ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ಭಿತ್ತಿಚಿತ್ರಕ್ಕೆ ಹಾನಿ ಘಟನೆಯಿಂದ ಮನಸ್ಸಿಗೆ ನೋವಾಗಿದೆ: ಡಿಕೆ ಶಿವಕುಮಾರ್

Update: 2022-08-14 07:45 GMT

ಬೆಂಗಳೂರು : ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ಅವರ ಕಟ್ ಔಟ್ ಅನ್ನು ಕಿಡಿಗೇಡಿಗಳು ನಾಶ ಮಾಡಿರುವುದು ಮನಸ್ಸಿಗೆ ನೋವು ತಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ತಿಳಿಸಿದ್ದಾರೆ.

ಸರ್ಕಾರದ ಪುರಾತತ್ವ ಇಲಾಖೆ ಅಡಿಯಲ್ಲಿ ಟಿಪ್ಪು ಸುಲ್ತಾನ್ ಅರಮನೆ ಇದೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿಶೇಷ ಅಲಂಕಾರ ಮಾಡಿ ಆಚರಣೆ ಮಾಡಲಾಗುತ್ತಿದೆ. ಆ ಮೂಲಕ ಕೇಂದ್ರ ಸರ್ಕಾರ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಟ ಮಾಡಿದವರಿಗೆ ಗೌರವ ನೀಡುತ್ತಿದೆ. ಆದರೂ ಈ ರೀತಿ ಘಟನೆಗಳು ನಡೆಯುತ್ತಿರುವುದು ಮನಸ್ಸಿಗೆ ನೋವು ತಂದಿದೆ ಎಂದು ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಪೊಲೀಸ್ ಅಧಿಕಾರಿಗಳು ಇದ್ದರೂ ಅದನ್ನು ಹರಿದಿದ್ದಾರೆ. ಈ ವಿಚಾರವಾಗಿ ಪೊಲೀಸ್ ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ಅವರು ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಈ ಕೃತ್ಯ ಯಾರು ಎಸಗಿದ್ದಾರೆ ಎನ್ನುವುದು ನಮಗೆ ಗೊತ್ತಿದೆ. ಕೂಡಲೇ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ದೇಶದ ಪಾಲಿನ ಸಂಭ್ರಮದ ಸಂದರ್ಭ. ಈ ಸಮಯದಲ್ಲಿ ನಾವು ಶಾಂತಿ ಕಾಪಾಡಬೇಕು. ಕೆಲ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ ಎಂದು ನಾವು ವಿಚಲಿತರಾಗಬಾರದು. ಟಿಪ್ಪು ಅವರ ಸ್ಮರಣೆ ಅಲ್ಪಸಂಖ್ಯಾತರ ಓಲೈಕೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, 'ಸ್ವಾತಂತ್ರ್ಯಕ್ಕಾಗಿ ಎಲ್ಲಾ ಸಮುದಾಯದವರೂ ಹೋರಾಟ ಮಾಡಿದ್ದಾರೆ. ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವ ವಿಚಾರ ಹೋರಾಟಗಾರರಲ್ಲಿ ಇತ್ತು, ಜಾತಿ ಧರ್ಮದ ವಿಚಾರ ಅಲ್ಲ ಎಂದು ಹೇಳಿದರು.

ಈ ವಿಚಾರವಾಗಿ ದೂರು ದಾಖಲಿಸಿದ್ದೀರಾ ಎಂಬ ಪ್ರಶ್ನೆಗೆ, 'ನಾವು ದೂರು ನೀಡುವ ಅಗತ್ಯವಿಲ್ಲ. ಸ್ಥಳದಲ್ಲೇ ಪೊಲೀಸರು ಇದ್ದರು.  ಅವರು ಕ್ರಮ ಕೈಗೊಳ್ಳಬೇಕು' ಎಂದು ಡಿಕೆ ಶಿವಕುಮಾರ್‌ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News