ಆ.19ರಿಂದ ಪ್ರಥಮ ಹಂತದ ರಾಜ್ಯ ಪ್ರವಾಸ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್

Update: 2022-08-16 12:55 GMT

ಬೆಂಗಳೂರು, ಆ.16: ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು ನನ್ನ ಮೇಲೆ ವಿಶ್ವಾಸ ಇಟ್ಟು ನನಗೆ ಮಹತ್ವದ ಜವಾಬ್ದಾರಿ ನೀಡಿದ್ದಾರೆ. ಇಂದು ಪ್ರಚಾರ ಸಮಿತಿಯ ಕಾರ್ಯಾಲಯವನ್ನು ಸಾಂಕೇತಿಕವಾಗಿ ಉದ್ಘಾಟನೆ ಮಾಡಿದ್ದು, ಆ.19ರಂದು ಪ್ರಥಮ ಹಂತದ ರಾಜ್ಯ ಪ್ರವಾಸ ಹಮ್ಮಿಕೊಂಡಿದ್ದೇನೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಹೇಳಿದರು.

ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆ.19ರಂದು ಕಲಬುರಗಿಯಿಂದ ಆರಂಭವಾಗಿ, 20ರಂದು ಹುಬ್ಬಳ್ಳಿ, ಅಂದು ಸಂಜೆ ಧಾರವಾಡ, 23ರಂದು ಚಿತ್ರದುರ್ಗ, 24ರಂದು ಶಿವಮೊಗ್ಗ, 26ರಂದು ಮೈಸೂರು, 27ರಂದು ಚಾಮರಾಜನಗರಕ್ಕೆ ಭೇಟಿ ನೀಡಲಿದ್ದೇನೆ ಎಂದರು.

ಸೆ.1ರಂದು ಮಂಗಳೂರು, 2ರಂದು ಉಡುಪಿ, 3ರಂದು ತುಮಕೂರು, 5ರಂದು ಕೊಪ್ಪಳ, 6ರಂದು ಬಳ್ಳಾರಿ, ವಿಜಯನಗರ, 7ರಂದು ರಾಯಚೂರು, 8ರಂದು ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳ ಪ್ರವಾಸ ಮಾಡುತ್ತಿದ್ದೇನೆ ಎಂದು ಎಂ.ಬಿ.ಪಾಟೀಲ್ ಮಾಹಿತಿ ನೀಡಿದರು.

ಸೆ.27ರಿಂದ ರಾಜ್ಯದಲ್ಲಿ ಆರಂಭವಾಗಲಿರುವ ಭಾರತ್ ಜೋಡೋ ಕಾರ್ಯಕ್ರಮ ತಯಾರಿ ಗಮನದಲ್ಲಿಟ್ಟುಕೊಂಡು ಉಳಿದ ಪ್ರವಾಸ ಹಮ್ಮಿಕೊಳ್ಳುತ್ತೇನೆ. ಈ ಪ್ರವಾಸದಲ್ಲಿ ಶಾಸಕರು, ಮಾಜಿ ಸಚಿವರು, ವಿಧಾನ ಪರಿಷತ್ ಸದಸ್ಯರು, ಸಂಸದರು, ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು, ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರ ಜತೆ ಸಭೆ ಮಾಡಿ ಅವರ ಅಭಿಪ್ರಾಯಗಳನ್ನು ಸಂಗ್ರಹಿಸುತ್ತೇವೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷದ ಸಾಧನೆಗಳು, ಪ್ರಥಮ ಪ್ರಧಾನಿ ನೆಹರೂ ಅವರಿಂದ ಮನಮೋಹನ್ ಸಿಂಗ್ ಅವರ ಕಾಲದವರೆಗೂ ಕಾಂಗ್ರೆಸ್ ಸರಕಾರದ ಕೊಡುಗೆಗಳನ್ನು ರಾಜ್ಯದ ಜನರಿಗೆ ತಿಳಿಸಲು ಕಾರ್ಯಕ್ರಮ ರೂಪಿಸುತ್ತೇವೆ. ಇನ್ನು ರಾಜ್ಯದಲ್ಲಿ ಕೆಂಗಲ್ ಹನುಮಂತಯ್ಯ ಅವರ ಸರಕಾರದಿಂದ ಸಿದ್ದರಾಮಯ್ಯ ಅವರ ಸರಕಾರದ ವರೆಗೆ ಕಾಂಗ್ರೆಸ್ ಸರಕಾರದ ಕೊಡುಗೆಗಳನ್ನು ಪ್ರಚಾರ ಮಾಡುತ್ತೇವೆ ಎಂದು ಅವರು ತಿಳಿಸಿದರು.

