ಕಷ್ಟಪಟ್ಟು ಪಡೆದ ಸ್ವಾತಂತ್ರ್ಯವನ್ನು ಉಳಿಸುವ ಅಗತ್ಯವಿದೆ: ಸುಧೀರ್ ಕುಮಾರ್ ಮುರೋಳಿ
ಸುಳ್ಯ: ಸ್ವಾತಂತ್ರ್ಯದ 75 ವರ್ಷಗಳ ಸಂಭ್ರಮದ ಕಾಲದಲ್ಲಿದ್ದೇವೆ. ಸ್ವಾತಂತ್ರ್ಯದ ಚರಿತ್ರೆಯನ್ನು ಮತ್ತು ಸಂವಿಧಾನವನ್ನು ಇತಿಹಾಸ ಗೊತ್ತಿಲ್ಲದವರು ತಿರುಸುವ ಕೆಲಸ ಮಾಡುತ್ತಿದ್ದಾರೆ. ಸಂವಿಧಾನ ಆಶಯಗಳನ್ನು ಗಾಳಿಗೆ ತೂರಲಾಗುತ್ತಿದೆ. ಇಂತಹ ಸಂದಿಗ್ಥ ಪರಿಸ್ಥಿತಿಯಲ್ಲಿ ಸ್ವಾತಂತ್ರ್ಯವನ್ನು ಸಂವಿಧಾನವನ್ನು ಉಳಿಸುವ ಹೋರಾಟದ ಅಗತ್ಯವಿದೆ ಎಂದು ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ವಾಗ್ಮಿ ಸುಧೀರ್ ಕುಮಾರ್ ಮುರೋಳಿ ಹೇಳಿದರು.
ಅವರು ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಡೆದ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದ ಸಮಾರೋಪದಲ್ಲಿ ಮುಖ್ಯ ಭಾಷಣ ಮಾಡಿದರು.
ದೇಶದಲ್ಲಿರುವ ಸರಕಾರ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆಯುತ್ತಿದೆ. ಸ್ವಾತಂತ್ರ್ಯ ದಿನದಂತೆ ಅತ್ಯಾಚಾರ ಆರೋಪಿಗಳನ್ನು ಬಿಡುಗಡೆ ಮಾಡಿ ಅವರಿಗೆ ಸ್ವಾಗತ ನೀಡುವಂತಹ ಹೀನ ಸಂಸ್ಕೃತಿಗೆ ಇಳಿದಿದ್ದೇವೆ. ಹಲವು ವರ್ಷಗಳ ನಿರಂತರ ಹೋರಾಟದಿಂದ ಸ್ವಾತಂತ್ರ್ಯವನ್ನು ಕಷ್ಟ ಪಟ್ಟು ಪಡೆದುಕೊಂಡಿದ್ದೇವೆ. ಅದನ್ನು ಮುಂದಿನ ಪೀಳಿಗೆಗೆ ಹಸ್ತಾಂತರ ಮಾಡುವ ಮಹತ್ವದ ಜವಾಬ್ದಾರಿ ನಮ್ಮ ಮೇಲಿದೆ ಎಂದ ಅವರು ದೇಶವನ್ನು ಆಳುವ ಸರಕಾರಕ್ಕೆ ಮಾರ್ಗದರ್ಶನ ಮಾಡಲು ಗುರುವು ಇಲ್ಲ. ನಿರ್ಧಿಷ್ಟವಾದ ಗುರಿಯು ಇಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಗಾಂಧಿಜೀ, ನೆಹರೂ ಅವರ ಬಗ್ಗೆ ಗೊತ್ತಿತ್ತು. ಆದರೆ ಈಗಿನ ನಾಯಕರು ಇತಿಹಾಸ ಗೊತ್ತಿಲ್ಲದೇ ಅವಿವೇಕಿಗಳಾಗಿದ್ದಾರೆ. ಸಾರ್ವಕರ್ ಅವರ ಹೋರಾಟದಿಂದ ಭಾರತದ ಸ್ವಾತಂತ್ರ್ಯದ ಹೋರಾಟ ಆಗಲು ಸಾದ್ಯವಾಗಿಲ್ಲ. ಭಾರತದ ವಿಭಾಜನೆಯನ್ನು ಕಾಂಗ್ರೆಸ್ ಮಾಡಿಲ್ಲ. ಹಿಂದೂ ಮಹಾಸಭಾ ಮತ್ತು ಮುಸ್ಲಿಂ ಲೀಗ್ ಈ ಎರಡು ಸಂಘಟನೆಗಳು ವಿಭಾಜನೆಗೆ ಕಾರಣವಾಗಿದೆ ಎಂದು ಹೇಳಿದರು.
