ಭೀಮಾ ಕೋರೆಗಾಂವ್ ಪ್ರಕರಣ; ಪ್ರೊ.ಆನಂದ್ ತೇಲ್ತುಂಬ್ಡೆ ಸೇರಿದಂತೆ ಎಲ್ಲರ ಬೇಷರತ್ ಬಿಡುಗಡೆಗೆ ಒಕ್ಕೊರಲ ನಿರ್ಣಯ

Update: 2022-08-12 13:58 GMT

ಬೆಂಗಳೂರು, ಆ. 12: ‘ಭೀಮಾ ಕೊರೆಗಾಂವ್' ಪ್ರಕರಣದಲ್ಲಿ ಸುಳ್ಳು ಆರೋಪದ ಮೇಲೆ ಬಂಧಿಸಲಾಗಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುಟುಂಬದ ಸದಸ್ಯ ಪ್ರೊ.ಆನಂದ ತೇಲ್ತುಂಬ್ಡೆ ಅವರು ಸೇರಿದಂತೆ ಬಂಧಿತ ಎಲ್ಲರನ್ನು ಬೇಷರತ್ ಬಿಡುಗಡೆ ಮಾಡಬೇಕು. ಅವರುಗಳ ವಿರುದ್ಧ ದಾಖಲಿಸಿರುವ ಸುಳ್ಳು ಕೇಸುಗಳನ್ನು ಕೂಡಲೇ ಕೈಬಿಡಬೇಕು' ಎಂದು ‘ಸಂವಿಧಾನ ರಕ್ಷಣೆಗಾಗಿ ರಾಜ್ಯ ಮಟ್ಟದ ಶೋಷಿತರ ಐಕ್ಯತಾ ಸಮಾವೇಶ' ಒಕ್ಕೂರಲಿನ ನಿರ್ಣಯವನ್ನು ಅಂಗೀಕರಿಸಿದೆ.

ಶುಕ್ರವಾರ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ದಲಿತ ಸಂಘರ್ಷ ಸಮಿತಿ(ಸಂಯೋಜಕ) ಏರ್ಪಡಿಸಿದ್ದ ಬೃಹತ್ ಸಮಾವೇಶದಲ್ಲಿ ಮೇಲ್ಕಂಡ ನಿರ್ಣಯವನ್ನು ಕೈಗೊಳ್ಳಲಾಗಿದ್ದು, ಗುಜರಾತ್ ಗಲಭೆ ಪ್ರಕರಣದಲ್ಲಿ ಸಂತ್ರಸ್ತರ ಪರ ವಹಿಸಿದ್ದ ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರ ಬಂಧನವನ್ನು ಸಮಾವೇಶ ತೀವ್ರವಾಗಿ ಖಂಡಿಸಿದೆ. ಅಲ್ಲದೆ, ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು. ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಸಂವಿಧಾನ ವಿರೋಧಿ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ'ಯನ್ನು ಹಿಂಪಡೆಯಬೇಕು.

ಭೂ ಸುಧಾರಣೆ, ಎಪಿಎಂಸಿ ಹಾಗೂ ವಿದ್ಯುತ್ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ದಲಿತರ ಭೂಮಿ ರಕ್ಷಣೆ ದೃಷ್ಟಿಯಿಂದ ಪಿಟಿಸಿಎಲ್ ಕಾಯ್ದೆಗೆ ಅಗತ್ಯ ತಿದ್ದುಪಡಿ ತಂದು ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಬ್ಯಾಕ್‍ಲಾಗ್ ಹುದ್ದೆಗಳನ್ನು ಕೂಡಲೇ ಮಾಡಬೇಕು' ಎಂದು ಸಮಾವೇಶದ ನಿರ್ಣಯಗಳನ್ನು ದಸಂಸ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮಂಡಿಸಿದರು.

