ಸರಕಾರಿ ಗೌರವಗಳೊಂದಿಗೆ ಗಾಯಕ ಶಿವಮೊಗ್ಗ ಸುಬ್ಬಣ್ಣ ಅಂತ್ಯಕ್ರಿಯೆ

Update: 2022-08-12 13:38 GMT

ಬೆಂಗಳೂರು, ಆ.11: ಕರ್ನಾಟಕ ಸುಗಮ ಸಂಗೀತದ ಪ್ರಸಿದ್ಧ ಗಾಯಕರಾಗಿದ್ದ, ತಮ್ಮ ಮೋಹಕ ಕಂಠದಿಂದ ನಾಡಿನ ಜನರ ಮನಸೂರೆಗೊಂಡಿದ್ದ ಶಿವಮೊಗ್ಗ ಸುಬ್ಬಣ್ಣ(83) ಅವರು ಹೃದಯಾಘಾತದಿಂದ ಗುರುವಾರ ರಾತ್ರಿ ಮೃತಪಟ್ಟಿದ್ದು, ಅವರ ಅಂತ್ಯಕ್ರಿಯೆಯನ್ನು ಸಕಲ ಸರಕಾರಿ ಗೌರವಗಳೊಂದಿಗೆ ಶುಕ್ರವಾರ ಸಂಜೆ ಬೆಂಗಳೂರಿನ ಬನಶಂಕರಿ ಚಿತಾಗಾರದಲ್ಲಿ ನೆರವೇರಿಸಲಾಯಿತು.

ಶುಕ್ರವಾರ ಬೆಳಗ್ಗೆ ಶಿವಮೊಗ್ಗ ಸುಬ್ಬಣ್ಣ ಅವರ ಪ್ರಾರ್ಥಿವ ಶರೀರವನ್ನು ಅವರ ನಿವಾಸದಿಂದ ರವೀಂದ್ರ ಕಲಾಕ್ಷೇತ್ರದ ಹಿಂಭಾಗದ ಸಂಸ ಬಯಲು ರಂಗಮಂದಿರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಸುಬ್ಬಣ್ಣ ಅವರ ಕುಟುಂಬದವರು, ಅಭಿಮಾನಿಗಳು, ಶಿಷ್ಯವೃಂದ, ರಾಜಕೀಯ, ಸಾಹಿತ್ಯ, ಚಿತ್ರರಂಗ ಸೇರಿ ವಿವಿಧ ಕ್ಷೇತ್ರಗಳ ಗಣ್ಯರು ಅಂತಿಮ ದರ್ಶನ ಪಡೆದರು. ಸುಬ್ಬಣ್ಣನವರು, ಮಕ್ಕಳಾದ ಶ್ರೀರಂಗ ಮತ್ತು ಬಾಗೇಶ್ರೀ ಅವರನ್ನು ಅಗಲಿದ್ದಾರೆ. 

ಮೃತರ ಗೌರವಾರ್ಥ ಪೊಲೀಸರು ಮೂರು ಸುತ್ತು ಕುಶಾಲತೋಪು ಹಾರಿಸಿ ಗೌರವ ಸೂಚಿಸಿದರು. ಸಾವಿರಾರು ಅಭಿಮಾನಿಗಳ ಭಾವಪೂರ್ಣ ಶ್ರದ್ಧಾಂಜಲಿಯೊಂದಿಗೆ ಅಂತ್ಯಕ್ರಿಯೆ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. 

ಶಿವಮೊಗ್ಗ ಸುಬ್ಬಣ್ಣನವರು ಕನ್ನಡದ ಸುಗಮ ಸಂಗೀತ ಕ್ಷೇತ್ರದ ಹಿರಿಯ ಗಾಯಕರಲ್ಲಿ ಒಬ್ಬರಾಗಿದ್ದು, ಗಣೇಶ್ ರಾವ್ ಹಾಗೂ ರಂಗನಾಯಕಮ್ಮನವರ ಮಗನಾಗಿ 1938ರಲ್ಲಿ ಶಿವಮೊಗ್ಗ ಜಿಲ್ಲೆಯ ನಗರ ಗ್ರಾಮದಲ್ಲಿ ಜನಿಸಿದರು. ಇವರ ತಾತ ಶಾಮಣ್ಣನವರು ಸಂಗೀತದಲ್ಲಿ ಘನ ವಿದ್ವಾಂಸರು.

ಅವರ ಬಳಿಯಲ್ಲಿಯೇ ಸುಬ್ಬಣ್ಣನವರು ತಮ್ಮ ಪ್ರಾಥಮಿಕ ಸಂಗೀತಾಭ್ಯಾಸ ಆರಂಭಿಸಿದ್ದರು. ಇವರೊಂದಿಗೆ ಹೆಸರಾಂತ ಗಾಯಕಿ ಕರ್ನಾಟಕದ ಕೋಗಿಲೆ ಬಿ.ಕೆ. ಸುಮಿತ್ರಾ ಅವರೂ ಸೇರಿ ಕೆಲವು ವರ್ಷಗಳ ಕಾಲ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದ್ದರು. ನಂತರ ತಮ್ಮ ವ್ಯಾಸಂಗದ ಕಡೆ ಗಮನ ಹರಿಸಿದ ಸುಬ್ಬಣ್ಣನವರು ಬಿ.ಎ., ಬಿ.ಕಾಂ., ಎಲ್‍ಎಲ್‍ಬಿ., ಪದವಿ ಪಡೆದಿದ್ದರು. ವಕೀಲರಾಗಿ ವೃತ್ತ್ತಿ ಬದುಕು ಆರಂಭಿಸಿದ ಅವರು ಬಳಿಕ ನೋಟರಿಯಾಗಿ ನೇಮಕಗೊಂಡರು. ಜೊತೆಜೊತೆಗೇ ಸಂಗೀತ, ಗಾಯನದಲ್ಲಿಯೂ ತೊಡಗಿಸಿಕೊಂಡರು.