ಜಾಲ್ಸೂರಿನಿಂದ ಸುಳ್ಯ ತನಕ ನಡೆದ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜ ಹಿಡಿದು, ಗಾಂಧಿ ಟೋಪಿ ಧರಿಸಿ ಕಾಂಗ್ರೆಸ್ ಕಾರ್ಯಕರತರು, ನಾಯಕರು ಸೇರಿದಂತೆ ಸಾವಿರಾರು ಮಂದಿ ಹೆಜ್ಜೆ ಹಾಕಿದರು. ಹಿರಿಯರಾದ ಕೇಪು ಸುಂದರ ಮಾಸ್ತರ್, ಹಾಜಿ ಇಸಾಕ್ ಸಾಹೇಬ್ ಹಾಗು ಮಾರ್ಟಿನ್ ಕ್ರಾಸ್ತಾ ಅವರು ತ್ರಿವರ್ಣ ಬಲೂನ್ ಹಾರಿ ಬಿಡುವುದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ ಕಾಂಗ್ರೆಸ್ ನೇತೃತ್ವದಲ್ಲಿ ಮಹಾತ್ಮಾಗಾಂಧಿಯವರು ಅಹಿಂಸಾ ಮಾರ್ಗದಲ್ಲಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಟ್ಟರು. ಆ ಸ್ವಾತಂತ್ರ್ಯವನ್ನು ಉಳಿಸಬೇಕಾದ ಮತ್ತು ನಮ್ಮ ಸಂವಿಧಾನವನ್ನು ಸಂರಕ್ಷಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ವಿಧಾನ ಪರಿಷತ್ ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಕೆಪಿಸಿಸಿ ಸಂಯೋಜಕರಾದ ಜಿ.ಕೃಷ್ಣಪ್ಪ, ಹೆಚ್.ಎಂ.ನಂದಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಂಗ್ರೆಸ್ ಮುಖಂಡರಾದ ನಿತ್ಯಾನಂದ ಮುಂಡೋಡಿ, ಕಾವು ಹೇಮನಾಥ ಶೆಟ್ಟಿ, ಎನ್.ಜಯಪ್ರಕಾಶ್ ರೈ, ಭರತ್ ಮುಂಡೋಡಿ, ಟಿ.ಎಂ.ಶಾಹೀದ್ ತೆಕ್ಕಿಲ್, ಎಂ.ವೆಂಕಪ್ಪ ಗೌಡ, ಡಾ.ಬಿ.ರಘು, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ರಾಜೀವಿ ಆರ್ ರೈ, ದಿವ್ಯ ಪ್ರಭಾ ಚಿಲ್ಯಡ್ಕ, ಪಿ.ಎಸ್.ಗಂಗಾಧರ, ಪಿ.ಪಿ.ವರ್ಗೀಸ್, ಕೆ.ಪಿ.ಥಾಮಸ್, ಸರ್ವೋತ್ತಮ ಗೌಡ, ಎಸ್.ಸಂಶುದ್ದೀನ್, ಬಾಪೂ ಸಾಹೇಬ್, ಕೆ.ಗೋಕುಲ್‍ದಾಸ್, ಬೆಟ್ಟ ರಾಜರಾಮ್ ಭಟ್, ಸೋಮಶೇಖರ ಕೊಯಿಂಗಾಜೆ, ಮಿತ್ರದೇವ ಮಡಪ್ಪಾಡಿ, ಸುರೇಶ್ ಎಂ.ಎಚ್, ಮಹಮ್ಮದ್ ಕುಂಞಿ ಗೂನಡ್ಕ, ಹಸೈನಾರ್ ಹಾಜಿ ಗೋರಡ್ಕ, ಅಶೋಕ್ ಚೂಂತಾರು, ವಹೀದಾ ಇಸ್ಮಾಯಿಲ್, ಲೀಲಾ ಮನಮೋಹನ್, ಸುಧೀರ್ ರೈ ಮೇನಾಲ, ಸದಾನಂದ ಅಬ್ದುಲ್ ಗಫೂರ್ ಕಲ್ಮಡ್ಕ, ಕೆ.ಎಂ.ಮುಸ್ತಫಾ, ಚೆನ್ನಕೇಶವ ಜಾಲ್ಸೂರು, ಇಸ್ಮಾಯಿಲ್ ಪಡ್ಪಿನಂಗಡಿ, ಅಬೂಸಾಲಿ ಗೂನಡ್ಕ, ರಹೀಂ ಬೀಜದಕಟ್ಟೆ, ಶರೀಫ್ ಕಂಠಿ, ಸಿದ್ದಿಕ್ ಕೊಕ್ಕೊ, ಶಾಫಿ ಕುತ್ತಮೊಟ್ಟೆ, ಭವಾನಿಶಂಕರ ಕಲ್ಮಡ್ಕ, ಸಚಿನ್ ರಾಜ್ ಶೆಟ್ಟಿ, ಕಳಂಜ ವಿಶ್ವನಾಥ ರೈ, ಜಯಪ್ರಕಾಶ್ ನೆಕ್ರಪ್ಪಾಡಿ, ಅನಿಲ್ ರೈ ಬೆಳ್ಳಾರೆ, ಶಶಿಧರ ಎಂ.ಜೆ, ಶಾಹುಲ್ ಹಮೀದ್ ಕುತ್ತಮೊಟ್ಟೆ ಮೊದಲಾದವರು ಇದ್ದರು.