ಪ್ರಧಾನಿ ಉದ್ಘಾಟಿಸುವ, ಶಂಕುಸ್ಥಾಪನೆ ನೆರವೇರಿಸುವ ಯೋಜನೆ; ರಾಜ್ಯ ಮತ್ತು ಕೇಂದ್ರ ಸರಕಾರದ ಪಾಲೆಷ್ಟು?: ಯು.ಟಿ.ಖಾದರ್

Update: 2022-08-31 08:57 GMT
ಯು.ಟಿ.ಖಾದರ್

ಮಂಗಳೂರು, ಆ.31: ನಗರ ಹೊರವಲಯದ ಬಂಗ್ರಕೂಳೂರಿನಲ್ಲಿ ಸೆ.2ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಕೆಲವು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಗೊಳ್ಳಲಿದೆ. ಇದರಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದ ಪಾಲೆಷ್ಟು ಎಂದು ರಾಜ್ಯ ವಿಪಕ್ಷ ಉಪನಾಯಕ, ಶಾಸಕ ಯು.ಟಿ.ಖಾದರ್ ಪ್ರಶ್ನಿಸಿದ್ದಾರೆ.

ನಗರದ ಕಾಂಗ್ರೆಸ್ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೋದಿಯ ಕಾರ್ಯಕ್ರಮದ ಯಶಸ್ವಿಗೆ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ತುಂಬಾ ಸಂತೋಷ. ಆದರೆ, ಈ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಮತ್ತು ಕೇಂದ್ರ ಸರಕಾರದ ಅನುದಾನ ಎಷ್ಟೆಷ್ಟಿದೆ ಎಂಬುದು ಸಾರ್ವಜನಿ ಕರಿಗೆ ತಿಳಿಯಬೇಕಾಗಿದೆ. ಅಲ್ಲದೆ ಯೋಜನೆಗಳಲ್ಲಿ ಖಾಸಗಿ ಕಂಪೆನಿಗಳ ಮೊತ್ತಗಳ ಬಗ್ಗೆ ಮಾಹಿತಿಯನ್ನು ಪ್ರಕಟಿಸಬೇಕು ಎಂದು ಒತ್ತಾಯಿಸಿದರು.

ಪ್ರಧಾನಿಯ ಮಂಗಳೂರು ಭೇಟಿಗೆ ಸ್ವಾಗತವಿದೆ. ಆದರೆ ಅದು ಕೇವಲ ಒಂದು ಕಾರ್ಯಕ್ರಮವಾಗಬಾರದು. ಜಿಲ್ಲೆಯ ಅಭಿವೃದ್ಧಿಗಾಗಿ ಹಲವು ಬೇಡಿಕೆಗಳ ಪಟ್ಟಿಯೇ ಇದೆ. ಮುಖ್ಯವಾಗಿ ತುಳು ಭಾಷೆಯನ್ನು 8ನೆ ಪರಿಚ್ಛೇಧಕ್ಕೆ ಸೇರಿಸಬೇಕು, ತುಳುವನ್ನು ರಾಜ್ಯಭಾಷೆ ಎಂದು ಘೋಷಿಸಬೇಕು. ಹೆದ್ದಾರಿಯ ಅನಧಿಕೃತ ಟೋಲ್‌ಗೇಟ್ ತೆರವುಗೊಳಿಸಬೇಕು. ಎಂಆರ್‌ಪಿಎಲ್, ರೈಲ್ವೆ, ಬ್ಯಾಂಕಿಂಗ್‌ನಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು. 2018ರ ಚುನಾವಣೆಯ ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಮಂಗಳೂರಿನಲ್ಲಿ ಎನ್‌ಐಎ ಕಚೇರಿ ಸ್ಥಾಪಿಸಬೇಕು. ಇಂತಹ ಬೇಡಿಕೆಗಳನ್ನು ಪ್ರಧಾನಿಯ ಮುಂದಿಡುವ ಕೆಲಸವನ್ನು ಸಂಸದರು, ಶಾಸಕರು ಮಾಡಬೇಕು. ಅಲ್ಲದೆ ಈ ಬೇಡಿಕೆಗಳನ್ನು ಈಡೇರಿಸುವುದರೊಂದಿಗೆ ಸಮಸ್ಯೆಗಳಿಗೆ ಮುಕ್ತಿ ಕಾಣಿಸಲಿ ಎಂದು ಯು.ಟಿ.ಖಾದರ್ ಆಗ್ರಹಿಸಿದರು.

ನನಗಿನ್ನೂ ಅಧಿಕೃತ ಆಹ್ವಾನ ಬಂದಿಲ್ಲ: ಒಬ್ಬ ಶಾಸಕನ ನೆಲೆಯಲ್ಲಿ ಸೆ.2ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ನನಗೆ ಇನ್ನೂ ಅಧಿಕೃತ ಆಹ್ವಾನ ಬಂದಿಲ್ಲ ಎಂದು ಯು.ಟಿ.ಖಾದರ್ ಹೇಳಿದರು.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಈವರೆಗೆ ನನಗೆ ಅಧಿಕೃತ ಆಹ್ವಾನ ಬಂದಿಲ್ಲ. ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ನಡೆದ ಪೂರ್ವಭಾವಿ ಸಭೆಗಳಿಗೂ ನನಗೆ ಆಹ್ವಾನ ಬಂದಿಲ್ಲ. ಆದರೆ ಸರಕಾರದ ಎಲ್ಲಾ ಇಲಾಖೆಗಳ ಅಧಿಕಾರಿ-ಸಿಬ್ಬಂದಿ ವರ್ಗಕ್ಕೆ ಇಂತಿಷ್ಟು ಫಲಾನುಭವಿಗಳನ್ನು ಕರೆತರಬೇಕು ಎಂಬ ಸೂಚನೆಯು ಹಿರಿಯ ಅಧಿಕಾರಿಗಳಿಂದ ಹೋಗಿದೆ. ಇದು ಸರಿಯಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News