ಮಂಗಳೂರು ವಿಮಾನ ನಿಲ್ದಾಣದಲ್ಲಿ ಮೊಬೈಲ್ ಚಾಟಿಂಗ್; ರದ್ದುಗೊಂಡಿದ್ದ ವಿಮಾನ ಮತ್ತೆ ಮುಂಬೈಗೆ ಯಾನ

Update: 2022-08-14 16:53 GMT

ಮಂಗಳೂರು: ವಿಮಾನ ನಿಲ್ದಾಣದಲ್ಲಿ ಯುವಕ ಮತ್ತು ಯುವತಿ ಪರಸ್ಪರ ಚಾಟಿಂಗ್ ಮಾಡುತ್ತಿದ್ದ ಬಗ್ಗೆ ಪ್ರಯಾಣಿಕರೊಬ್ಬರು ಸಂಶಯಗೊಂಡು ದೂರಿದ ಪರಿಣಾಮ ಮುಂಬೈಗೆ ತೆರಳುವ ವಿಮಾನ ಯಾನವನ್ನು ರದ್ದುಗೊಳಿಸಿದ ವಿದ್ಯಮಾನ ರವಿವಾರ ಮಧ್ಯಾಹ್ನ ನಡೆದಿದ್ದು, ತೀವ್ರ ವಿಚಾರಣೆಯ ಬಳಿಕ ಮುಂಬೈಗೆ ತೆರಳುವ ವಿಮಾನವು ಸಂಜೆ 5ರ ವೇಳೆಗೆ ಯಾನ ಆರಂಭಿಸಿತು ಎಂದು ಮೂಲಗಳು ತಿಳಿಸಿವೆ.

ಆತಂಕ ಸೃಷ್ಟಿಸಿದ ಯುವಕನನ್ನು ದೀಪ್ಯಾನ್ ಮಾಂಜಿ (23) ಹಾಗೂ ಯುವತಿಯನ್ನು ಸಿಮ್ರಾನ್ ಬಾವನ್ (23) ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯುವಕ ಉತ್ತರ ಪ್ರದೇಶದ ಗಾಝಿಯಾಬಾದ್ ನಗರದವನು.

ಘಟನೆಯ ವಿವರ: ಸ್ನೇಹಿತರಾಗಿದ್ದ ಯುವಕ ಮುಂಬೈಗೆ ಮತ್ತು ಯುವತಿ ಬೆಂಗಳೂರಿಗೆ ತೆರಳುವ ಸಲುವಾಗಿ ರವಿವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿದ್ದರು. ಪರಸ್ಪರ ಕುಶಲ ಮಾತನಾಡಿದ ಬಳಿಕ ಯುವಕ ಮುಂಬೈಗೆ ತೆರಳಲು ವಿಮಾನ ಹತ್ತಿದ್ದರೆ, ನಿಲ್ದಾಣದಲ್ಲೇ ಕುಳಿತಿದ್ದ ಯುವತಿಯು ವಿಮಾನಕ್ಕಾಗಿ ಕಾಯುತ್ತಿದ್ದಳು ಎನ್ನಲಾಗಿದೆ.

ಮುಂಬೈಗೆ ತೆರಳುವ ವಿಮಾನದಲ್ಲಿದ್ದ ಯುವಕ ಮತ್ತು ವಿಮಾನ ನಿಲ್ದಾಣದಲ್ಲಿ ಯುವತಿ ಪರಸ್ಪರ ಮೊಬೈಲ್‌ನಲ್ಲಿ ಚಾಟ್ ಮಾಡುತ್ತಿದ್ದು, ಯುವಕನ ಸಮೀಪ ಕುಳಿತಿದ್ದ ಪ್ರಯಾಣಿಕರೊಬ್ಬರು ಸಂಶಯಗೊಂಡು ವಿಮಾನ ನಿಲ್ದಾಣದ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ತಕ್ಷಣ ಅಧಿಕಾರಿಗಳು ಮುಂಬೈಗೆ ತೆರಳುವ ವಿಮಾನ ಯಾನವನ್ನು ಮೊಟಕುಗೊಳಿಸಿ ಯುವಕ ಸಹಿತ ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿದರು. ಅಲ್ಲದೆ ಮೊಬೈಲ್ ಮೂಲಕ ಚಾಟಿಂಗ್ ಮಾಡುತ್ತಿದ್ದ ಯುವಕ ಮತ್ತು ಯುವತಿಯನ್ನು ಭದ್ರತಾ ಸಿಬ್ಬಂದಿಗಳು ವಶಕ್ಕೆ ಪಡೆದುಕೊಂಡರಲ್ಲದೆ, ಅಧಿಕಾರಿಗಳು ಇಬ್ಬರನ್ನೂ ತೀವ್ರ ವಿಚಾರಣೆಗೊಳಪಡಿಸಿದರು. ವಿಮಾನವನ್ನೂ ತಪಾಸಣೆಗೆ ಒಳಪಡಿಸಲಾಯಿತು ಎಂದು ತಿಳಿದು ಬಂದಿದೆ.

ಇದನ್ನು ಓದಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಮೊಬೈಲ್ ಚಾಟಿಂಗ್; ಮುಂಬೈ ವಿಮಾನ ಯಾನ ರದ್ದುಗೊಳಿಸಿ ಯುವಕ-ಯುವತಿಯ ತೀವ್ರ ವಿಚಾರಣೆ

ಇದೀಗ ಯುವಕ ಮತ್ತು ಯುವತಿಯು ಭದ್ರತಾ ಸಿಬ್ಬಂದಿಯ ವಶದಲ್ಲಿದ್ದು, ಅವರ ವಿಚಾರಣೆ ಮುಂದುವರಿದಿದೆ. ಆದರೆ ಈ ಯುವಕ ಮತ್ತು ಯುವತಿಯ ಬಗ್ಗೆ ಹೆಚ್ಚಿನ ಮಾಹಿತಿ ಬಂದಿಲ್ಲ. ಸಂಜೆ 5ರ ವೇಳೆಗೆ ಮುಂಬೈಗೆ ತೆರಳುವ ವಿಮಾನ ಯಾನ ಆರಂಭಿಸಿತು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News