ರಾಷ್ಟ್ರಧ್ವಜದ ವಿಲೇವಾರಿಗೂ ಧ್ವಜ ಸಂಹಿತೆ ಕಡ್ಡಾಯ ಪಾಲಿಸಿ: ಸೇವಾದಳ

Update: 2022-08-12 14:41 GMT

ಉಡುಪಿ, ಆ.12: ದೇಶದ ೭೫ನೇ ಸ್ವಾತಂತ್ರ್ಯ ಮಹೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಆ.೧೩ರಿಂದ ೧೫ರವರೆಗೆ ದೇಶಾದ್ಯಂತ ನಡೆಯುವ   ಹರ್‌ಘರ್ ತಿರಂಗ ಕಾರ್ಯಕ್ರಮದಲ್ಲಿ ಮನೆ ಮನೆಗಳಲ್ಲಿ ಹಾರಿಸುವ ರಾಷ್ಟ್ರಧ್ವಜದ ವಿಲೇವಾರಿಗೂ ಕಟ್ಟುನಿಟ್ಟಿನ ಧ್ವಜ ಸಂಹಿತೆ ಅನ್ವಯಿಸಲಿದ್ದು, ಪ್ರತಿಯೊಬ್ಬ ಪ್ರಜೆಯೂ ಅದನ್ನು ಪಾಲಿಸಬೇಕಾಗುತ್ತದೆ ಎಂದು ಭಾರತ ಸೇವಾದಳದ ಉಡುಪಿ ಜಿಲ್ಲಾ ಸಮಿತಿಯ ಅಧ್ಯಕ್ಷ ಅಂಡಾರು ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಧ್ವಜದ ಆರೋಹಣ, ಅವರೋಹಣ, ಶೋಕಾಚರಣೆ, ವಿಲೇವಾರಿಯೂ ಸೇರಿದಂತೆ ಯಾವುದೇ ಸಂದರ್ಭದಲ್ಲೂ ಯಾವುದೇ ರೀತಿಯ ಅಪಚಾರ, ಅಪಮಾನವಾದರೆ ೨೦೦೨ರಿಂದ ಐಪಿಸಿ ಸೆಕ್ಷನ್ ಅಡಿ ಶಿಕ್ಷೆಯನ್ನು ನಿಗದಿ ಪಡಿಸಲಾಗಿದೆ ಎಂದರು.

ರಾಷ್ಟ್ರಧ್ವಜದ ವಿಲೇವಾರಿಗೆ ನಿರ್ದಿಷ್ಟ ನಿಯಮಗಳಿದ್ದು, ಯಾರೂ ಎಲ್ಲೆಂದರಲ್ಲಿ, ತಮಗೆ ತೋಚಿದ ರೀತಿಯಲ್ಲಿ ವಿಲೇವಾರಿ ಮಾಡುವಂತಿಲ್ಲ. ಪ್ರತಿವರ್ಷ ಎಪ್ರಿಲ್ ೭ರಿಂದ ೧೪ರವರೆಗೆ ಪಂಜಾಬ್‌ನ ಜಲಿಯನ್‌ವಾಲ್ ಭಾಗ್‌ನಲ್ಲಿ ನಡೆಯುವ ರಾಷ್ಟ್ರೀಯ ಸಪ್ತಾಹದ ಸಂದರ್ಭದಲ್ಲಿ ಮಾತ್ರ ಮೃತದೇಹವೊಂದಕ್ಕೆ ಅಂತಿಮ ಸಂಸ್ಕಾರ ನಡೆಯುವ ರೀತಿಯಲ್ಲೇ ಕಾನೂನು ಬದ್ಧವಾಗಿ, ಸರಕಾರಿ ಗೌರವಗಳೊಂದಿಗೆ ದೇಶದ ಎಲ್ಲಾ ಕಡೆಗಳಿಂದಲೂ ಸಂಗ್ರಹಿಸಿದ ರಾಷ್ಟ್ರಧ್ವಜಗಳನ್ನು ವಿಲೇವಾರಿ ಮಾಡಲಾಗುತ್ತದೆ ಎಂದು ಕೇಂದ್ರ ಸಮಿತಿಯ ಸದಸ್ಯ ಆರೂರು ತಿಮ್ಮಪ್ಪ ಶೆಟ್ಟಿ ವಿವರಿಸಿದರು.

