×
Ad

"ಸುಳ್ಯ; ನಾವು 8 ಕುಟುಂಬದವರು ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ"

Update: 2022-08-31 21:33 IST

ಸುಳ್ಯ, ಆ. 31: ಕೊಯಾನಾಡಿನಲ್ಲಿ ಜಲಸ್ಫೋಟಗೊಂಡು ಮನೆಗಳಿಗೆ ನೀರು ನುಗ್ಗಿ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿರುವ ಕೊಯನಾಡಿನ ಜನರು ಸ್ಥಳಕ್ಕೆ ಬಂದ ಶಾಸಕ ಬೋಪಯ್ಯರ ಎದುರೇ ಆಕ್ರೋಶ ವ್ಯಕ್ತಪಡಿಸಿದ್ದು, ನಮಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಇಲ್ಲವಾದರೆ ಕುಟುಂಬ ಸಮೇತ ಪತ್ರ ಬರೆದಿಟ್ಟು ಇದೇ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಮ್ಮ ನೋವನ್ನು ತೋಡಿಕೊಂಡಿರುವ ಘಟನೆ ವರದಿಯಾಗಿದೆ.

ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರನ್ನು ಭೇಟಿಯಾಗಲು ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಅವರು ಆಗಮಿಸಿದ್ದು, ಈ ವೇಳೆ ಶಾಸಕರಲ್ಲಿ ನೋವು ತೋಡಿಕೊಂಡ ಅವರು ಕಿಂಡಿ ಅಣೆಕಟ್ಟು ಮಾಡುವಾಗ ನಮ್ಮ ಅಭಿಪ್ರಾಯ ಕೇಳಿಲ್ಲ. ಈಗ ಸಮಸ್ಯೆ ಆಗಿರುವುದು ನಮಗೆ. ಇದೊಂದು ಪ್ರಕೃತಿ ವಿಕೋಪದಿಂದ ಆಗಿದ್ದರೆ ಯಾವುದೇ ಸಮಸ್ಯೆಯಿರಲಿಲ್ಲ, ಇದು ಮಾನವ ನಿರ್ಮಿತ ವಿಕೋಪವಾಗಿದೆ, ನಮ್ಮನ್ನು ನೀವೆಲ್ಲ ಸೇರಿ ನಿರಾಶ್ರಿತರಾಗಿ ಮಾಡಿದ್ದೀರಿ ಎಂದು ಅಳಲು ತೋಡಿಕೊಂಡರು.

ಮುಖ್ಯಮಂತ್ರಿ ಸೇರಿ ಹಲವು ಸಚಿವರು ಬಂದು ಹೋದರು, ಯಾರಿಂದಲೂ ಪರಿಹಾರ ದೊರಕಿಲ್ಲ, ನೀವು ಕೂಡ ನಮ್ಮ ಸಮಸ್ಯೆಯನ್ನು ಕೇಳುವ ಪರಿಸ್ಥಿತಿಯಲ್ಲಿಲ್ಲ. ನಾವು ಮತ್ತು ಕುಟುಂಬಸ್ಥರೆಲ್ಲರೂ ಇದೇ ಕಿಂಡಿ ಆಣೆಕಟ್ಟುವಿನಿಂದ ಹಾರಿ ಆತ್ಮಹತ್ಯೆ ಮಾಡುತ್ತೇವೆ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರು ಒಂದು ಹಂತದಲ್ಲಿ ಜನರನ್ನು ಸಮಾಧಾನಿಸುವ ಪ್ರಯತ್ನ ಮಾಡಿದರಾದರೂ ಅಲ್ಲಿಯ ನಿರಾಶ್ರಿತರ ಪ್ರಶ್ನೆಗೆ ಸಮರ್ಪಕ ಉತ್ತರ ನೀಡದೆ ತೆರಳಿದರು. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗುತ್ತಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News