ಭಾರತದಲ್ಲಿ ಜೀವಿಸುವುದು ನಮಗೆ ಹೆಮ್ಮೆಯ ವಿಚಾರ: ಮಂಗಳೂರು ಬಿಷಪ್ ವಂ. ಪೀಟರ್ ಪಾವ್ಲ್ ಸಲ್ದಾನ್ಹಾ

Update: 2022-08-14 16:11 GMT

ಮಂಗಳೂರು, ಆ.14: ನಾವು ಭಾರತೀಯರು ಸ್ವತಂತ್ರ ದೇಶದಲ್ಲಿ ಬದುಕುತ್ತಿದ್ದೇವೆ. ಈ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ನಮ್ಮವರು ಹೋರಾಡಿ, ಜೀವದ ಬಲಿದಾನವನ್ನು ಅರ್ಪಿಸಿ ಪಡೆದ ಸ್ವಾತಂತ್ರ್ಯವಿದು. ಅವರ ತ್ಯಾಗ ಹಾಗೂ ಬಲಿದಾನದ ಫಲವನ್ನು ನಾವೆಲ್ಲರೂ ಅನುಭವಿಸುತ್ತಿದ್ದೇವೆ ಎಂದು ಮಂಗಳೂರು ಬಿಷಪ್ ವಂ. ಪೀಟರ್ ಪಾವ್ಲ್ ಸಲ್ದಾನ್ಹಾ ಅಭಿಪ್ರಾಯಪಟ್ಟಿದ್ದಾರೆ.

ನನ್ನ ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ನನ್ನ ನಮನಗಳು ಹಾಗೂ ಅವರೆಲ್ಲರಿಗೂ ನಾನು ಚಿರಋಣಿ ಯಾಗಿದ್ದೇನೆ. ಭಾರತ ಸ್ವತಂತ್ರಗೊಂಡು ೭೫ ವರ್ಷಗಳು ಕಳೆದಿದೆ. ಆದರೆ ಕೆಲವೊಂದು ಹಿನ್ನಡೆಗಳನ್ನು ಮೆಟ್ಟಿ ನಿಂತು ನಾವು ಮುನ್ನಡೆಯಬೇಕಾಗಿದೆ. ಬಡತನದ ಸಮಸ್ಯೆ ಇನ್ನೂ ನಮ್ಮನ್ನು ಶಾಶ್ವತವಾಗಿ ಬಿಟ್ಟು ಹೋಗಿಲ್ಲ. ನಿರುದ್ಯೋಗದ ಸಮಸ್ಯೆಯು ಜ್ವಲಂತವಾಗಿದೆ. ಇಂತಹ ಸಮಸ್ಯೆಗಳಿಂದ ಮುಕ್ತಿಗೊಂಡು ದೇಶವು ಪ್ರಗತಿಯತ್ತ ದಾಪುಗಾಲು ಹಾಕಲೆಂದು ನಾನು ಬಯಸುತ್ತೇನೆ. ಸರ್ವರಿಗೂ ಭಾರತದ ಸ್ವಾತಂತ್ರ್ಯ ದಿನದ ಅಮೃತೋತ್ಸವದ ಶುಭಾಶಯಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

ಮನುಷ್ಯತ್ವದ ಮನೋಧರ್ಮವು ಇನ್ನಷ್ಟು ಪ್ರಭಾವಶಾಲಿಯಾಗಬೇಕಾಗಿದೆ. ಈ ದೇಶದ ರಾಷ್ಟ್ರಧ್ವಜವು ಮುಗಿಲೆತ್ತರಕ್ಕೆ ಹಾರುವಾಗ ನಮ್ಮ ಈ ದೇಶದ ವಿವಿಧತೆಯಲ್ಲಿ ಏಕತೆ ಎಂಬಂತಹ ಸುಂದರ ನಿಲುವಿಗೆ ಇನ್ನೂ ಆನೆ ಬಲ ಬಾರದಿರುವುದು ತುಸು ಬೇಸರ ಸಂಗತಿ. ಧರ್ಮದ ಹೆಸರಿನಲ್ಲಿ ಆಗುವಂತಹ ಘರ್ಷಣೆ ಹಾಗೂ ತಾರತಮ್ಯ ನಿಲ್ಲಬೇಕಾಗಿದೆ. ಅದರ ಬದಲು ಬಂಧುತ್ವವನ್ನು ಬೆಳೆಸಲು ನಾವೆಲ್ಲರೂ ನಿರಂತರ ದುಡಿಯ ಬೇಕಾಗಿದೆ ಎಂದು ಮಂಗಳೂರು ಬಿಷಪ್ ವಂ. ಪೀಟರ್ ಪಾವ್ಲ್ ಸಲ್ದಾನ್ಹಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News