'ಪುಣ್ಯಕೋಟಿ ಯೋಜನೆ'ಯ ರಾಯಭಾರಿಯಾಗಿ ಕಿಚ್ಚ ಸುದೀಪ್ ನೇಮಕ
Update: 2022-09-02 14:32 IST
ಬೆಂಗಳೂರು, ಸೆ.2: ಸರಕಾರದ 'ಪುಣ್ಯಕೋಟಿ ಯೋಜನೆ'ಯ ರಾಯಭಾರಿಯಾಗಿ ಕನ್ನಡದ ಹೆಸರಾಂತ ಚಿತ್ರನಟ ಕಿಚ್ಚ ಸುದೀಪ್ ಅವರನ್ನು ನೇಮಿಸಲಾಗಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ. ಚವ್ಹಾಣ್ ತಿಳಿಸಿದ್ದಾರೆ.
ಈ ಕುರಿತು ಸುದೀಪ್ ಅವರಿಗೆ ಪತ್ರ ಬರೆದಿರುವ ಸಚಿವ ಪ್ರಭು ಬಿ. ಚವ್ಹಾಣ್, ಕರ್ನಾಟಕದ ಸರಕಾರದ ