ಪಾಕಿಸ್ತಾನಕ್ಕಾಗಿ ಗೂಢಚರ್ಯೆ ನಡೆಸುತ್ತಿದ್ದ ನಾರಾಯಣ ಲಾಲ್, ಕುಲ್ದೀಪ್ ಸಿಂಗ್ ಬಂಧನ

Update: 2022-08-14 14:49 GMT
PHOTO: ANI

ಜೈಪುರ,ಆ.14: ಕೇಂದ್ರೀಯ ಗುಪ್ತಚರ ಸಂಸ್ಥೆಗಳು ನೀಡಿದ ಮಾಹಿತಿಗಳ ಆಧಾರದಲ್ಲಿ ರಾಜಸ್ಥಾನ ಪೊಲೀಸರು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐಗಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ರಾಜ್ಯದ ಭಿಲ್ವಾಡಾ ಮತ್ತು ಪಾಲಿ ಜಿಲ್ಲೆಗಳಲ್ಲಿ ಇಬ್ಬರನ್ನು ಶನಿವಾರ ಬಂಧಿಸಿದ್ದಾರೆ.

ನಾರಾಯಣಲಾಲ್ ಗಾದ್ರಿ (27) ಮತ್ತು ಕುಲ್ದೀಪ್ ಸಿಂಗ್ ಶೇಖಾವತ್ (24) ಬಂಧಿತ ವ್ಯಕ್ತಿಗಳಾಗಿದ್ದು,ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ಐಎಸ್ಐ ಜೊತೆ ಸಂಪರ್ಕದಲ್ಲಿದ್ದರೆಂದು ಆರೋಪಿಸಲಾಗಿದೆ.

ರಾಜಸ್ಥಾನ ಪೊಲೀಸರು ಗುರುವಾರ ಗಾದ್ರಿಯನ್ನು ಜೈಪುರಕ್ಕೆ ಕರೆಸಿದ್ದು,ಅಲ್ಲಿ ಗುಪ್ತಚರ ಸಂಸ್ಥೆಗಳು ಜಂಟಿಯಾಗಿ ಆತನ ವಿಚಾರಣೆ ನಡೆಸಿದ್ದವು. ಈ ವೇಳೆ ಆತ,ತಾನು ಈ ವರ್ಷದ ಪೂರ್ವಾರ್ಧದಲ್ಲಿ ಫೇಸ್‌ಬುಕ್‌ನಲ್ಲಿ ಯಾರೋ ಶೇರ್ ಮಾಡಿಕೊಂಡಿದ್ದ ಲಿಂಕ್ ನ್ನು ಸ್ವೀಕರಿಸುವ ಮೂಲಕ ಅಶ್ಲೀಲ ವಾಟ್ಸ್ಆ್ಯಪ್ ಗುಂಪೊಂದಕ್ಕೆ ಸೇರಿದ್ದೆ ಎಂದು ತಿಳಿಸಿದ್ದ ಎಂದು ಕೇಂದ್ರೀಯ ತನಿಖಾ ಸಂಸ್ಥೆಯ ಮೂಲಗಳು ತಿಳಿಸಿದವು. 

ವಾಟ್ಸ್ಆ್ಯಪ್ ಗುಂಪಿನಲ್ಲಿ ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳ ಮೊಬೈಲ್ ಸಂಖ್ಯೆಗಳನ್ನು ಬಳಸುತ್ತಿದ್ದ 250ಕ್ಕೂ ಹೆಚ್ಚು ಸದಸ್ಯರಿದ್ದರು. ಸೇರಿದ ಒಂದು ವಾರದಲ್ಲಿ ತಾನು ಗುಂಪನ್ನು ತೊರೆದಿದ್ದೆ ಎಂದು ಗಾದ್ರಿ ಹೇಳಿಕೊಂಡಿದ್ದ ಎಂದು ಮೂಲಗಳು ತಿಳಿಸಿದವು.

 ಗುಂಪನ್ನು ತೊರೆದಿದ್ದ ಬೆನ್ನಿಗೇ ‘+92’ ಸಂಖ್ಯೆಯನ್ನು ಬಳಸಿದ್ದ ಸದಸ್ಯನೋರ್ವ ವಾಟ್ಸ್‌ಆ್ಯಪ್‌ನಲ್ಲಿ ಗಾದ್ರಿಯನ್ನು ಸಂಪರ್ಕಿಸಿ ಗುಂಪನ್ನು ತೊರೆಯಲು ಕಾರಣವೇನು ಎಂದು ಪ್ರಶ್ನಿಸಿದ್ದ. ಪಾಕಿಸ್ತಾನಿ ಮೊಬೈಲ್ ಸಂಖ್ಯೆಯ ವಾಟ್ಸ್ಆ್ಯಪ್ ಬಳಕೆದಾರ ತನ್ನನ್ನು ‘ಅನಿಲ್’ಎಂದು ಪರಿಚಯಿಸಿಕೊಂಡಿದ್ದ ಮತ್ತು ನಂತರ ಆತ ಪಾಕಿಸ್ತಾನದ ನಿವಾಸಿ ಎನ್ನುವುದು ಗಾದ್ರಿಗೆ ಗೊತ್ತಾಗಿತ್ತು. ಆದಾಗ್ಯೂ ಆತ ‘ಅನಿಲ್’ಜೊತೆ ಸಂವಹನವನ್ನು ಮುಂದುವರಿಸಿದ್ದ. ಕ್ರಮೇಣ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶಗಳ ವಿನಿಮಯವನ್ನು ಆರಂಭಿಸಿದ್ದ ಅವರಿಬ್ಬರು ವಾಟ್ಸ್ಆ್ಯಪ್ ಆಡಿಯೊ ಕಾಲ್‌ಗಳ ಮೂಲಕ ಮಾತನಾಡುತ್ತಿದ್ದರು. ಕೆಲವು ದಿನಗಳ ಬಳಿಕ ‘ಅನಿಲ್ ’ ಇನ್ನೋರ್ವ ಪಾಕಿಸ್ತಾನಿ ಗುಪ್ತಚರ ಏಜೆಂಟ್ (ಪಿಐಒ) ‘ಸಾಹಿಲ್’ ಎಂಬಾತನನ್ನು ಗಾದ್ರಿಗೆ ಪರಿಚಯಿಸಿದ್ದ. 

