ತ ಸಂಸ್ಥೆಗಿದ್ದ ಅಧಿಕಾರವನ್ನು ಕಿತ್ತುಕೊಂಡು ಅದನ್ನು ಹಲ್ಲು ಕಿತ್ತ ಹಾವಿನಂತೆ ಮಾಡಿತು. ಸರ್ಕಾರವೇ ನಿಯಂತ್ರಿಸುವಂತಹ ಎಸಿಬಿ ಸಂಸ್ಥೆಯ ಮೂಲಕ ಭ್ರಷ್ಟ ಸಚಿವರಿಗೆ ರಕ್ಷಣೆ ನೀಡಿತು. ಬಿಜೆಪಿ ಹಾಗೂ ಜೆಡಿಎಸ್‌ನಲ್ಲೂ ಭ್ರಷ್ಟ ನಾಯಕರು ಇದ್ದಿದ್ದರಿಂದ ಅವು ಕೂಡ ಈ ನಿರ್ಧಾರದಿಂದ ಸಂತೋಷಗೊಂಡವು. ನ್ಯಾಯಾಲಯದ ಆದೇಶದಿಂದಾಗಿ ಆ ಮೂರು ಪಕ್ಷಗಳಿಗೆ ಹಿನ್ನಡೆಯಾಗಿದೆ” ಎಂದು ಹೇಳಿದರು.

ನಂತರ ಪಕ್ಷದ ನಾಯಕರುಗಳು  ಲೋಕಾಯುಕ್ತರನ್ನು ಭೇಟಿ ಮಾಡಿ ಶೀಘ್ರ ಗತಿಯಲ್ಲಿ ಪ್ರಕರಣಗಳನ್ನು ಮುಗಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಮನವಿ ಪತ್ರವನ್ನು ಸಲ್ಲಿಸಿದರು. ನಿಯೋಗದಲ್ಲಿ ನಿವೃತ್ತ  ಹಿರಿಯ ಕೆಎಎಸ್ ಅಧಿಕಾರಿ ಹಾಗೂ ಮಾಧ್ಯಮ ವಕ್ತಾರ ಕೆ. ಮಥಾಯಿ , ಹಿರಿಯ ಮುಖಂಡರುಗಳಾದ ಲಕ್ಷ್ಮೀಕಾಂತ ರಾವ್ ,  ಚನ್ನಪ್ಪಗೌಡ ನೆಲ್ಲೂರ, ಕುಶಲ ಸ್ವಾಮಿ , ರಾಜಶೇಖರ್ ದೊಡ್ಡಣ್ಣ , ಉಷಾ ಮೋಹನ್  ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News