ಬೆಂಗಳೂರಿನಲ್ಲಿ ಮಳೆ: ಹಲವು ಬಡಾವಣೆ ಜಲಾವೃತ, ಮನೆ ಗೋಡೆ ಕುಸಿತ

Update: 2022-08-30 12:44 GMT

ಬೆಂಗಳೂರು, ಆ.30: ನಗರದಲ್ಲಿ ಸೋಮವಾರ ತಡರಾತ್ರಿ ಸುರಿದ ಮಳೆಗೆ ಹಲವು ಬಡಾವಣೆಗಳು ಜಲಾವೃತಗೊಂಡಿವೆ. ಇದರ ನಡುವೆ ರಾಜಕಾಲುವೆ ಪಕ್ಕದ ಗೋಡೆ ನೆಲಸಮವಾಗಿದ್ದು, ಕೂದಲೆಳೆ ಅಂತರದಲ್ಲಿ ಎರಡು ಕುಟುಂಬ ಪಾರಾಗಿದೆ.

ಬೊಮ್ಮನಹಳ್ಳಿಯ ರೈನ್‍ಬೋ ಲೇಔಟ್, ಅನುಗ್ರಹ ಲೇಔಟ್ ಸೇರಿದಂತೆ ಎರಡು ಬಡಾವಣೆಗಳು ಜಲಾವೃತಗೊಂಡಿವೆ. ಎಂದಿನಂತೆ ಸಾಯಿ ಲೇಔಟ್, ಪೈ ಲೇಔಟ್ ಸಹ ನೀರಿನಿಂದ ಭರ್ತಿಯಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ನೀರು ಹೊರ ಹಾಕುತ್ತಿದ್ದಾರೆ. ಹಲವು ನಿವಾಸಿಗಳನ್ನು ದೋಣಿಗಳ ಮೂಲಕವೂ ಸಾಗಿಸಲಾಯಿತು.

ಗೋಡೆ ಕುಸಿತ: ಮಳೆ ಪ್ರವಾಹಕ್ಕೆ ನಗರದ ನಾಗವಾರ ಬಳಿ ರಾಜಕಾಲುವೆ ಪಕ್ಕದಲ್ಲಿರುವ ಮನೆ ಗೋಡೆ ಕುಸಿದಿದ್ದು, ಕೂದಲೆಳೆ ಕುಟುಂಬ ಅಂತರದಲ್ಲಿ ಪಾರಾಗಿದೆ ಈ ಎರಡು ಕುಟುಂಬಗಳ ಮನೆಯಲ್ಲಿ 4 ಪುಟ್ಟ ಮಕ್ಕಳ ವಾಸವಾಗಿದ್ದರು ಎಂದು ತಿಳಿದುಬಂದಿದೆ.

ನಿನ್ನೆ ಜೋರಾದ ಮಳೆಯಿಂದ ಬೇರೆ ಮನೆಗೆ ತೆರಳಿ ಮಲಗಿದ್ದರು. ಮಂಗಳವಾರ ಬೆಳಗ್ಗೆ ನೋಡಿದರೆ ಮನೆ ಗೋಡೆ ಕುಸಿದಿದೆ. ಈ ಬಗ್ಗೆ ಹಲವು ಬಾರಿ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನ ಆಗಿಲ್ಲವೆಂದು ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದರು.

ಹಾಗೇ, ಮಳೆಯಿಂದಾಗಿ ಕಬ್ಬನ್ ಪಾರ್ಕ್‍ನಲ್ಲಿರುವ ಹೊಂಡಗಳು, ಕಸ್ತೂರಬಾ ರಸ್ತೆಯ ಎಡಬದಿಯಲ್ಲಿರುವ ಹೊಂಡಗಳು ಭರ್ತಿಯಾಗಿವೆ. ನಂದಿನಿ ಲೇಔಟ್ ಮುಖ್ಯರಸ್ತೆಯ 11ನೆ ಕ್ರಾಸ್ ಬಳಿಯ ಮನೆ ಮೇಲೆ ಬೃಹತ್ ಮರ ಉರುಳಿಬಿದ್ದಿದೆ. ಬೃಹತ್ ಮರ ಉರುಳಿದ ಪರಿಣಾಮ ಪಕ್ಕದಲ್ಲಿದ್ದ ವಿದ್ಯುತ್ ಕಂಬ ತುಂಡಾಗಿದೆ. 

ತುಂಡಾದ ವಿದ್ಯುತ್ ಕಂಬ ಮನೆ ಮೇಲೆ ವಾಲಿದೆ. ಮರ ಉರುಳಿಬಿದ್ದ ಮನೆ ಬಳಿಗೆ ಬಿಬಿಎಂಪಿ ಅರಣ್ಯಘಟಕ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅದೇರೀತಿ, ನಗರದಲ್ಲಿ ಸುರಿದ ಮಳೆಗೆ ರಸ್ತೆಗಳು ಕೆರೆಯಂತಾಗಿವೆ. ರಿಚ್ಮಂಡ್ ರಸ್ತೆಯಲ್ಲಿ ಒಂದು ಅಡಿಯಷ್ಟು ನೀರು ನಿಂತಿದೆ. ಬಿಳೇಕಹಳ್ಳಿ ಸಮೀಪದ ಅನುಗ್ರಹ ಲೇಔಟ್ ಪೂರ್ತಿ ನೀರು ನಿಂತಿದೆ. ಯಶವಂತಪುರದ ಪೊಲೀಸ್ ಠಾಣೆ ರಸ್ತೆಗೆ ಅಡ್ಡಲಾಗಿ ಮರದ ಬೃಹತ್ ಕೊಂಬೆ ಬಿದ್ದಿದೆ.

ನಗರ ಮಾತ್ರವಲ್ಲದೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ದೇವನಹಳ್ಳಿಯಲ್ಲಿ ಮಳೆ ಸುರಿದ ಕಾರಣ ಹಲವು ರಸ್ತೆಗಳು ಜಲಾವೃತಗೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News