ಮಂಗಳೂರು ವಿಮಾನ ನಿಲ್ದಾಣದಲ್ಲಿ ಮೊಬೈಲ್ ಚಾಟಿಂಗ್; ಮುಂಬೈ ವಿಮಾನ ಯಾನ ರದ್ದುಗೊಳಿಸಿ ಯುವಕ-ಯುವತಿಯ ತೀವ್ರ ವಿಚಾರಣೆ

Update: 2022-08-14 13:10 GMT

ಮಂಗಳೂರು, ಆ.14: ಮಂಗಳೂರು ವಿಮಾನ ನಿಲ್ದಾಣದಲ್ಲಿ ಯುವಕ ಮತ್ತು ಯುವತಿ ಪರಸ್ಪರ ಚಾಟಿಂಗ್ ಮಾಡುತ್ತಿದ್ದ ಬಗ್ಗೆ ಪ್ರಯಾಣಿಕರೊಬ್ಬರು ಸಂಶಯಗೊಂಡು ದೂರಿದ ಪರಿಣಾಮ ಮುಂಬೈಗೆ ತೆರಳುವ ವಿಮಾನ ಯಾನವನ್ನು ರದ್ದುಗೊಳಿಸಿದ ವಿದ್ಯಮಾನ ರವಿವಾರ ಮಧ್ಯಾಹ್ನ ನಡೆದಿದೆ.

ಯುವಕ ಮತ್ತು ಯುವತಿ ವಿಮಾನ ನಿಲ್ದಾಣದಲ್ಲಿ ಮೊಬೈಲ್‌ನಲ್ಲಿ ಚಾಟ್ ಮಾಡುತ್ತಿದ್ದುದನ್ನು ಗಮನಿಸಿದ ಪ್ರಯಾಣಿಕನೋರ್ವ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದರು. ಅವರು ಅಧಿಕಾರಿಗಳಿಗೆ ಮಾಹಿತಿ ನೀಡಿದ ತಕ್ಷಣ ಮುಂಬೈಗೆ ತೆರಳುವ ವಿಮಾನದ ಸಂಚಾರವನ್ನು ಮೊಟಕುಗೊಳಿಸಲಾಯಿತು. ಅಲ್ಲದೆ ಪ್ರಯಾಣಿಕರನ್ನು ಕೆಳಗಿಳಿಸಿಕೊಂಡು ವಿಮಾನವನ್ನು ತೀವ್ರ ತಪಾಸಣೆಗೆ ಒಳಪಡಿಸಲಾಯಿತು ಎಂದು ತಿಳಿದು ಬಂದಿದೆ.

ಯುವತಿ ಬೆಂಗಳೂರಿಗೆ ಮತ್ತು ಯುವಕ ಮುಂಬೈಗೆ ತೆರಳಲು ಸಿದ್ಧತೆ ನಡೆಸುತ್ತಿದ್ದರು ಎನ್ನಲಾಗಿದ್ದು, ಇವರು ಪರಸ್ಪರ ಚಾಟಿಂಗ್ ಮಾಡುತ್ತಿದ್ದ ಬಗ್ಗೆ ಪ್ರಯಾಣಿಕರೊಬ್ಬರು ಸಂಶಯಗೊಂಡು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಜ್ಪೆ ಇನ್‌ಸ್ಪೆಕ್ಟರ್ ಪ್ರಕಾಶ್ ‘ಇಂತಹ ಘಟನೆಯ ಹಿನ್ನೆಲೆಯಲ್ಲಿ ವಿಮಾನ ಯಾನವನ್ನು ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ. ನಮಗಿನ್ನೂ ಅಧಿಕೃತ ದೂರು ಬಂದಿಲ್ಲ. ಸದ್ಯ ಯುವಕ-ಯುವತಿ ಭದ್ರತಾ ಸಿಬ್ಬಂದಿ ಅಧಿಕಾರಿಗಳು ವಶದಲ್ಲಿದ್ದಾರೆ. ದೂರು ಬಂದ ಬಳಿಕ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News