ಉಡುಪಿ: ಆ.14ರಂದು ಬನ್ನಂಜೆ ಮ್ಯೂಸಿಯಂ ಉದ್ಘಾಟನೆ; ಜ್ಞಾನದೇಗುಲ ಪ್ರಶಸ್ತಿ ಪ್ರದಾನ

Update: 2022-08-13 14:53 GMT

ಉಡುಪಿ : ಈಶಾವಾಸ್ಯ ಪ್ರತಿಷ್ಠಾನ ಉಡುಪಿ- ಬೆಂಗಳೂರು ಇದರ ಆಶ್ರಯದಲ್ಲಿ ಬಹುಶ್ರುತ ವಿದ್ವಾಂಸ, ವಿದ್ಯಾವಾಚಸ್ಪತಿ ದಿ. ಬನ್ನಂಜೆ ಗೋವಿಂದಾಚಾರ್ಯರ ಸ್ಮರಣಾರ್ಥ ಅವರ ಸ್ವಗೃಹ ಅಂಬಲಪಾಡಿಯ ಈಶಾವಾಸ್ಯಂನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಡಾ.ಬನ್ನಂಜೆ ಸ್ಮಾರಕ ಅಹಲ್ಯಾ ವಿಜಯಾಂಗಣ ಮ್ಯೂಸಿಯಂ ಉದ್ಘಾಟನೆ ಮತ್ತು ಜ್ಞಾನದೇಗುಲ ಪ್ರಶಸ್ತಿ ಪ್ರದಾನ ಸಮಾರಂಭ ಆ.14ರ ರವಿವಾರ ಸಂಜೆ  5.30ಕ್ಕೆ ನಡೆಯಲಿದೆ.

‘ಹಿರಿಯರ ನೆನಪು-೨೦೨೨’ ಎಂಬ ಶೀರ್ಷಿಯಡಿ ಈ ಕಾರ್ಯಕ್ರಮವನ್ನು ಸಂಯೋಜಿಸಲಾಗಿದೆ.ಕಳೆದ ವರ್ಷ ಈಶಾವಾಸ್ಯಂನಲ್ಲಿ ನವೀಕೃತ ಶ್ರೀಗುರುರಾಯರ ಮೃತ್ತಿಕಾ ವೃಂದಾವನ ಸನ್ನಿಧಿಯ ಸಮರ್ಪಣೋತ್ಸವ ಮತ್ತು ಡಾ.ಬನ್ನಂಜೆಯವರ ಪುತ್ಥಳಿ ಅನಾವರಣಾ ಕಾರ್ಯಕ್ರಮವೂ ನಡೆದಿತ್ತು. ಇದೀಗ ಅಲ್ಲೇ ಡಾ.ಆಚಾರ್ಯರ ಸಾಹಿತ್ಯ ಕೃಷಿ, ಕೃತಿಗಳಿಗೆ ಸಂಬಂಧಿಸಿದ ಮ್ಯೂಸಿಯಂನ್ನು ನಿರ್ಮಿಸಲಾಗಿದೆ. 

ಇದನ್ನು ಡಾ.ಆಚಾರ್ಯರ ಪತ್ನಿ ಅಹಲ್ಯಾ ಆಚಾರ್ಯ ಮತ್ತು ಎರಡು ವರ್ಷಗಳ ಹಿಂದೆ ಅಗಲಿದ ಆಚಾರ್ಯರ ಪುತ್ರ ವಿಜಯಭೂಷಣ ಆಚಾರ್ಯರ ಸ್ಮರಣೆಯಲ್ಲಿ ಅಹಲ್ಯಾ ವಿಜಯಾಂಗಣ ಎಂದು ನಾಮಕರಣಗೊಳಿಸಲಾಗಿದೆ. ಇವುಗಳನ್ನು ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಡಾ. ಬನ್ನಂಜೆ ಪ್ರಾರಂಭಿಸಿದ್ದ ಜ್ಞಾನದೇಗುಲ ಪ್ರಶಸ್ತಿ ಪ್ರದಾನವೂ ನಡೆಯಲಿದ್ದು, ಈ ವರ್ಷದ ಪ್ರಶಸ್ತಿಗೆ ಉಡುಪಿಯ ಶಾಸಕ ಕೆ ರಘುಪತಿ ಭಟ್ ಹಾಗೂ ಇತ್ತೀಚೆಗೆ ತಮ್ಮ ೭೫ರ ಹರೆಯದಲ್ಲಿ ಮಾಧ್ವ ತತ್ತ್ವಶಾಸ್ತ್ರದ ಕುರಿತು ಸಂಶೋಧನಾತ್ಮಕ ಪ್ರಬಂಧ ಮಂಡಿಸಿ ಪಿಎಚ್‌ಡಿ ಪಡೆದ  ಡಾ.ಉಷಾ ಚಡಗ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಢಾನದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News