ಜನಪ್ರಿಯ ಗಾಯಕರಾಗಿ ಹಲವಾರು ಪ್ರಶಸ್ತಿ ಪಡೆದು, ಹಾಡಿನ ಸುಬ್ಬಣ್ಣ ಎಂದೆನಿಸಿಕೊಂಡಿದ್ದರು. 1963ರಲ್ಲಿ ಆಕಾಶವಾಣಿಯ ಗಾಯಕರಾಗಿಯೂ ಆಯ್ಕೆಯಾದರು. ಹಿನ್ನೆಲೆ ಗಾಯಕರಾಗಿ ಚಿತ್ರರಂಗ ಪ್ರವೇಶಿಸಿ, ಕಾಡುಕುದುರೆ ಚಿತ್ರದ ಗೀತೆಗಾಗಿ ರಜತಕಮಲ ಪ್ರಶಸ್ತಿ ಸ್ವೀಕರಿಸಿದರು. ರಾಜ್ಯ ಚಲನಚಿತ್ರ ಪ್ರಶಸ್ತಿಯ ಆಯ್ಕೆ ಸಮಿತಿಯ ಸದಸ್ಯರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು.  

ಪ್ರಶಸ್ತಿಗಳು: 1985ರಲ್ಲಿ ರಾಜ್ಯೋತ್ಸವ ಪುರಸ್ಕಾರ, 1979ರಲ್ಲಿ ರಜತ ಕಮಲ ಪ್ರಶಸ್ತಿ,  1988ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಪುರಸ್ಕಾರ, 1999ರಲ್ಲಿ ಸಂತ ಶಿಶುನಾಳ ಷರೀಫ್ ಪ್ರಶಸ್ತಿ, 2008ರಲ್ಲಿ ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ, 2003ರಲ್ಲಿ ಬೆಂಗಳೂರು ಗಾಯನ ಸಮಾಜದಿಂದ ವರ್ಷದ ಕಲಾವಿದ. 

ಗಣ್ಯರಿಂದ ಸಂತಾಪ: ಕರ್ನಾಟಕ ಸುಗಮ ಸಂಗೀತದ ಪ್ರಸಿದ್ಧ ಗಾಯಕರಾಗಿದ್ದ ಶಿವಮೊಗ್ಗ ಸುಬ್ಬಣ್ಣ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವ ಡಾ.ಸಿ.ಅಶ್ವತ್ಥನಾರಾಯಣ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.   

''ಕನ್ನಡ ಕಲಾ ಕ್ಷೇತ್ರಕ್ಕೆ ತುಂಬಲಾರದ ನಷ್ಟ''

ಕನ್ನಡ ಭಾವಗೀತೆಗಳಿಗೆ ಜೀವತುಂಬಿದ, ಕನ್ನಡದ ಮೊದಲ ರಜತ ಕಮಲ ಪ್ರಶಸ್ತಿಗೆ ಭಾಜನರಾದ ಅಪ್ರತಿಮ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರ ಅಗಲಿಕೆ ಕನ್ನಡ ಕಲಾ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

''ಹಾಡುಗಳ ಮೂಲಕ ಸುಬ್ಬಣ್ಣನವರು ಜೀವಂತ''

ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರ ನಿಧನದಿಂದ ಸಂಗೀತ ಲೋಕ ಮತ್ತು ಕನ್ನಡಿಗರಾದ ನಾವೆಲ್ಲರೂ ಸಿರಿಕಂಠವೊಂದನ್ನು ಕಳೆದುಕೊಂಡಿದ್ದೇವೆ. ಸುಬ್ಬಣ್ಣ ಅವರು ಹಾಡುಗಳ ಮೂಲಕ ನಮ್ಮೊಳಗೆ ಸದಾ ಜೀವಂತವಾಗಿರುತ್ತಾರೆ. ಅವರ ಕುಟುಂಬ ಮತ್ತು ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.

ಸುಬ್ಬಣ್ಣನವರ ನಿಧನದಿಂದ ತೀವ್ರ ದುಃಖವಾಗಿದೆ: ಪ್ರಧಾನಿ ನರೇಂದ್ರ ಮೋದಿ

ಖ್ಯಾತ ಗಾಯಕರಾಗಿದ್ದ ಶಿವಮೊಗ್ಗ ಸುಬ್ಬಣ್ಣ ಅವರು ಕನ್ನಡ ಹಾಡುಗಳು ಮತ್ತು ಸಂಗೀತಾಭಿಮಾನಿಗಳ ಮನೆಮಾತಾಗಿದ್ದರು. ಅವರ ಹಾಡುಗಳು ಅಪಾರ ಮೆಚ್ಚುಗೆ ಪಡೆದಿವೆ ಮತ್ತು ಕನ್ನಡ ಕಾವ್ಯದ ಮುತ್ತುಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನಗಳಾಗಿವೆ. ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News