ದಂಬೆಕಾನ ಸದಾಶಿವ ರೈರಿಂದ ಸಮಾಜದ ಇತಿಹಾಸ ಉಳಿಸುವ ಕೆಲಸ ನಡೆದಿದೆ: ಮಂಜುನಾಥ ಭಂಡಾರಿ

Update: 2022-08-27 08:07 GMT

ಪುತ್ತೂರು: ದಂಬೆಕಾನ ಸದಾಶಿವ ರೈ ಅವರು ತಮ್ಮ ಲೇಖನ ಮತ್ತು ಸಾಮಾಜಿಕ ಚಿಂತನೆಯ ಮೂಲಕ ಬಂಟ ಸಮಾಜದ ಇತಿಹಾಸವನ್ನು ಉಳಿಸುವ ಕೆಲಸ ಮಾಡಿದ್ದಾರೆ ಎಂದು ಕರ್ನಾಟಕ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.

ಅವರು ಬಂಟರ ಯಾನೆ ನಾಡವರ ಮಾತ್ರ್ ಸಂಘ, ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಡಾ.ಪಿ.ಬಿ. ರೈ ಪ್ರತಿಷ್ಠಾನ ನೂಜಿ ತರವಾಡು, ಕೆಯ್ಯೂರು ಇವುಗಳ ಸಹಯೋಗದಲ್ಲಿ ಪುತ್ತೂರಿನ ಬಂಟರ ಭವನದಲ್ಲಿ ಶನಿವಾರ ನಡೆದ ದಂಬೆಕಾನ ಸದಾಶಿವ ರೈ ರಚಿತ ʼಬಂಟ ಮದುವೆ' ಕೈಪಿಡಿ ಬಿಡುಗಡೆ, ದಂಬೆಕಾನ ಸದಾಶಿವ ರೈ ಕೊಡುಗೆ ನೀಡಿದ `ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಪ್ರಯೋಗಾಲಯ' ಉದ್ಘಾಟನೆ  ಮತ್ತು ಅಣಿಲೆ ವೆಂಕಪ್ಪ ರೈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಬಂಟ ಸಮುದಾಯದಲ್ಲಿ ಹಿಂದೆಲ್ಲಾ ಮಾವಂದಿರು ಮದುವೆ ಕಾರ್ಯ ನಡೆಸುತ್ತಿದ್ದರು. ಬಳಿಕ ಅದು ಭಟ್ರುಗಳ ಕೆಲಸವಾಯಿತು. ಆ ಬಳಿಕ ಆದು ಫೋಟೋ ಗ್ರಾಫರ್‍ಗಳು, ಈವೆಂಟ್‍ನವರು ನಡೆಸಲು ಆರಂಭಿಸಿದರು. ಇಂತಹ ಬದಲಾವಣೆಗಳ ನಡುವೆ ಬಂಟ ಸಮಾಜದ ಮದುವೆ ವಿಚಾರದಲ್ಲಿ ದಂಬೆಕಾನ ಸದಾಶಿವ ರೈ ಅವರು ಬರೆದಿರುವ ʼಬಂಟ ಮದುವೆ' ಕೈಪಿಡಿ ಸಂಪ್ರದಾಯ ಉಳಿಸಲು ಸಹಕಾರಿಯಾಗಿದೆ ಎಂದರು. 

ಬಂಟ ಸಮುದಾಯ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಈ ಹಿಂದೆ ಬಂಟ್ಸ್ ಹಾಸ್ಟೆಲ್ ನಿರ್ಮಿಸಿ ಕಲಿಯಲು ಪ್ರೋತ್ಸಾಹ ನೀಡಲಾಗಿತ್ತು. ಬಳಿಕ ಮದುವೆ ಹಾಲ್‍ಗಳನ್ನು ನಿರ್ಮಿಸಿ ಮದುವೆಗೆ ಸಹಕಾರ ನೀಡಲಾಗಿತ್ತು. ಕಳೆದ 40 ವರ್ಷಗಳಿಂದ ಸಾಕಷ್ಟು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಜಾತಿ ಧರ್ಮಗಳ ಬೇಧವಿಲ್ಲದೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದೆ. ಈ ಮೂಲಕ ವಿದ್ಯಾವಂತ ಸಮಾಜವನ್ನು ನಿರ್ಮಾಣ ಮಾಡುತ್ತಿದೆ ಎಂದರು. 

