ಸರಕಾರಿ ಸೇವೆಯಲ್ಲಿ ಲಂಚ ಮುಟ್ಟಿಲ್ಲ, ಕಮಿಷನ್ ಪಡೆದಿಲ್ಲ: ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಅವಿನಾಶ್

Update: 2022-08-29 17:20 GMT

ಮಂಗಳೂರು : ತಂದೆ ತಾಯಿಯರ  ಆದರ್ಶ, ಉಜಿರೆಯ ರತ್ನಮಾನಸ ಬುನಾದಿ ಶಿಕ್ಷಣ ಕೇಂದ್ರದಲ್ಲಿ ಪಡೆದ ಮೌಲ್ಯಾಧಾರಿತ ಜೀವನ ಶಿಕ್ಷಣ, ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಪರಮ ಹಂಸರ ತತ್ವಾದರ್ಶಗ ಳಿಂದ ಪ್ರೇರಿತನಾಗಿ ಸರಕಾರಿ ಸೇವೆಗೆ ಸೇರಿ ಸಂವಿಧಾನದ ಆಶಯದಂತೆ ಕಾನೂನು ಪಾಲಿಸಿ ಕಾರ್ಯ ಸಾಧಿಸಿದ ಸಂತೃಪ್ತಿ  ನನ್ನ 9 ವರ್ಷಗಳ ಸರಕಾರಿ ಸೇವೆಯಿಂದ ಪಡೆದಿರುವುದಾಗಿ ಪುತ್ತೂರು ತಾ. ಒಳಮೊಗ್ರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅವಿನಾಶ್ ಹೇಳಿದ್ದಾರೆ.

ಅವರು  ಉಳ್ಳಾಲ ತಾಲೂಕಿನ ಮುಡಿಪು ನಲ್ಲಿರುವ ನವಚೇತನ ಜೀವನ ಶಿಕ್ಷಣ ಕೇಂದ್ರದಲ್ಲಿ ಜನ ಶಿಕ್ಷಣ ಟ್ರಸ್ಟ್ ವತಿಯಿಂದ ಶನಿವಾರ  ಏರ್ಪಡಿಸಲಾಗಿದ್ದ 'ಮಾನವ ಗ್ರಂಥಾಲಯ' ಕಾರ್ಯಕ್ರಮದಲ್ಲಿ  ಪಾಲ್ಗೊಂಡು ತಮ್ಮ ಬದುಕು ವೃತ್ತಾಂತವನ್ನು ತೆರೆದಿಟ್ಟರು.

ತನ್ನ ಹುಟ್ಟು ಬಾಲ್ಯ, ವೃತ್ತಿ ,ಬದುಕು, ಶಿಕ್ಷಣ,ಹೊಟ್ಟೆ ಪಾಡಿಗಾಗಿ ವಿವಿಧ ರಾಜ್ಯ ಹಾಗು ವಿದೇಶದಲ್ಲಿ ಮಾಡಿದ ಕೆಲಸ, ಹಾಲಿ ಮಾಡುತ್ತಿರುವ ಸರಕಾರಿ ಸೇವೆ ಕುರಿತ ನೈಜ ಕಥನವನ್ನು ಮಾನವ ಗ್ರಂಥಾಲಯದ ಓದುಗರ ಮುಂದೆ  ಅವಿನಾಶ್ ತೆರೆದಿಟ್ಟರು.

ಭೃಷ್ಟಾಚಾರ ರಹಿತವಾಗಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಸೇವೆ ನೀಡುವ ಸಂಕಲ್ಪದೊಂದಿಗೆ ಸರಕಾರಿ ಸೇವೆಗೆ ತಾನು  ಸೇರಿದ್ದೇನೆ. ಪಂಚಾಯತ್ ಲೆಕ್ಕಾಧಿಕಾರಿಯಾಗಿ ಅಭಿವೃದ್ಧಿ ಅಧಿಕಾರಿಯಾಗಿ ಕಳೆದ  9 ವರ್ಷಗಳ ಸೇವಾವಧಿಯಲ್ಲಿ ಯಾರಿಂದಲೂ ಲಂಚ ಪಡೆದಿಲ್ಲ, ಕಮಿಷನ್ ಉಡುಗೊರೆ ಗಳನ್ನು ಸ್ವೀಕರಿಸಲಿಲ್ಲ ಅನಿವಾರ್ಯ ಸಂದರ್ಭಗಳಲ್ಲಿ ಒಂದು ಕಪ್ ಚಹಾ ಕುಡಿದಿರಬಹುದು ಎಂದರು.

