ಮತ್ತೊಂದು ಹಂತಕ್ಕೆ ತಲುಪಿದ ಚೀನಾದ ʼಮಿಷನ್‌ ಹಿಂದೂ ಮಹಾಸಾಗರʼ: ಜಿಬೌಟಿ ನೌಕಾನೆಲೆಯಲ್ಲಿ ಕಾರ್ಯಾಚರಣೆ ಆರಂಭ

Update: 2022-08-18 16:12 GMT

ಹೊಸದಿಲ್ಲಿ: ಆಫ್ರಿಕಾದ ಜಿಬೌಟಿಯಲ್ಲಿರುವ ಚೀನಾದ ನೌಕಾನೆಲೆಯಲ್ಲಿ ಕಾರ್ಯಾಚರಣೆ ಆರಂಭವಾಗಿದೆ ಎಂಬುವುದನ್ನು ಸೂಚಿಸುವ ಉಪಗ್ರಹ ಚಿತ್ರಗಳು ಲಭ್ಯವಾಗಿದೆ ಎಂದು ndtv.com ವರದಿ ಮಾಡಿದೆ. ಮ್ಯಾಕ್ಸರ್ ಟೆಕ್ನಾಲಜೀಸ್ ಬಿಡುಗಡೆ ಮಾಡಿದ ಉಪಗ್ರಹ ಚಿತ್ರಗಳಿಂದ, ಚೀನಾದ ಈ ನೌಕಾ ನೆಲೆಯು ಈಗ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದೆ. ಈ ಚಿತ್ರಗಳು ನೌಕಾ ನೆಲೆಯಲ್ಲಿ ಚೀನಾದ ಯುದ್ಧನೌಕೆಗಳನ್ನು ತೋರಿಸುತ್ತವೆ, ಇವುಗಳನ್ನು ಹಿಂದೂ ಮಹಾಸಾಗರದಲ್ಲಿ ನಿಯೋಜಿಸಲಾಗಿದೆ ಎಂದು ವರದಿಯಾಗಿದೆ.

ವಿದೇಶದಲ್ಲಿ ಚೀನಾದ ಮೊದಲ ಸೇನಾ ನೆಲೆ

ಜಿಬೌಟಿಯಲ್ಲಿರುವ ಚೀನಾದ ನೌಕಾ ನೆಲೆಯು ಚೀನಾದ ಮೊದಲ ವಿದೇಶಿ ಸೇನಾ ನೆಲೆಯಾಗಿದೆ. ಇದನ್ನು $590 ಮಿಲಿಯನ್ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, 2016 ರಿಂದ ನಿರ್ಮಾಣ ಹಂತದಲ್ಲಿದೆ. ಈ ನೌಕಾ ನೆಲೆಯು ಆಯಕಟ್ಟಿನ ಪ್ರಮುಖ ಪ್ರದೇಶವಾದ ಬಾಬ್-ಎಲ್-ಮಂಡೇಬ್ ಜಲಸಂಧಿಯ ಬಳಿ ಇದೆ. ಬಾಬ್‌ ಎಲ್‌ ಮಂಡೇಬ್‌ ಜಲಸಂಧಿಯು  ಗಲ್ಫ್ ಆಫ್ ಅಡೆನ್ ಮತ್ತು ಕೆಂಪು ಸಮುದ್ರವನ್ನು ಪ್ರತ್ಯೇಕಿಸುತ್ತದೆ. ಜಿಬೌಟಿಯು ಸೂಯೆಜ್ ಕಾಲುವೆಯ ಮಾರ್ಗದಲ್ಲಿದ್ದು, ಇದು ಅತ್ಯಂತ ಜನನಿಬಿಡ ಹಡಗು ಮಾರ್ಗಗಳಲ್ಲಿ ಒಂದಾಗಿದೆ. ಜಿಬೌಟಿಯಲ್ಲಿ ಮಿಲಿಟರಿ ನೆಲೆಯನ್ನು ನಿರ್ಮಿಸಿದ ನಂತರ, ಚೀನಾ ತನ್ನ ನೌಕಾ ಶಕ್ತಿಯನ್ನು ಹಿಂದೂ ಮಹಾಸಾಗರದಿಂದ ದಕ್ಷಿಣ ಚೀನಾ ಸಮುದ್ರದವರೆಗೆ ವಿಸ್ತರಿಸಿದೆ.