ಭಾರತೀಯ ವಾಟ್ಸ್ಆ್ಯಪ್ ನಂಬರ್ ಬಳಸುತ್ತಿದ್ದ ‘ಸಾಹಿಲ್’ ತಾನು ದಿಲ್ಲಿ ನಿವಾಸಿಯೆಂದು ಹೇಳಿಕೊಂಡಿದ್ದ ಎಂದು ಮೂಲಗಳು ವಿವರಿಸಿವೆ.
ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳುವಂತೆ ಗಾದ್ರಿಯನ್ನು ಆಹ್ವಾನಿಸಿದ್ದ ‘ಅನಿಲ್’ ಮತ್ತು ‘ಸಾಹಿಲ್’ಅದನ್ನು ತಾವೇ ಪ್ರಾಯೋಜಿಸುವುದಾಗಿ ಹೇಳಿದ್ದರು. ಅವರು ಒಡ್ಡಿದ್ದ ಹಣದ ಆಮಿಷಕ್ಕೊಳಗಾಗಿದ್ದ ಗಾದ್ರಿ ತನ್ನ ಹೆಸರಿನಲ್ಲಿ ಎರಡು ಸಿಮ್ ಕಾರ್ಡ್ ಗಳನ್ನು ಖರೀದಿಸಿದ್ದ. ಈ ಪೈಕಿ ಒಂದನ್ನು ‘ಅನಿಲ್’ ಪರವಾಗಿ ವಾಟ್ಸ್ಆ್ಯಪ್ ಒಟಿಪಿಯನ್ನು ಸ್ವೀಕರಿಸಲು ಬಳಸಿದ್ದ ಮತ್ತು ತನ್ಮೂಲಕ ಆತ ಭಾರತೀಯ ಮೊಬೈಲ್ ಸಂಖ್ಯೆಯಲ್ಲಿ ಹೊಸ ವಾಟ್ಸ್ಆ್ಯಪ್ ಖಾತೆಯನ್ನು ಹೊಂದಲು ಅನುಕೂಲ ಕಲ್ಪಿಸಿದ್ದ. ಬಳಿಕ ಆತ ಈ ಸಿಮ್ ಕಾರ್ಡ್‌ಗಳನ್ನು ಅವರು ಸೂಚಿಸಿದ್ದ ವಿಳಾಸಕ್ಕೆ ಕಳುಹಿಸಿದ್ದ. ನಂತರ ಆತ ಇನ್ನೂ ಮೂರು ಸಿಮ್ ಕಾರ್ಡ್‌ಗಳನ್ನು ಪಡೆದುಕೊಂಡು ಅವುಗಳನ್ನೂ ಅವರಿಗೆ ಕಳುಹಿಸಿದ್ದ. ಇದಕ್ಕಾಗಿ ಆತನಿಗೆ 5,000 ರೂ. ನೀಡಲಾಗಿತ್ತು ಎಂದು ಗುಪ್ತಚರ ಮಹಾನಿರ್ದೇಶಕ ಉಮೇಶ್ ಮಿಶ್ರಾ ತಿಳಿಸಿದರು.

ಪಾಲಿಯಲ್ಲಿ ಮದ್ಯದಂಗಡಿಯಲ್ಲಿ ಸೇಲ್ಸ್ ಮನ್ ಆಗಿದ್ದ ಶೇಖಾವತ್ ಪಾಕಿಸ್ತಾನದ ಮಹಿಳಾ ಹ್ಯಾಂಡ್ಲರ್ ಜೊತೆ ಸಂಪರ್ಕದಲ್ಲಿದ್ದ. ಭಾರತೀಯ ಸೇನೆಯ ಮಹಿಳಾ ಸಿಬ್ಬಂದಿಗಳ ಸೋಗಿನಲ್ಲಿ ಹಲವಾರು ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸುತ್ತಿದ್ದ ಆತ ಸೇನೆಯ ಯೋಧರೊಂದಿಗೆ ಗೆಳೆತನ ಬೆಳೆಸಿಕೊಂಡು ಅವರಿಂದ ವರ್ಗೀಕೃತ ಮಾಹಿತಿಗಳನ್ನು ಪಡೆದುಕೊಂಡು ತನ್ನ ಹ್ಯಾಂಡ್ಲರ್‌ಗೆ ಕಳುಹಿಸುತ್ತಿದ್ದ. ಇದಕ್ಕಾಗಿ ಆತನಿಗೆ ಹಣ ಪಾವತಿಯಾಗುತ್ತಿತ್ತು ಎಂದು ಮಿಶ್ರಾ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News