ಈ ಸಂದರ್ಭದಲ್ಲಿ ಮಂಜುನಾಥ ಭಂಡಾರಿ ಅವರು ಬಂಟರ ಯಾನೆ ನಾಡವರ ಮಾತ್ರ್ ಸಂಘದ ಅಧ್ಯಕ್ಷ ಅಜಿತ್ ರೈ ಮಾಲಾಡಿ ಅವರಿಗೆ `ಅಣಿಲೆ ವೆಂಕಪ್ಪ ರೈ' ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು ಹಾಗೂ ಬಂಟ ಮದುವೆ ಕೈಪಿಡಿ ಕೃತಿಯನ್ನು ಲೋಕಾರ್ಪಣೆಗೊಳಿಸಿದರು. 

ಶ್ರೀ ರಾಮಕೃಷ್ಣ ಪ್ರೌಢಶಾಲೆಗೆ ದಂಬೆಕಾನ ಸದಾಶಿವ ರೈ ಅವರು ಕೊಡುಗೆಯಾಗಿ ನೀಡಿದ ಮೂರುವರೆ ಲಕ್ಷ ರೂ. ವೆಚ್ಚದ ವಿಶೇಷ ವಿಜ್ಞಾನ ಪ್ರಯೋಗಾಲಯವನ್ನು ಉದ್ಘಾಟಿಸಿದ ಅಜಿತ್ ಕುಮಾರ್ ರೈ ಮಾಲಾಡಿ ಅವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಭಾ ಕಾರ್ಯಕ್ರಮವನ್ನು ದಂಬೆಕಾನ ಸದಾಶಿವ ರೈ ದಂಪತಿ ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ವಿಜ್ಞಾನ ಪ್ರಯೋಗಾಲಯ ನಿರ್ಮಾಣಗೊಳಿಸಿದ ಕೊಡಗು ಜಿಲ್ಲೆಯ ಸೋಮವಾರಪೇಟೆ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಇಬ್ರಾಹಿಂ ಎಸ್.ಎಂ. ಅವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. 

ಬಂಟರ ಯಾನೆ ನಾಡವರ ಮಾತ್ರ್ ಸಂಘದ ಪುತ್ತೂರು  ತಾಲೂಕು ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು, ಬಂಟರ ಸಂಘ ಪುತ್ತೂರು ತಾಲೂಕು ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಮಾತ್ರ್ ಸಂಘದ ಕೋಶಾಧಿಕಾರಿ ಕೃಷ್ಣಪ್ರಸಾದ್ ರೈ, ದಂಬೆಕಾನ ಸದಾಶಿವ ರೈ ಅವರ ಪತ್ನಿ  ಪ್ರಭಾ ಎಸ್ ರೈ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಚಿಕ್ಕಪ್ಪ ನಾಯ್ಕ್, ಕುಂಬ್ರ ದುರ್ಗಾಪ್ರಸಾದ್ ರೈ, ನಿರಂಜನ ರೈ ಮಠಂತಬೆಟ್ಟು, ಜಯಪ್ರಕಾಶ್ ರೈ, ರಮೇಶ್ ರೈ ಸಾಂತ್ಯ, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯಗುರು ವಿಜಯಲಕ್ಷ್ಮೀ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಂಟರ ಯಾನೆ ನಾಡವರ ಮಾತ್ರ್ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ರಾಕೇಶ್ ರೈ ಕೆಡೆಂಜಿ ನಿರೂಪಿಸಿದರು.
ಬಂಟ ಮದುವೆ ಕೈಪಿಡಿಯನ್ನು ಮಂಜುನಾಥ ಭಂಡಾರಿ ಲೋಕಾರ್ಪಣೆಗೊಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News