ಹಾವು ಕಡಿತಕ್ಕೊಳಗಾಗಿ ಸ್ನೇಕ್ ಲೋಕೇಶ್ ಮೃತ್ಯು
ಬೆಂಗಳೂರು, ಆ.23: ಉರಗ ಸಂರಕ್ಷಕ ಸ್ನೇಕ್ ಲೋಕೇಶ್ ಅವರು ಹಾವು ಕಡಿತದಿಂದ ಚಿಕಿತ್ಸೆ ಫಲಕಾರಿ ಆಗದೆ, ಸಾವನ್ನಪ್ಪಿದ್ದಾರೆ.
ಹಾವು ರಕ್ಷಣೆ ಮಾಡುವಾಗ ನಾಗರಹಾವು ಕಡಿದು ಅಸ್ವಸ್ಥಗೊಂಡು ಕಳೆದ ಒಂದು ವಾರದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸ್ನೇಕ್ ಲೋಕೇಶ್ ಚಿಕಿತ್ಸೆ ಫಲಿಸದೇ ಮಂಗಳವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ ಎಂದು ಅವರು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ನೆಲಮಂಗಲ ತಾಲೂಕಿನ ಡಾಬಸ್‍ಪೇಟೆಯಲ್ಲಿ ಆ.17ರಂದು ಹಾವು ರಕ್ಷಣೆ ಮಾಡಲು ತೆರಳಿದ್ದರು. ಈ ರಕ್ಷಣಾ ಕಾರ್ಯಾಚರಣೆ ವೇಳೆ ಅವರ ಬಲಗೈ ಬೆರಳಿಗೆ ವಿಷಪೂರಿತ ನಾಗರಹಾವು ಕಚ್ಚಿತ್ತು. ತಕ್ಷಣವೇ ಅವರಿಗೆ ನೆಲಮಂಗಲ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ ಬೆಂಗಳೂರಿನ ಮಣಿಪಾಲ್‍ಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸಲಿಲ್ಲ ಎನ್ನಲಾಗಿದೆ.
ಲೋಕೇಶ್ ನೆಲಮಂಗಲ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾವಿರಾರು ಹಾವುಗಳ ರಕ್ಷಣೆ ಮಾಡಿ ಸ್ನೇಕ್ ಲೋಕೇಶ್ ಎಂದು ಹೆಸರಾಗಿದ್ದರು. ಬರಿಗೈಯಲ್ಲಿ ಉರಗ ರಕ್ಷಣೆ ಮಾಡುವಾಗ ಹಾವು ಕಚ್ಟಿದ್ದರಿಂದ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.