ಆದುದರಿಂದ ಆ.೧೩ರಿಂದ ೧೫ರವರೆಗೆ ಮನೆಮನೆಗಳಲ್ಲಿ ಹಾರಿಸಿದ ರಾಷ್ಟ್ರಧ್ವಜ ಗಳನ್ನು ಕಂಡಕಂಡ ಕಡೆ ಎಸೆಯದೇ, ಮನೆಯಲ್ಲಿ ಜಾಗೃತೆಯಾಗಿ ತೆಗೆದಿರಿಸ ಬೇಕು. ಅದನ್ನು ವಿಲೇವಾರಿ ಮಾಡಬೇಕೆಂದಿದ್ದರೆ ಧ್ವಜವನ್ನು ಸೇವಾದಳದ ಉಡುಪಿ ಜಿಲ್ಲಾ ಸಮಿತಿಯ ಕಚೇರಿಗೆ ತಂದು ಒಪ್ಪಿಸಬಹುದು. ಅಜ್ಜರಕಾಡಿನ  ಜಿಲ್ಲಾ ಕ್ರೀಡಾಂಗಣದಲ್ಲಿರುವ ರೂಂ ನಂ.೪ರಲ್ಲಿ ಸೇವಾದಳದ ಕಚೇರಿ ಇದ್ದು, ಅಲ್ಲಿಗೆ ತಂದು ಒಪ್ಪಿಸಬಹುದು. ರಾಷ್ಟ್ರದ ಧ್ವಜದ ವಿಲೇವಾರಿಯನ್ನು ಬೇರೆಲ್ಲೂ ಮಾಡುವಂತಿಲ್ಲ ಎಂದರು.

ರಾಷ್ಟ್ರಧ್ವಜದ ಆರೋಹಣ ಹಾಗೂ ಅವರೋಹಣಕ್ಕೂ ನಿರ್ದಿಷ್ಟ ನಿಯಮ ಗಳಿದ್ದು, ಭಾರತ ಸೇವಾದಳದ ಜಿಲ್ಲಾ ಸಮಿತಿ ಜಿಲ್ಲೆಯಾದ್ಯಂತ ಕಾರ್ಯಾಗಾರ ಗಳನ್ನು ಹಮ್ಮಿಕೊಂಡು, ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ, ತಾಲೂಕುಗಳ ತಹಶೀಲ್ದಾರ್, ಇಓಗಳು, ವಿವಿಧ ಹಂತದ ಜನಪ್ರತಿನಿಧಿಗಳಿಗೆ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಂಚಾಯತ್ ಸಿಬ್ಬಂದಿಗಳಿಗೆ ಧ್ವಜಾರೋಹಣದ ವೇಳೆ ಅನುಸರಿಸಬೇಕಾದ  ಕ್ರಮದ ಬಗ್ಗೆ ಪ್ರಾತ್ಯಕ್ಷಿಕೆ, ಧ್ವಜದ ಇತಿಹಾಸ ಸೇರಿದಂತೆ ಸಮಗ್ರ ಮಾಹಿತಿಗಳನ್ನು ನೀಡುತ್ತಿದೆ ಎಂದು ಅಂಡಾರು ದೇವಿಪ್ರಸಾದ್ ಶೆಟ್ಟಿ ಹೇಳಿದರು.

ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ, ಗ್ರಾಪಂ ಮಟ್ಟದಲ್ಲಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ತರಬೇತಿ ನೀಡಿದ್ದು, ಶಾಲಾ-ಕಾಲೇಜುಗಳ ಮಕ್ಕಳಿಗೂ ಧ್ವಜಾರೋಹಣಕ್ಕೆ ಸಂಬಂಧಿಸಿದಂತೆ ಸೂಕ್ತ ಮಾರ್ಗದರ್ಶನವನ್ನು ಪ್ರಾತ್ಯಕ್ಷಿಕೆ ಮೂಲಕ ನೀಡುತಿದ್ದೇವೆ ಎಂದರು.