ಪ್ರಸಕ್ತ ಒಳಮೊಗ್ರು ಪಿಡಿಒ ಆಗಿ ಆಡಳಿತ ಮಂಡಳಿಯ ಸಹಕಾರದಿಂದ ಭ್ರಷ್ಟಾಚಾರ ರಹಿತ ಮಧ್ಯವರ್ತಿಗಳಿಂದ ಮುಕ್ತ ವಾದ ಸ್ವಚ್ಛ, ಉತ್ತಮ ಆಡಳಿತ ನೀಡುವ ನಿರ್ಣಯವನ್ನು ಅಂಗೀಕರಿಸಿ ಸಾಕಾರಗೊಳಿಸಲಾಗುತ್ತಿದೆ. ಪಂಚಾಯತ್ ರಾಜ್ ವ್ಯವಸ್ಥೆಯ  ಬುನಾದಿ ಯಾದ  ಗ್ರಾಮ ಪಂಚಾಯತ್ ನಲ್ಲಿ ಕಾರ್ಯ ನಿರ್ವಹಿಸುತ್ತಿರು ಅವಿನಾಶ್, ಉದ್ಯೋಗದಲ್ಲಿ ಮೇಲು ಕೀಳು ಎಂಬುದಿಲ್ಲ, ಹೇಗೆ ಸೇವೆ ಕೊಡುತ್ತೇವೆ ಎಂಬುದು ಮುಖ್ಯ ಎನ್ನು ತ್ತಾರೆ.

ಜನ ಜೀವನ ಬಾಳೆಪುಣಿಯ ಅಧ್ಯಕ್ಷ ರಮೇಶ ಶೇಣವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉದ್ಯಮಿಗಳಾದ ಇಬ್ರಾಹಿಂ ನಡುಪಪದವು, ರಾಧಾಕೃಷ್ಣ ರೈ ಉಮಿಯ, ರಂಗಕರ್ಮಿ ಶಿವಪ್ರಸಾದ್ ಆಳ್ವ ಕ್ರೀಡಾ ಸಂಘಟಕ ಹೈದರ್ ಕೈರಂಗಳ, ಪಿಡಿಒ ಚಂದ್ರಶೇಖರ ಪಾತೂರು, ಸಾಹಿತಿ ಚಂದ್ರಹಾಸ ಕಣಂತೂರು, ಬಾಳೆಪುಣಿ ಗ್ರಾ.ಪಂ ಕಾರ್ಯದರ್ಶಿ ಆಯಿಷಾ ಭಾನು, ಸೆಲ್ಕೋ ಮಂಗಳೂರು ತಾಲೂಕು ವ್ಯವಸ್ಥಾಪಕ ರವೀನಾ ಕುಲಾಲ್, ಸಮಾಜ ಸೇವಕ ಇಸ್ಮಾಯಿಲ್ ಕಣಂತೂರು, ಮೊದಲಾದವರು ಉಪಸ್ಥಿತರಿದ್ದರು.

ಜನ ಶಿಕ್ಷಣ ಟ್ರಸ್ಟ್ ನ ನಿರ್ದೇಶಕ ಕೃಷ್ಣ ಮೂಲ್ಯ ಸ್ವಾಗತಿಸಿ, ವಂದಿಸಿದರು. ಮಾಜಿ ಒಂಬುಡ್ಸ್ ಮನ್, ದ.ಕ ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಸಮನ್ವಯಕಾರರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News