ಅತ್ಯಂತ ಬಲಿಷ್ಠ ಜಿಬೌಟಿ ನೌಕಾನೆಲೆ

ನೇರ ದಾಳಿಯನ್ನು ತಡೆದುಕೊಳ್ಳಲು ಜಿಬೌಟಿ ನೆಲೆಯನ್ನು ಸ್ಪಷ್ಟವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ನೇವಲ್ ಬೇಸ್‌ನ ನೌಕಾ ವಿಶ್ಲೇಷಕ ಎಚ್ ಐ ಸುಟ್ಟನ್ ಎನ್‌ಡಿಟಿವಿಗೆ ತಿಳಿಸಿದ್ದಾರೆ. ಅವರ ಪ್ರಕಾರ, ಅದನ್ನು ಬಲವಾದ ರೀತಿಯಲ್ಲಿ ಮಾಡಲಾಗಿದ್ದು, ಇದರ ರಕ್ಷಣಾ ಪದರಗಳು ಆಧುನಿಕ ವಸಾಹತುಶಾಹಿ ಕೋಟೆಯಂತೆ ಕಂಡುಬರುತ್ತವೆ. ನೇರ ದಾಳಿಯನ್ನು ತಡೆದುಕೊಳ್ಳಲು ಇದನ್ನು ಸ್ಪಷ್ಟವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ತೋರುತ್ತದೆ. ಮ್ಯಾಕ್ಸರ್‌ನ ಉಪಗ್ರಹ ಚಿತ್ರಗಳು ಚೀನೀ ಯುಝಾವೋ ವರ್ಗ (ಟೈಪ್-071) ಲ್ಯಾಂಡಿಂಗ್ ಹಡಗನ್ನು ತೋರಿಸುತ್ತವೆ. ಇದನ್ನು 320 ಮೀಟರ್ ಉದ್ದದ ಡಾಕ್‌ಯಾರ್ಡ್‌ನಲ್ಲಿ ಇರಿಸಲಾಗಿದೆ. ಈ ಹಡಗುಕಟ್ಟೆಯಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಸೌಲಭ್ಯವೂ ಲಭ್ಯವಿದೆ.

ಇದನ್ನೂ ಓದಿ:| ಚೀನಾದ 17 ಯುದ್ಧವಿಮಾನ, 5 ನೌಕೆಗಳು ತೈವಾನ್ ಜಲಸಂಧಿಯ ಮಧ್ಯರೇಖೆ ದಾಟಿದ್ದವು: ವರದಿ 

ಚೈನೀಸ್ ಟೈಪ್-071 ಲ್ಯಾಂಡಿಂಗ್ ಹಡಗಿನ ಗಾತ್ರವನ್ನು ಗಮನಿಸಿದರೆ, ಅದರೊಂದಿಗೆ ಅನೇಕ ಟ್ಯಾಂಕ್‌ಗಳು, ಟ್ರಕ್‌ಗಳು ಮತ್ತು ಹೋವರ್‌ಕ್ರಾಫ್ಟ್‌ಗಳನ್ನು ಸಾಗಿಸಬಹುದು ಎಂಬ ಅಂಶದಿಂದ ಅಳೆಯಬಹುದು ಎಂದು ವಿಶ್ಲೇಷಕರು ಹೇಳಿದ್ದಾರೆ. ಸುಟ್ಟನ್ ಪ್ರಕಾರ, ಹೆಚ್ಚು ಶಕ್ತಿಶಾಲಿ ಹಡಗುಗಳು ಚೀನೀ ನೌಕಾಪಡೆಗೆ ಸೇರುತ್ತಿವೆ. ಅವುಗಳ ಗಾತ್ರ ಮತ್ತು ಸಾಮರ್ಥ್ಯದ ಆಧಾರದ ಮೇಲೆ, ಅವುಗಳನ್ನು ನಿರ್ಣಾಯಕ ಲಾಜಿಸ್ಟಿಕ್ಸ್, ಪೂರೈಕೆ ಮತ್ತು ಸಾರಿಗೆ ಕಾರ್ಯಾಚರಣೆಗಳಿಗೆ ಬಳಸಲಾಗುತ್ತಿದೆ ಎಂದು ಹೇಳಬಹುದು. ಯುಝಾವೋ ವರ್ಗದ ಹಡಗುಗಳನ್ನು ಚೀನಾದ ಕಾರ್ಯಪಡೆಯ ಪ್ರಮುಖ ಯುದ್ಧನೌಕೆಗಳಾಗಿ ವಿನ್ಯಾಸಗೊಳಿಸಲಾಗಿದೆ. ಈ ಹಡಗುಗಳು ನೆಲ ಮತ್ತು ವಾಯು ದಾಳಿಯನ್ನು ಎದುರಿಸಲು ಸಹ ಸಮರ್ಥವಾಗಿವೆ. ಚೀನಾದ ನೌಕಾಪಡೆಯು ಈ ವರ್ಗದ ಒಟ್ಟು 8 ಹಡಗುಗಳನ್ನು ವಿವಿಧ ಹಂತಗಳಲ್ಲಿ ತನ್ನ ನೌಕಾಪಡೆಯಲ್ಲಿ ನಿಯೋಜಿಸಿದೆ.

