ಕಪ್ಪುಪಟ್ಟಿ ಧರಿಸಿ ಕ್ರೀಡಾಂಗಣಕ್ಕಿಳಿದ ಪಾಕಿಸ್ತಾನ ಕ್ರಿಕೆಟಿಗರು: ಕಾರಣವೇನು ಗೊತ್ತೇ?

Update: 2022-08-29 11:52 GMT

ದುಬೈ: ಯುಎಇಯಲ್ಲಿ ನಡೆಯುತ್ತಿರುವ ಭಾರತ ಹಾಗೂ ಪಾಕ್ ಏಷ್ಯಾ ಕಪ್ ಟಿ–ಟ್ವೆಂಟಿ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನ ಆಟಗಾರರು ಕೈಗೆ ಕಪ್ಪು ಬಟ್ಟೆ ಧರಿಸಿ ಆಟ ಆಡಿರುವುದು ಕ್ರಿಕೆಟ್‌ ಅಭಿಮಾನಿಗಳ ಗಮನ ಸೆಳೆದಿದೆ.  ಸಾಧಾರಣವಾಗಿ, ಕಪ್ಪು ಪಟ್ಟಿಯನ್ನು ಪ್ರತಿರೋಧದ ಸಂಕೇತವಾಗಿ ಬಳಸುವ ಹಿನ್ನೆಲೆಯಲ್ಲಿ ಪಾಕ್‌ ಆಟಗಾರರ ವರಸೆಯಿಂದ ಅನೇಕರು ಗೊಂದಲಕ್ಕೆ ಒಳಗಾಗಿದ್ದರು.

ಬಳಿಕ ಪಾಕಿಸ್ತಾನ ಕ್ರಿಕೆಟ್ ಬೋರ್ಡ್(ಪಿಸಿಬಿ) ಈ ಬಗ್ಗೆ ಸ್ಪಷ್ಟನೆ ನೀಡಿ, ಗೊಂದಲಕ್ಕೆ ತೆರೆ ಎಳೆದಿದೆ. ಪಾಕಿಸ್ತಾನದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಮಡಿದವರಿಗಾಗಿ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಆಟಗಾರರು ಕಪ್ಪು ಪಟ್ಟಿ ಧರಿಸಿ ಆಡಿದ್ದಾರೆ ಎಂದು ಪಿಸಿಬಿ ತಿಳಿಸಿದೆ.

ಪಾಕಿಸ್ತಾನದಲ್ಲಿ ಈ ವರ್ಷದ ಮಾನ್ಸೂನ್ ಪ್ರವಾಹದಲ್ಲಿ 1,033 ಮಂದಿ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ರವಿವಾರ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ.

ಕಳೆದ 24 ಗಂಟೆಗಳಲ್ಲಿ ಪಾಕಿಸ್ತಾನದ ವಿವಿಧೆಡೆ ಭಾರೀ ಮಳೆಯಾಗುತ್ತಿದ್ದು, 119 ಜನರು ಮೃತಪಟ್ಟಿದ್ದಾರೆ ಎಂದು ಪ್ರಾಧಿಕಾರ ಬಿಡುಗಡೆ ಮಾಡಿರುವ ಅಂಕಿಅಂಶ ಹೇಳಿದೆ.

ಭಾರತ ಉಪಖಂಡದಲ್ಲಿ ಈ ವರ್ಷದಲ್ಲಿ ಬಂದ ಮಾನ್ಸೂನ್ ಪ್ರವಾಹವು ಸುಮಾರು 3.3 ಕೋಟಿಗೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರವಾಹದಲ್ಲಿ ಪಾಕಿಸ್ತಾನದ ಪ್ರತಿ ಏಳು ಮಂದಿಯಲ್ಲಿ ಒಬ್ಬರಿಗೆ ಹಾನಿಯಾಗಿದೆ ಎಂದು ಹೇಳಲಾಗಿದೆ.

ಭೀಕರ ಪ್ರವಾಹಕ್ಕೆ ಪಾಕಿಸ್ತಾನದ 20 ಲಕ್ಷ ಎಕರೆಗೂ ಹೆಚ್ಚು ಕೃಷಿ ಬೆಳೆಗಳು ನಾಶವಾಗಿದ್ದು, 3,451 ಕಿಲೋಮೀಟರ್ ರಸ್ತೆಗಳು ಧ್ವಂಸಗೊಂಡಿವೆ.ಹಾಗೂ 149 ಸೇತುವೆಗಳು ನಾಮಾವಶೇಷಗೊಂಡಿದೆ ಎಂದು ಎನ್‌ಡಿಎಂಎ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News