ಈದ್ಗಾ ಗೋಡೆ ಸೇರಿದಂತೆ ಯಾವುದೇ ಕಟ್ಟಡಗಳಿಗೆ ಧಕ್ಕೆಯಾಗುವುದಿಲ್ಲ: ಆರ್. ಅಶೋಕ್

Update: 2022-08-13 17:07 GMT

ಬೆಂಗಳೂರು, ಆ.13: ಚಾಮರಾಜಪೇಟೆಯ ಮೈದಾನದಲ್ಲಿರುವ ಈದ್ಗಾ ಗೋಡೆ ಸೇರಿದಂತೆ ಯಾವುದೇ ಕಟ್ಟಡಗಳಿಗೆ ಧಕ್ಕೆಯಾಗುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಶನಿವಾರ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಸಂಬಂಧ ಸಿದ್ಧತೆ ಕುರಿತು ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕೆಲ ಹಿಂದೂ ಸಂಘಟನೆಗಳು ಇಲ್ಲಿನ ಈದ್ಗಾ ಗೋಡೆ ನೆಲಸಮ ಮಾಡುವ ಬೇಡಿಕೆಯಿಟ್ಟಿದ್ದಾರೆ. ಆದರೆ, ಈ ರೀತಿಯ ಯಾವುದೇ ಪ್ರಕ್ರಿಯೆ ನಡೆಯುವುದಿಲ್ಲ. ಇಲ್ಲಿನ ಅರಳಿಮರ, ಬಿಬಿಎಂಪಿ ಕಟ್ಟಡ, ಈದ್ಗಾ ಗೋಡೆ ಸೇರಿದಂತೆ ಎಲ್ಲವೂ ಹಾಗೇ ಇರಲಿದೆ. ಜತೆಗೆ, ಪೊಲೀಸ್ ಬಂದೋಬಸ್ತ್ ಸಹ ಮುಂದುವರೆಸಲಾಗಿದೆ ಎಂದರು.

ಆ.15 ರಂದು ಮೈದಾನ ಧ್ವಜಾರೋಹಣ ಮಾಡಲಿದ್ದು, ಸಂಸದ ಪಿ.ಸಿ.ಮೋಹನ್, ಶಾಸಕ ಝಮೀರ್ ಅಹ್ಮದ್ ಖಾನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಉತ್ತರ ವಿಭಾಗದ ಎಸಿ ಡಾ.ಶಿವಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಪೊಲೀಸ್ ಪಥಸಂಚಲನ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಇಲ್ಲಿ ಸ್ವಾತಂತ್ರ್ಯ ದಿನಾಚರಣೆ ಮಾಡುವುದು ಯಾರದ್ದೋ ವೈಯಕ್ತಿಕ ಸಮಸ್ಯೆ ಅಲ್ಲ. ಬದಲಾಗಿ, ದೇಶದ ಘನತೆಯ ಪ್ರಶ್ನೆ. ಎಲ್ಲರೂ ಕೂಡ ಭಾಗಿಯಾಗಿ ಈ ಅಮೃತ ಮಹೋತ್ಸವ ಆಚರಣೆಯನ್ನು ಸಂಭ್ರಮದಿಂದ ಮಾಡಬೇಕಾಗಿದೆ ಎಂದು ಕರೆ ನೀಡಿದರು. 

ಬಿಗಿ ಭದ್ರತೆ
ಚಾಮರಾಜಪೇಟೆ ಈದ್ಗಾ ಮೈದಾನ ಸೂಕ್ಷ್ಮ ಪ್ರದೇಶವಾಗಿರುವ ಹಿನ್ನೆಲೆ ನಾವು ಪೊಲೀಸ್ ಭದ್ರತೆ ಹೆಚ್ಚಿಸಿದ್ದೇವೆ. ಅಗತ್ಯ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಬಿಗಿ ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News