ರಾಷ್ಟ್ರಧ್ವಜದ ಗೌರವ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ: ಕ್ಯಾಪ್ಟನ್ ನವೀನ್ ನಾಗಪ್ಪ

Update: 2022-08-14 09:26 GMT

ಬೆಂಗಳೂರು: ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ನಾವೆಲ್ಲರೂ ಆಚರಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ‘ಹರ್ ಘರ್ ತಿರಂಗಾ’ (ಪ್ರತಿ ಮನೆಗೂ ರಾಷ್ಟ್ರಧ್ವಜ) ಅಭಿಯಾನ ಘೊಷಿಸಿದ್ದಾರೆ ಎಂದು ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ಯೋಧ ಕ್ಯಾಪ್ಟನ್ ನವೀನ್ ನಾಗಪ್ಪ ಹೇಳಿದರು.

ಶುಕ್ರವಾರ ನಗರದ ಮತ್ತೀಕೆರೆಯಲ್ಲಿರುವ ಮಸ್ಜಿದ್-ಎ-ತಾಹ ಆಡಳಿತ ಮಂಡಳಿ ಹಾಗೂ ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ‘ಅಮೃತ ಮಹೋತ್ಸವ-ಸ್ವಾತಂತ್ರ್ಯ ನಡಿಗೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರಧ್ವಜದ ಗೌರವ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಈ ಧ್ವಜದ ಅಡಿಯಲ್ಲಿ ನಮ್ಮ ದೇಶದ ಸ್ವಾಭಿಮಾನ ಅಡಗಿದೆ. ಮಸ್ಜಿದ್-ಎ-ತಾಹ ದಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವುದು ನಿಜಕ್ಕೂ ಸಂತಸದ ವಿಚಾರ. ದೇಶದ ಸ್ವಾತಂತ್ರ್ಯಕ್ಕಾಗಿ ಪ್ರತಿಯೊಂದು ಧರ್ಮದವರೂ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ ಎಂದು ಅವರು ಹೇಳಿದರು.

ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಬಾಂಬ್ ಸ್ಫೋಟದಿಂದಾಗಿ ನನ್ನ ಎರಡು ಕಾಲುಗಳು ಗಂಭೀರವಾಗಿ ಗಾಯಗೊಂಡಿವೆ. ಯುದ್ಧ ನಡೆಯುವಾಗ ನಾನು ಸಮುದ್ರಮಟ್ಟದಿಂದ 16 ಸಾವಿರ ಅಡಿ ಮೇಲಿನ ಪ್ರದೇಶದಲ್ಲಿದ್ದೆ. ಗಾಯಗೊಂಡಿದ್ದ ನನ್ನನ್ನು ಚಿಕಿತ್ಸೆಗಾಗಿ ಶ್ರೀನಗರಕ್ಕೆ ಕರೆದುಕೊಂಡು ಹೋಗುವಾಗ ನಮಗೆ ನಿಗದಿಪಡಿಸಿದ್ದ ಪ್ರದೇಶವನ್ನು ನಮ್ಮ ಸೇನೆ ವಶಪಡಿಸಿಕೊಂಡು ಅಲ್ಲಿ ರಾಷ್ಟ್ರಧ್ವಜ ಹಾರಿಸಿತು. ಆ ಕ್ಷಣ ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ನವೀನ್ ನಾಗಪ್ಪ ಭಾವುಕರಾದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ವಿಮರ್ಶಕ ಮುಹಮ್ಮದ್ ಆಝಮ್ ಶಾಹೀದ್, ದೇಶವು ಸ್ವತಂತ್ರವಾಗಿ 75 ವರ್ಷಗಳಾಗುತ್ತಿದೆ. ಈ ಅವಧಿಯಲ್ಲಿ ನಮ್ಮ ದೇಶವು ಹಲವಾರು ರಂಗಗಳಲ್ಲಿ ಅಪ್ರತಿಮ ಸಾಧನೆಯನ್ನು ಮಾಡಿದೆ. ಈ ಸ್ವಾತಂತ್ರ್ಯಕ್ಕಾಗಿ ನಮ್ಮ ಪೂರ್ವಜರು ತಮ್ಮ ತನು, ಮನ, ಧನ ಎಲ್ಲವನ್ನೂ ತ್ಯಾಗ ಮಾಡಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ಮಹಮ್ಮದೀಯರ ವೇದಿಕೆಯ ಅಧ್ಯಕ್ಷ ಕನ್ನಡ ಸಮೀವುಲ್ಲಾ ಖಾನ್ ಮಾತನಾಡಿ, ದೇಶಕ್ಕಾಗಿ ಹೋರಾಡಿದಂತಹ ಓರ್ವ ಯೋಧನನ್ನು ಕರೆದು ಕಾರ್ಯಕ್ರಮ ಉದ್ಘಾಟಿಸಿದ್ದೇವೆ ಎಂದರು.

ಸಮಾಜದಲ್ಲಿ ಪ್ರತಿಯೊಬ್ಬರೂ ಶಾಂತಿ, ಸೌಹಾರ್ದತೆಯಿಂದ ಬಾಳಬೇಕು ಎಂಬುದು ನಮ್ಮ ಆಶಯ. ಈ ಹಿನ್ನೆಲೆಯಲ್ಲಿ ಮಸೀದಿಯಲ್ಲಿ ಸರ್ವ ಧರ್ಮದ ಮುಖಂಡರನ್ನು ಆಹ್ವಾನಿಸಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ. ಇದರಿಂದಾಗಿ, ಸಮಾಜದಲ್ಲಿ ಸೌಹಾರ್ದತೆಯ ಸಂದೇಶ ನೀಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಈ ಸಂದರ್ಭ ಅಖಿಲ ಕರ್ನಾಟಕ ಮಹಮ್ಮದೀಯರ ವೇದಿಕೆಯ ಪದಾಧಿಕಾರಿಗಳು, ಮಸ್ಜಿದ್-ಎ-ತಾಹ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News