ಬಿಜೆಪಿ ಸರಕಾರದ ವೈಫಲ್ಯಗಳು, ಅಧಿಕಾರಕ್ಕೆ ಬರುವ ಮುನ್ನ ಬಿಜೆಪಿ ಕೊಟ್ಟಿದ್ದ ಮಾತು, ಎಲ್ಲವನ್ನು ಜನರಿಗೆ ತಿಳಿಸಬೇಕು. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವಲ್ಲಿ ವಿಫಲ, ಕಪ್ಪು ಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಹಾಕುವಲ್ಲಿ ವಿಫಲ, ರೈತರ ಆದಾಯ ಡಬಲ್ ಆಗಿಲ್ಲ. ಅವರು ಕೊಟ್ಟ ಮಾತು ನಡೆದಿಲ್ಲ. ಬೆಲೆ ಏರಿಕೆ, ನಿರುದ್ಯೋಗ ಹೆಚ್ಚಾಗಿದೆ ಎಂದು ಎಂ.ಬಿ.ಪಾಟೀಲ್ ವಾಗ್ದಾಳಿ ನಡೆಸಿದರು.

ನೋಟು ಅಮಾನ್ಯ, ಅವೈಜ್ಞಾನಿಕ ಜಿಎಸ್‍ಟಿಯಿಂದ ಜನರಿಗೆ ಆಗುತ್ತಿರುವ ತೊಂದರೆ ಎಲ್ಲ ವಿಚಾರದಲ್ಲೂ ಜನರಿಗೆ ಜಾಗೃತಿ ಮೂಡಿಸುತ್ತೇವೆ. ರಾಜ್ಯ ಬಿಜೆಪಿ ಸರಕಾರದಲ್ಲಿ 40 ಪರ್ಸೆಂಟ್ ಭ್ರಷ್ಟಾಚಾರ ನಡೆಯುತ್ತಿದೆ. ಪ್ರಧಾನಿಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪತ್ರ ಬರೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಭ್ರಷ್ಟರ ವಿರುದ್ಧ ಆದಾಯ ತೆರಿಗೆ, ಈಡಿ, ಸಿಬಿಐ ದಾಳಿ ಆಗಿಲ್ಲ? ಪ್ರಧಾನಿ ಮೌನವಾಗಿರುವುದೇಕೆ? ಮೌನಂ ಸಮ್ಮತಿ ಲಕ್ಷಣಂ ಎನ್ನುವಂತಾಗಿದೆ ಎಂದು ಎಂ.ಬಿ.ಪಾಟೀಲ್ ಕಿಡಿಗಾರಿದರು.

ಸರಕಾರದ ಮಂತ್ರಿಗಳು ಯಾವ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿಗೆ ತಿಳಿಯುತ್ತಿಲ್ಲ. ಹೀಗಾಗಿ ಇದು ದಿಕ್ಕು ದೆಸೆ ಇಲ್ಲದ ಸರಕಾರವಾಗಿದೆ. ಇದರ ಜತೆಗೆ ಸಚಿವ ಮಾಧುಸ್ವಾಮಿ ಈ ಸರಕಾರ ಕಾಲವನ್ನು ತಳ್ಳಿಕೊಂಡು ಹೋಗುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ ಎಂದು ಅವರು ಟೀಕಿಸಿದರು.

ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ, ಮತ ವಿಭಜನೆಗಾಗಿ ಹಿಜಾಬ್, ಹಲಾಲ್ ಸೇರಿದಂತೆ ಹಲವು ವಿಚಾರಗಳಲ್ಲಿ ಗೊಂದಲ ಸೃಷ್ಟಿಸಿದರು. ನಂತರ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಮೂಲಕ ಎಲ್ಲ ಸಮಾಜದ ಮಹನೀಯರಿಗೆ ಅಪಮಾನ ಮಾಡಿದರು. ಎಲ್ಲರ ಇತಿಹಾಸ ತಿರುಚಿದರು. ಇದು ಅವರ ನಿಜವಾದ ಅಜೆಂಡಾವನ್ನು ಪ್ರದರ್ಶಿಸುತ್ತದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