ಈ ನೆಲೆಯಲ್ಲಿ ಚೀನಾದ ಇನ್ನೊಂದು ಹಡಗು 'ಚಾಂಗ್‌ಬೈ ಶಾನ್' ಕೂಡ ಕಾಣಿಸಿಕೊಂಡಿದೆ. ಇದು 800 ಸೈನಿಕರು ಮತ್ತು ವಾಹನಗಳು, ಏರ್-ಕುಶನ್ ಲ್ಯಾಂಡಿಂಗ್ ಕ್ರಾಫ್ಟ್ ಮತ್ತು ಹೆಲಿಕಾಪ್ಟರ್‌ಗಳನ್ನು ಸಾಗಿಸಲು ವಿನ್ಯಾಸಗೊಳಿಸಲಾದ 25,000 ಟನ್‌ಗಳ ಬೃಹತ್ ಹಡಗು ಆಗಿದೆ. ಇದು ಈ ವರ್ಷ ಚೀನಾದ ಪ್ರಬಲ ನೌಕೆಯೊಂದಿಗೆ ಹಿಂದೂ ಮಹಾಸಾಗರದ ನೀರನ್ನು ಪ್ರವೇಶಿಸಿದೆ ಎಂದು ಊಹಿಸಲಾಗಿದೆ. ಉಪಗ್ರಹ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಟ್ರ್ಯಾಕಿಂಗ್ ಹಡಗು ಯುವಾನ್ ವಾಂಗ್ 5 ಅನ್ನು ಶ್ರೀಲಂಕಾದ ಹಂಬಂಟೋಟಾ ಬಂದರಿನಲ್ಲಿ ಇಳಿಸಲು ಚೀನಾ ಅನುಮತಿ ನೀಡಿದ ನಂತರ ಜಿಬೌಟಿಯಲ್ಲಿರುವ ಚೀನಾದ ನೌಕಾ ನೆಲೆಯ ಚಿತ್ರಗಳು ಬಂದಿವೆ. ಈ ಹಡಗಿನ ಬೇಹುಗಾರಿಕೆ ಶಕ್ತಿಯ ಅಪಾಯದ ದೃಷ್ಟಿಯಿಂದ ಭಾರತವು ಈ ಬಗ್ಗೆ ಶ್ರೀಲಂಕಾಕ್ಕೆ ಪ್ರತಿಭಟನೆಯನ್ನು ಸಲ್ಲಿಸಿತ್ತು.

ಇದನ್ನೂ ಓದಿ | ಶ್ರೀಲಂಕಾದಲ್ಲಿ ನಿಲುಗಡೆಯಾಗಿರುವ ತನ್ನ ಹಡಗಿನಿಂದ ಯಾವುದೇ ದೇಶದ ಭದ್ರತೆಗೆ ಅಪಾಯವಿಲ್ಲ ಎಂದ ಚೀನಾ

ಶ್ರೀಲಂಕಾ ಮತ್ತು ಜಿಬೌಟಿಯಲ್ಲಿ ಚೀನಾದ ಉಪಸ್ಥಿತಿಯು ದೀರ್ಘಾವಧಿಯ 'ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್' ಅಡಿಯಲ್ಲಿ ಎರಡೂ ದೇಶಗಳಲ್ಲಿನ ಅದರ ಆರ್ಥಿಕ ಹೂಡಿಕೆಗಳೊಂದಿಗೆ ನಿಕಟ ಸಂಬಂಧ ಹೊಂದಿದೆ. ಜಿಬೌಟಿ ಚೀನಾದಿಂದ ದೊಡ್ಡ ಮೊತ್ತದ ಸಾಲವನ್ನು ತೆಗೆದುಕೊಂಡಿದೆ, ಈ ಸಾಲವು ಜಿಬೌಟಿಯ GDP ಯ 70% ಕ್ಕಿಂತ ಹೆಚ್ಚಿನದ್ದಾಗಿವೆ. ಅದೇ ವೇಳೆ, ಚೀನಾ ಶ್ರೀಲಂಕಾ ಬಂದರನ್ನು 99 ವರ್ಷಗಳ ಕಾಲ ಸುಪರ್ದಿಗೆ ಪಡೆದಿದೆ. ಶ್ರೀಲಂಕಾ ಕೂಡ ವಚೀನಾದ ಈ ಸಾಲದ ಸುಳಿಯಲ್ಲಿ ಸಿಲುಕಿದೆ.
 

