×
Ad

ದ.ಕ. ಜಿಲ್ಲೆಯಲ್ಲಿ ಶೀಘ್ರವೇ ‘ನಮ್ಮ ಕ್ಲಿನಿಕ್’ ಕಾರ್ಯಾರಂಭ; ಆರ್ಥಿಕ ದುರ್ಬಲ ವರ್ಗಗಳಿಗೆ ಆರೋಗ್ಯ ಸೇವೆಯ ಗುರಿ

Update: 2022-08-24 20:04 IST

ಮಂಗಳೂರು, ಆ.24: ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳಿಗೆ ಆರೋಗ್ಯ ಸೇವೆಯನ್ನು ನೀಡುವ ಗುರಿ ಯೊಂದಿಗೆ ಸ್ಥಾಪಿಸಲುದ್ದೇಶಿಸಲಾಗಿರುವ ‘ನಮ್ಮ ಕ್ಲಿನಿಕ್’ಗಳು ದ.ಕ. ಜಿಲ್ಲೆಯಲ್ಲಿ ಶೀಘ್ರವೇ ಕಾರ್ಯಾರಂಭಿಸಲಿವೆ.

ದ.ಕ. ಜಿಲ್ಲೆಯಲ್ಲಿ ಒಟ್ಟು 14 ನಮ್ಮ ಕ್ಲಿನಿಕ್‌ಗಳು ಆರಂಭವಾಗಲಿದ್ದು, ಸೆಪ್ಟಂಬರ್ ತಿಂಗಳ ಅಂತ್ಯಕ್ಕೆ ಅಥವಾ ಅಕ್ಟೋಬರ್ ತಿಂಗಳಿನಿಂದ ಕಾರ್ಯಾಚರಿಸಲು ಸಿದ್ಧತೆ ನಡೆದಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 7 ಹಾಗೂ ಉಳಿದಂತೆ ಬೆಳ್ತಂಗಡಿ ಹೊರತುಪಡಿಸಿ ಉಳಿದ ಏಳು ತಾಲೂಕುಗಳಲ್ಲಿ ಒಂದರಂತೆ ನಮ್ಮ ಕ್ಲಿನಿಕ್ ಮಂಜೂರಾಗಿದೆ.

ಸಾಂಕ್ರಾಮಿಕವಲ್ಲದ ರೋಗಗಳನ್ನು ಸುಲಭವಾಗಿ ಪತ್ತೆ ಹಚ್ಚಲು ಮತ್ತು  ಹೆಚ್ಚುವರಿ ಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ತಜ್ಞ ವೈದ್ಯರಿಗೆ ಶಿಫಾರಸು ಮಾಡುವ ನಿಟ್ಟಿನಲ್ಲಿ ಈ ನಮ್ಮ ಕ್ಲಿನಿಕ್‌ಗಳು ಕಾರ್ಯಾಚರಿಸಲಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಭಾಷಣದಲ್ಲಿ ಹೇಳಿದ್ದರು.

ಇದು ಕೊಳಚೆ ಪ್ರದೇಶಗಳು,  ಆರ್ಥಿಕವಾಗಿ ದುರ್ಬಲ ಜನರು, ವಿಶೇಷವಾಗಿ ವಲಸೆ ಕಾರ್ಮಿಕರ ಮೇಲೆ ಕೇಂದ್ರೀಕರಿಸಿಕೊಂಡು ಈ ಕ್ಲಿನಿಕ್‌ಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಆದರೆ ಮಂಗಳೂರು ನಗರದಲ್ಲಿ  ಸ್ಲಂ ಏರಿಯಾ ಇಲ್ಲದಿರುವ ಕಾರಣ ವಲಸೆ ಕಾರ್ಮಿಕರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಈ ಕ್ಲಿನಿಕ್‌ಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಈ ಬಗ್ಗೆ ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಲಾಗಿದೆ.

ಈ ಕ್ಲಿನಿಕ್‌ಗಳ ಮುಖ್ಯ ಉದ್ದೇಶ ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸುವುದು ಮತ್ತು ನಗರ ಪ್ರದೇಶಗಳಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಆರೋಗ್ಯ ಸೇವೆಯನ್ನು ಹೆಚ್ಚು ಸುಲಭವಾಗಿಸುವುದಾಗಿದೆ.  ಈಗಾಗಲೇ, ಮನಪಾ ವ್ಯಾಪ್ತಿಯಲ್ಲಿ 10  ನಗರ ಆರೋಗ್ಯ ಕೇಂದ್ರಗಳಿವೆ. ನಗರ ಆರೋಗ್ಯ ಕೇಂದ್ರಗಳ ವ್ಯಾಪ್ತಿಗೆ ಒಳಪಡದ ಪ್ರದೇಶಗಳಲ್ಲಿ ನಮ್ಮ ಕ್ಲಿನಿಕ್‌ಗಳನ್ನು ತೆರೆಯಲು ಆರೋಗ್ಯ ಇಲಾಖೆ ಈಗಾಗಲೇ ಸಿದ್ಧತೆ ನಡೆಸಿದೆ.

"ಕ್ಲಿನಿಕ್ ಆರಂಭಕ್ಕೆ ಸ್ಥಳಗಳನ್ನು ಗುರುತಿಸಲಾಗುತ್ತಿದೆ. ಸರಕಾರಿ ಕಟ್ಟಡ ಇದ್ದಲ್ಲಿ ಅಲ್ಲಿಯೇ ಈ ಕ್ಲಿನಿಕ್ ಆರಂಭವಾಗಲಿದೆ. ಇಲ್ಲವಾದಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯಾರಂಭಿಸಲು ತಯಾರಿ ನಡೆಯುತ್ತಿದೆ. ಪ್ರತಿ ನಮ್ಮ ಕ್ಲಿನಿಕ್‌ನಲ್ಲಿ ಒಬ್ಬರು ವೈದ್ಯರು, ಒಬ್ಬರು ಸ್ಟಾಫ್ ನರ್ಸ್, ಒಬ್ಬ ಲ್ಯಾಬ್ ಟೆಕ್ನಿಷಿಯನ್ ಮತ್ತು ಗ್ರೂಪ್ ಡಿ ಸಿಬ್ಬಂದಿ ಇರಲಿದ್ದಾರೆ. ಸೆಪ್ಟಂಬರ್ ತಿಂಗಳೊಳಗೆ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ನಮ್ಮ ಕ್ಲಿನಿಕ್‌ಗಳು ಕಾರ್ಯಾರಂಭಿಸುವ ಸಾಧ್ಯತೆ ಇದೆ".

-ಡಾ. ಕಿಶೋರ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ, ದ.ಕ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News