ಸ್ವಾತಂತ್ರ್ಯಕ್ಕೆ ತುಳುನಾಡ ಕೊಡುಗೆಯೂ ಅಪಾರ: ಶ್ರೀಕಾಂತ್ ಶೆಟ್ಟಿ

Update: 2022-08-13 16:56 GMT

ಬಂಟ್ವಾಳ, ಆ.13: ದೇಶದ ಸ್ವಾತಂತ್ರ್ಯಕ್ಕಾಗಿ ಸ್ವಾಭಿಮಾನದ ತುಳುನಾಡಿನಲ್ಲಿ ಅನೇಕ ಸಾಹಸದ ಹೋರಾಟ ಗಳು ನಡೆದಿದ್ದು ಉಳ್ಳಾಲದ ಅಬ್ಬಕ್ಕ, ಕೊಡಗಿನ ವೀರರಾಜರು ನಡೆಸಿದ ಹೋರಾಟಗಳನ್ನು ಎಂದಿಗೂ ಮರೆಯುವಂತಿಲ್ಲ ಎಂದು ಪತ್ರಕರ್ತ ಶ್ರೀಕಾಂತ ಶೆಟ್ಟಿ ಹೇಳಿದರು. 

ಸ್ವಾತಂತ್ರ್ಯದ ಅಮೃತೋತ್ಸವದ ಅಂಗವಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ನಡೆದ ಶನಿವಾರ ಬಂಟರ ಭವನದಲ್ಲಿ ನಡೆದ 'ಅಮೃತಭಾರತಿಗೆ ಗಾನ‌ನುಡಿಯ ದೀವಿಗೆ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತುಳುನಾಡಿನಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ಚರಿತ್ರೆ ಯಾವ ಪಠ್ಯ ಪುಸ್ತಕದಲ್ಲೂ ಇಲ್ಲ. ಸ್ವಾತಂತ್ರ್ಯಕ್ಕೆ ತುಳುನಾಡ ಹೋರಾಟಗಾರರು ಮಾಡಿದ ತ್ಯಾಗ ಬಲಿದಾನದ ಕುರಿತಾಗಿ ವಿದ್ಯಾರ್ಥಿ ಸಮೂಹಕ್ಕೆ ಅರಿವು ಮೂಡಿಸುವ ಕಾರ್ಯ ನಡೆಯಬೇಕಿದೆ ಎಂದರು.

ಬ್ರಿಟೀಷರ‌ ವಿರುದ್ಧ ಹೋರಾಟದಲ್ಲಿ ಕರಾವಳಿಯ ಅನೇಕ‌ ಕಲಿಗಳು ಭಾಗವಹಿಸಿದ್ದು 1830 ಆಸುಪಾಸಿನಲ್ಲಿ ಉಳ್ಳಾಲದಲ್ಲಿ ರಾಣಿ ಅಬ್ಬಕ್ಕ ನಡೆಸಿದ ಹೋರಾಟ ಹಾಗೂ ಕೊಡಗು ಸುಳ್ಯದಲ್ಲಿ ನಡೆದ ಅಮರ ಸುಳ್ಯ ಕ್ರಾಂತಿ‌ ದಂಗೆಯ ವೀರರಾಜರು ರಾಮೇಗೌಡ, ನಂದಾವರದ ಬಂಗರಸರು, ಉಪ್ಪಿನಂಗಡಿಯ ಮಂಜ ಇವರೆಲ್ಲರ ಶ್ರಮವನ್ನು ತುಳುನಾಡು ಎಂದಿಗೂ ಮರೆಯಬಾರದು ಎಂದರು.

ಸಭಾ ಕಾರ್ಯಕ್ರಮಕ್ಕೆ ಮುನ್ನ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ರಾಜೇಶ್ ನಾಯ್ಕ್, ದ.ಕ. ಎಸ್ಪಿ ಹೃಷಿಕೇಶ್ ಸೊನಾವಣೆ, ಬಂಟ್ವಾಳ ತಹಶಿಲ್ದಾರ್ ಸ್ಮಿತಾರಾಮು, ಇ.ಒ.ರಾಜಣ್ಣ, ಪ್ರಮುಖರಾದ ಪದ್ಮನಾಭ ಕೊಟ್ಟಾರಿ, ರುಕ್ಮಯ ಪೂಜಾರಿ, ಸುದರ್ಶನ್, ಕಸ್ತೂರಿ ಪಂಜ, ಹರಿಕೃಷ್ಣ ಬಂಟ್ವಾಳ, ದೇವಪ್ಪ ಪೂಜಾರಿ, ಪ್ರತಾಪ್‌ ಸಿಂಹ ನಾಯಕ್, ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಬಿ.ಸಿ.ರೋಡಿನಿಂದ ಬ್ರಹ್ಮರಕೂಟ್ಲು ವರೆಗೆ ಆಕರ್ಷಕ ಮೆರವಣಿಗೆ ನಡೆಯಿತು. ಮೆರವಣಿಗೆಗೆ ಶಾಸಕ ರಾಜೇಶ್ ನಾಯ್ಕ್ ತ್ರಿವರ್ಣ ಬಲೂನ್ ಹಾರಿ ಬಿಡುವ ಮೂಲಕ ಚಾಲನೆ ನೀಡಿದರು. 

ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News