ಆ.೧೩ರಿಂದ ೧೫ರವರೆಗೆ ಮಾತ್ರ ದಿನದ ೨೪ ಗಂಟೆ ರಾಷ್ಟ್ರಧ್ವಜ ಕಂಬದಲ್ಲಿ  ಹಾರಾಡಬಹುದು. ಆ.೧೫ರ ಸಂಜೆ ಸೂರ್ಯಾಸ್ತಕ್ಕೆ ಮುನ್ನ ಅಂದರೆ 6 ಗಂಟೆಯೊಳಗೆ ಧ್ವಜದ ಅವರೋಹಣವನ್ನು ಎಲ್ಲರೂ ಕಡ್ಡಾಯವಾಗಿ ಮಾಡಬೇಕಿದೆ. ಅನಂತರ ಧ್ವಜ ಕಂಬದಲ್ಲಿ ಹಾರಾಡುವಂತಿಲ್ಲ. ರಾಷ್ಟ್ರಧ್ವಜ ಬೆಳಗ್ಗೆ ೬:೦೦ರಿಂದ ಸಂಜೆ ೬:೦೦ರವರೆಗೆ ಮಾತ್ರ  ಧ್ವಜಕಂಬದಲ್ಲಿ ಹಾರಾಡಬಹುದು. ಅನಂತರ ವಿಶೇಷ ಅನುಮತಿಯ ತಾಣಗಳನ್ನು ಹೊರತುಪಡಿಸಿ ಉಳಿದ ಎಲ್ಲೂ ಹಾರುವಂತಿಲ್ಲ. ಅದನ್ನು ಸೂಕ್ತ ಸಮ್ಮಾನದೊಂದಿಗೆ ಧ್ವಜದಿಂದ ಇಳಿಸಿ ಸೂಕ್ತ ಗೌರವದೊಂದಿಗೆ ಕೊಂಡೊಯ್ಯಬೇಕು ಎಂದು ತಿಮ್ಮಪ್ಪ ಶೆಟ್ಟಿ ತಿಳಿಸಿದರು.

ಅದೇ ರೀತಿ ಶೋಕಾಚರಣೆಯ ಸಂದರ್ಭಗಳಲ್ಲೂ ಅರ್ಧಕ್ಕೆ ದ್ವಜವನ್ನು ಹಾರಿಸುವಲ್ಲಿಯೂ ಅದರದೇ ಆದ ನಿಯಮಗಳಿದ್ದು, ಅದನ್ನು ಪಾಲಿಸಬೇಕು. ಸೇವಾದಳದ ಜಿಲ್ಲಾ ಸಮಿತಿ ಜಿಲ್ಲೆಯಾದ್ಯಂತ ಧ್ವಜ ಸಂಹಿತೆಯ ಕುರಿತು ಜನರಿಗೆ ಮಾಹಿತಿ ನೀಡುವ ಜೊತೆಗೆ ೩೦೦೦ ರಾಷ್ಟ್ರಧ್ವಜವನ್ನು ಉಚಿತವಾಗಿ ಹಂಚಿದೆ. ಆ.೧೬ರ ಬಳಿಕ ರಾಷ್ಟ್ರಧ್ವಜಕ್ಕೆ ಯಾವುದೇ ರೀತಿಯ ಅಗೌರವಸ ಅಪಮಾನ ಆಗದ ಹಾಗೆ ಪ್ರತಿಯೊಬ್ಬರು ಜಾಗೃತೆ ವಹಿಸಬೇಕು ಎಂದವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ತರಬೇತಿಯ ಸಂಪನ್ಮೂಲ ವ್ಯಕ್ತಿ ಆರೂರು ತಿಮ್ಮಪ್ಪ ಶೆಟ್ಟಿ ಅವರಲ್ಲದೇ, ಉಪಾಧ್ಯಕ್ಷ ಗಿರೀಶ್ ಎಂ.ಅಂಚನ್, ಜಿಲ್ಲಾ ಸಂಘಟಕ ಪಕ್ಕೀರಗೌಡ ನಾ.ಹಳೇಮನಿ, ಪುಂಡಲೀಕ ಮರಾಠೆ, ದಿನಕರ ಶೆಟ್ಟಿ, ಗಣೇಶ ಶೆಟ್ಟಿ ಹಾಗೂ ಜಯಲಕ್ಷ್ಮೀ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News