ಸಮಾವೇಶದಲ್ಲಿ ಪಾಲ್ಗೊಂಡಿದ್ದ ಆನಂದ್ ತೇಲ್ತುಂಬ್ಡೆ ಅವರ ಪತ್ನಿ ಹಾಗೂ ಅಂಬೇಡ್ಕರ್ ಅವರ ಮೊಮ್ಮಗಳಾದ ರಮಾಬಾಯಿ ಅಂಬೇಡ್ಕರ್ ಮಾತನಾಡಿ, ‘ಭೀಮಾ ಕೋರೇಗಾಂವ್ ಪ್ರಕರಣದಲ್ಲಿ ಮಾನವ ಹಕ್ಕುಗಳ ಮತ್ತು ದಲಿತ, ಶೋಷಿತರ ಪರವಾಗಿ ಹೋರಾಟ ಮಾಡುತ್ತಿದ್ದ ಹಲವು ಹಿರಿಯರನ್ನು ಬಂಧಿಸಲಾಗಿದ್ದು, ಎರಡು-ಮೂರು ವರ್ಷಗಳಿಂದ ಜೈಲಿನಲ್ಲಿ ಇರಿಸಲಾಗಿದೆ. ಅತ್ಯಂತ ಕ್ರೂರ ದೇಶದ್ರೋಹ ಪ್ರಕರಣದಡಿಯಲ್ಲಿ, ಸುಳ್ಳು ಆರೋಪದ ಮೇಲೆ ಆನಂದ್ ತೇಲ್ತುಂಬ್ಡೆ ಅವರನ್ನು ಬಂಧಿಸಿದ್ದು, ಆನಂದ್ ಸೇರಿದಂತೆ ಎಲ್ಲರನ್ನು ಬೇಷರತ್ ಬಿಡುಗಡೆ ಮಾಡಬೇಕು' ಎಂದು ಆಗ್ರಹಿಸಿದರು.

‘ಕೆಳಜಾತಿಯ ನೌಕರರು ಮಾಡಿದ ಬಿಸಿಯೂಟವನ್ನು ಮೇಲ್ಜಾತಿಯವರು ಸ್ವೀಕರಿಸುತ್ತಿಲ್ಲ. ಇದು ಜಾತಿ ವ್ಯವಸ್ಥೆ ಜೀವಂತವಾಗಿದೆ ಎಂಬುದಕ್ಕೆ ಉದಾಹರಣೆ. ಹೀಗಿರುವಾಗಿ ಕೆಲವರು ‘ಮನುಸ್ಮøತಿ' ಸಮರ್ಥಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಇಂದಿನ ಜಾತಿ ವ್ಯವಸ್ಥೆ ಹಾಗೂ ದಲಿತರು ಮತ್ತು ಮಹಿಳೆಯರ ಶೋಷಣೆಗೆ ಮೂಲ ಕಾರಣ ಮನುಸ್ಮøತಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಮಗೆ ಏನಾದರೂ ಹಕ್ಕುಗಳು ಸಿಕ್ಕಿದ್ದರೆ ಅದು ಅಂಬೇಡ್ಕರ್ ರೂಪಿಸಿದ ಸಂವಿಧಾನದಿಂದ ಮಾತ್ರ' ಎಂದು ರಮಾಬಾಯಿ ಪ್ರತಿಪಾದಿಸಿದರು.

‘ಎಷ್ಟೇ ಒಳ್ಳೆಯ ಸಂವಿಧಾನವಿದ್ದರೂ ಅದನ್ನು ಜಾರಿ ಮಾಡುವ ಸ್ಥಾನದಲ್ಲಿ ಒಳ್ಳೆಯವರಾಗಿರಬೇಕು' ಎಂದು ಅಂಬೇಡ್ಕರ್ ಅವರು ಹೇಳಿದ್ದಾರೆ. ಆದರೆ, ಇಂದು ಸಂವಿಧಾನ ಜಾರಿ ಮಾಡುವ ಸ್ಥಾನದಲ್ಲಿ ಕೆಟ್ಟ ಜನರು ಕೂತಿದ್ದಾರೆ. ಹೀಗಾಗಿಯೇ ಸಂವಿಧಾನ, ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕಾದ ಸ್ಥಿತಿ ಎದುರಾಗಿದೆ. ಆದುದರಿಂದ ನಾವೆಲ್ಲರೂ ಅನ್ಯಾಯದ ವಿರುದ್ಧ ಒಗ್ಗಟ್ಟಾಗಿ ಹೋರಾಟ ಮಾಡಬೇಕು' ಎಂದು ರಮಾಬಾಯಿ ತಿಳಿಸಿದರು.

