ಮುರುಘಾ ಶ್ರೀ ವಿರುದ್ಧದ ಆರೋಪ ಗಂಭೀರ ಸ್ವರೂಪದ್ದಾಗಿದ್ದು, ನಿಷ್ಪಕ್ಷಪಾತ ತನಿಖೆಯಾಗಲಿ: ಸಿದ್ದರಾಮಯ್ಯ ಒತ್ತಾಯ
ಬೆಂಗಳೂರು, ಸೆ.2: ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಆರೋಪ ಗಂಭೀರ ಸ್ವರೂಪದ್ದಾಗಿದೆ. ಈ ಬಗ್ಗೆ ಪೊಲೀಸರು ಯಾವುದೇ ಒತ್ತಡಕ್ಕೊಳಗಾಗದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಚಿತ್ರದುರ್ಗದ ಮುರುಘಾ ಮಠದ ಸ್ವಾಮಿಗಳ ವಿರುದ್ಧದ ಆರೋಪ ಗಂಭೀರ ಸ್ವರೂಪದ್ದಾಗಿದೆ. ಪೊಲೀಸರು ಯಾವುದೇ ಒತ್ತಡಕ್ಕೊಳಗಾಗದೆ ಸಂತ್ರಸ್ತ ವಿದ್ಯಾರ್ಥಿನಿಯರ ದೂರಿನ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಸತ್ಯಸಂಗತಿಯನ್ನು ಬಹಿರಂಗಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ದೂರಿನ ಹಿನ್ನೆಲೆಯಲ್ಲಿ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪೊಕ್ಸೊ (POCSO) ಪ್ರಕರಣ ದಾಖಲಾಗಿದ್ದು, ಗುರುವಾರ ರಾತ್ರಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಇಂದು ಬೆಳಗ್ಗೆ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಪೊಲೀಸರು ಅವರು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.