ಚೀನಾದ ಸಾಗರ ಉದ್ದೇಶಗಳು ಅಥವಾ ಸಾಮರ್ಥ್ಯಗಳ ಬಗ್ಗೆ ಭಾರತವು ಯಾವುದೇ ಭ್ರಮೆಯನ್ನು ಹೊಂದಿರಬಾರದು. ಆಫ್ರಿಕನ್ ದೇಶದಲ್ಲಿ ಸ್ಟ್ಯಾಂಡಿಂಗ್ ಪೆಟ್ರೋಲ್ ಆರಂಭಿಸಿ 14 ವರ್ಷಗಳಾಗಿವೆ. ಆರಂಭದಲ್ಲಿ, ಚೀನಾ ಅಂತಹ ದೂರದ ನೆಲೆಯನ್ನು ಹೇಗೆ ನಿರ್ವಹಿಸುತ್ತದೆ ಎಂದು ನಮಗೆ ಅನುಮಾನವಿತ್ತು. ಆದರೆ ಅದನ್ನು ಮಾಡಬಲ್ಲೆವು ಎಂದು ಅವರು ತೋರಿಸಿಕೊಟ್ಟಿದ್ದಾರೆ. ಅವರು 6 ರಿಂದ 9 ತಿಂಗಳವರೆಗೆ ಹಡಗುಗಳನ್ನು ನಿಲ್ದಾಣದಲ್ಲಿ ಇರಿಸಿದ್ದಾರೆ. ನಾವು ಇಂದು ನೋಡುತ್ತಿರುವುದು ಚೀನಾದ ಕಡಲ ಪ್ರಭಾವವನ್ನು ಹೆಚ್ಚಿಸುವ ಉತ್ತಮ ಯೋಜಿತ ಮತ್ತು ಚೆನ್ನಾಗಿ ಯೋಚಿಸಿದ ಕಾರ್ಯತಂತ್ರದ ಭಾಗವಾಗಿದೆ ಎಂದು ಭಾರತೀಯ ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ಅರುಣ್ ಪ್ರಕಾಶ್ ಎನ್‌ಡಿಟಿವಿಗೆ ತಿಳಿಸಿದ್ದಾರೆ.

“ಇದರ ಅಡಿಯಲ್ಲಿ, ಚೀನಾ ಈಗಾಗಲೇ ಹಿಂದೂ ಮಹಾಸಾಗರದಲ್ಲಿ ಪರಮಾಣು ಚಾಲಿತ ದಾಳಿ ಜಲಾಂತರ್ಗಾಮಿ ನೌಕೆಗಳನ್ನು ನಿರ್ವಹಿಸಿದೆ. ಈ ಸಮುದ್ರ ಪ್ರದೇಶದಲ್ಲಿ ನಾವು ಯುದ್ಧನೌಕೆಗಳ ದೊಡ್ಡ ಗುಂಪನ್ನು ಸಹ ನೋಡಬಹುದು. ಅಮೆರಿಕ ನೌಕಾಪಡೆಯ ಉನ್ನತ ಕಮಾಂಡರ್‌ಗಳು ಕೂಡ ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಚೀನಾ ಕೂಡ ಇದೇ ರೀತಿ ಪಾಕಿಸ್ತಾನದ ಗ್ವಾದರ್ ಬಂದರನ್ನು ಬಳಸಿಕೊಳ್ಳಲಿದೆ. ಇಂದು ಹಿಂದೂ ಮಹಾಸಾಗರಕ್ಕೆ ಚೀನಾ ಹಡಗು ಕೊಂಡೊಯ್ಯುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ” ಎಂದು 2017ರಲ್ಲಿ ಅಮೆರಿಕದ ಪೆಸಿಫಿಕ್ ಕಮಾಂಡ್‌ನ ಅಂದಿನ ಕಮಾಂಡರ್ ಅಡ್ಮಿರಲ್ ಹ್ಯಾರಿ ಹ್ಯಾರಿಸ್ ಜೂನಿಯರ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News