ನಿಮ್ಮೊಂದಿಗೆ ನಾವಿದ್ದೇವೆ: ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್, ‘ಬ್ರಿಟಿಷರ ಆಡಳಿತದಲ್ಲಿದ್ದ ಕರಾಳ ಯುಎಪಿಎ ಕಾಯ್ದೆಯನ್ನು ಎಲ್ಲ ದೇಶಗಳಲ್ಲಿಯೂ ರದ್ದುಗೊಳಿಸಿದ್ದರೂ, ನಮ್ಮ ದೇಶದಲ್ಲಿ ಮಾತ್ರ ಇನ್ನೂ ಹಾಗೇ ಉಳಿಸಿಕೊಳ್ಳಲಾಗಿದೆ. ಸಂವಿಧಾನ ವಿರೋಧಿ ಈ ಅಮಾನವೀಯ ಕಾನೂನನ್ನು ರದ್ದುಗೊಳಿಸಬೇಕು. ಈ ಪ್ರಕರಣವನ್ನು ಹೆಚ್ಚಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಈ ಪ್ರಕರಣದಡಿಯಲ್ಲಿ ಸುಳ್ಳು ಆರೋಪದ ಮೇಲೆ ಬಂಧಿತರಾದ ಸಂತ್ರಸ್ತರಿಗೆ ಪರಿಹಾರ ನೀಡುವ ವ್ಯವಸ್ಥೆ ಜಾರಿಗೆ ತರಬೇಕು' ಎಂದು ಆಗ್ರಹಿಸಿದರು.

‘ಆನಂದ್ ತೇಲ್ತುಂಬ್ಡೆ ಬಂಧನದಿಂದ ವಿಚಲಿತರಾಗುವ ಅಗತ್ಯವಿಲ್ಲ, ರಮಾಬಾಯಿ ಅವರೇ ನಿಮ್ಮೊಂದಿಗೆ ನಾವಿದ್ದೇವೆ. ಭೀಮಾ ಕೋರೇಗಾಂವ್ ಪ್ರಕರಣದಲ್ಲಿ ಬಂಧಿತರಾಗಿರುವ ಎಲ್ಲರನ್ನು ಕೂಡಲೇ ಬೇಷರತ್ ಬಿಡುಗಡೆ ಮಾಡಬೇಕು. ಅಮಾಯಕರು ಹಾಗೂ ಮುಗ್ಧರನ್ನು ಜೈಲಿನಲ್ಲಿ ಕೂಡಿ ಹಾಕುತ್ತಿರುವ ಈ ಕಾನೂನು ರದ್ದುಗೊಳಿಸಲು ಆಗ್ರಹಿಸಿ ಹೋರಾಟ ಅನಿವಾರ್ಯ' ಎಂದು ನಾಗಮೋಹನ್ ದಾಸ್ ಸಲಹೆ ನೀಡಿದರು.

ಸಮಾವೇಶದಲ್ಲಿ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ, ಪ್ರೊ.ರವಿವರ್ಮ ಕುಮಾರ್, ಪ್ರೊ.ಎಸ್. ಜಿ. ಸಿದ್ದರಾಮಯ್ಯ, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಪತ್ರಕರ್ತರಾದ ಇಂದೂಧರ ಹೊನ್ನಾಪುರ, ಉಮಾಪತಿ, ಮುಖಂಡರಾದ ಬಡಗಲಪುರ ನಾಗೇಂದ್ರ, ಗುರುಪ್ರಸಾದ್ ಕೆರೆಗೋಡು, ಎನ್.ವೆಂಕಟೇಶ್, ಬಯ್ಯಾರೆಡ್ಡಿ, ಮಾವಳ್ಳಿ ಶಂಕರ್, ಡಾ.ವಾಸು, ಸಿದ್ದನಗೌಡ ಪಾಟೀಲ್, ಶ್ರೀನಿವಾಸ್, ಜಾನಕಿ ನಟರಾಜನ್, ಬಿ.ರಾಜಶೇಖರ್ ಮೂರ್ತಿ, ಅನಂತ ನಾಯ್ಕ್, ಯಶೋಧ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News