ಬ್ರಿಟೀಷರಿಗೆ ಮುಚ್ಚಳಿಕೆ ಪತ್ರ ಬರೆದುಕೊಟ್ಟ ಸಾವರ್ಕರ್‍ರನ್ನು ದೇಶಭಕ್ತ ಎಂದು ಬಿಂಬಿಸುತ್ತಿರುವ ಬಿಜೆಪಿ, ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ನೆಹರೂ, ದೇಶಕ್ಕಾಗಿ ತ್ಯಾಗ ಮಾಡಿರುವ ಅವರ ಕುಟುಂಬವನ್ನು ಟೀಕಿಸುತ್ತಿದೆ. ನೆಹರೂ ಅವರು ಸಮೃದ್ಧ ಹಾಗೂ ಬಲಿಷ್ಠ ಭಾರತ ನಿರ್ಮಾಣಕ್ಕೆ ಶ್ರಮಿಸಿದ್ದರು. ಸರಕಾರದ ಜಾಹೀರಾತಿನಲ್ಲಿ ಅವರ ಭಾವಚಿತ್ರ ಹಾಕದೆ ಕೀಳುಮಟ್ಟದ ರಾಜಕಾರಣ ಮಾಡಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಅಧಿಕಾರ ಅನುಭವಿಸುವುದಕ್ಕಿಂತ ರಾಜ್ಯವನ್ನು ನಂ.1 ರಾಜ್ಯವನ್ನಾಗಿ ಮಾಡಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಹದಗೆಟ್ಟಿರುವ ರಾಜ್ಯದ ಆರ್ಥಿಕ ಸ್ಥಿತಿ ಸುಧಾರಿಸಲು ಕನಿಷ್ಠ 2 ವರ್ಷಗಳ ಕಾಲ ಬೇಕಾಗುತ್ತದೆ. ಈ ಕಾನೂನು ಸುವ್ಯವಸ್ಥೆ ಸರಿಪಡಿಸಲು, ಆಡಳಿತ ಯಂತ್ರ ಸರಿಪಡಿಸಲು ಕಾಲಾವಕಾಶ ಬೇಕು. ಇದಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ, ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

► ''ಸೆ.7ರಂದು ಭಾರತ್ ಜೋಡೋ ಕಾರ್ಯಕ್ರಮ''

ಕನ್ಯಾಕುಮಾರಿಯಿಂದ ಸೆ.7ರಂದು ಭಾರತ್ ಜೋಡೋ ಕಾರ್ಯಕ್ರಮ ಆರಂಭವಾಗಲಿದ್ದು, ಕಾಶ್ಮೀರದವರೆಗೆ ರಾಹುಲ್ ಗಾಂಧಿ 3500 ಕಿ.ಮೀ ಪಾದಯಾತ್ರೆ ಮಾಡಲಿದ್ದಾರೆ. ಸೆ.27ರ ನಂತರ ರಾಜ್ಯದಲ್ಲಿ 21ದಿನಗಳ ಕಾಲ ರಾಹುಲ್ ಗಾಂಧಿ ಪ್ರವಾಸ ಮಾಡಲಿದ್ದಾರೆ.

ಗುಂಡ್ಲುಪೇಟೆಯಿಂದ ರಾಯಚೂರಿನವರೆಗೂ ಎಲ್ಲೆಡೆ ಪ್ರಚಾರ ಮಾಡಲಾಗುವುದು. ಭಾರತ್ ಜೋಡೋ ಕಾರ್ಯಕ್ರಮದಲ್ಲಿ ಸಮಾವೇಶ ಮಾಡುವ ಬಗ್ಗೆ ಇನ್ನು ಚರ್ಚೆ ಆಗಿಲ್ಲ. ಬಳ್ಳಾರಿಯಲ್ಲಿ ಒಂದು ಸಾರ್ವಜನಿಕ ಸಭೆ ಮಾಡುವ ಆಲೋಚನೆ ಇದೆ. ನಮ್ಮ ಆಂತರಿಕ ಸಮೀಕ್ಷೆ ಪ್ರಕಾರ ನಮಗೆ ಈಗಾಗಲೇ 136 ಸ್ಥಾನಗಳು ಸಿಗಲಿವೆ. ರಾಹುಲ್ ಗಾಂಧಿ 150 ಸ್ಥಾನಗಳ ಗುರಿ ನೀಡಿದ್ದು, ಮೊದಲ ಹಂತದ ಸಮೀಕ್ಷೆಯಲ್ಲಿ ನಾವು 136ರಷ್ಟು ತಲುಪಿದ್ದೇವೆ.

-ಸಲೀಮ್ ಅಹ್ಮದ್ ಕೆಪಿಸಿಸಿ ಕಾರ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News