ಬೆಂಗಳೂರು | ಪೂಜೆ ನೆಪದಲ್ಲಿ ಯುವತಿ ಮೇಲೆ ಅತ್ಯಾಚಾರ ಆರೋಪ: ನಕಲಿ ಸ್ವಾಮೀಜಿ ವಿರುದ್ಧ ದೂರು
ಬೆಂಗಳೂರು, ಆ.23: ಯುವತಿಗಿದ್ದ ದೈವ ಭಕ್ತಿಯನ್ನೆ ದುರ್ಬಳಕೆ ಮಾಡಿಕೊಂಡು ದೋಷವಿರುವುದಾಗಿ ಸುಳ್ಳು ಹೇಳಿ ಪೂಜೆ ನೆಪದಲ್ಲಿ ನಕಲಿ ಸ್ವಾಮೀಜಿಯೋರ್ವ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಕೇಳಿಬಂದಿದೆ.
ಸಂತ್ರಸ್ತೆಯ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ನಕಲಿ ಸ್ವಾಮೀಜಿ ಆನಂದಮೂರ್ತಿ ಹಾಗೂ ಈತನ ಪತ್ನಿ ಲತಾ ವಿರುದ್ಧ ಅತ್ಯಾಚಾರ, ಜೀವ ಬೆದರಿಕೆ ಹಾಗೂ ವಂಚನೆ ಪ್ರಕರಣ ದಾಖಲಿಸಿಕೊಂಡು ಆವಲಹಳ್ಳಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ಹಿಂದೆ ಸಂತ್ರಸ್ತೆಯನ್ನು ಆನಂದಮೂರ್ತಿ ಪರಿಚಯಿಸಿಕೊಂಡಿದ್ದ. ನಿಮ್ಮ ಜೀವನದಲ್ಲಿ ಗಂಡಾಂತರವಿದೆ, ಇದರಿಂದ ನಿಮ್ಮ ಕುಟುಂಬದ ಸದಸ್ಯರಿಗೂ ತೊಂದರೆಯಾಗಲಿದೆ. ನಿಮ್ಮ ಕಷ್ಟಗಳನ್ನು ನಿವಾರಿಸುವೆ ಎಂದು ಯುವತಿಗೆ ನಂಬಿಸಿದ್ದ ಎನ್ನಲಾಗಿದೆ. ಆನಂತರ ಆಕೆಯನ್ನು ಪೂಜೆ ಮಾಡುವ ನೆಪದಲ್ಲಿ ಕರೆಯಿಸಿಕೊಂಡು ಮತ್ತು ಬರುವ ಪಾನೀಯ ನೀಡಿದ್ದಾನೆ ಎಂದು ಹೇಳಲಾಗುತ್ತಿದೆ.
ತದನಂತರ, ಆನಂದಮೂರ್ತಿ ಅತ್ಯಾಚಾರವೆಸಗಿದರೆ, ಆತನ ಪತ್ನಿ ಲತಾ ಮೊಬೈಲ್‍ನಲ್ಲಿ ಚಿತ್ರೀಕರಿಸಿಕೊಂಡಿದ್ದಾಳೆ. ಯಾರಿಗಾದರೂ ವಿಷಯ ತಿಳಿಸಿದರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ.. ಬೆಂಗಳೂರು: ಸಾಲ ವಾಪಸ್ಸು ಕೇಳಿದ್ದಕ್ಕೆ ಕ್ರಿಕೆಟ್ ಬ್ಯಾಟ್‍ನಿಂದ ಹೊಡೆದು ವೃದ್ಧನ ಹತ್ಯೆ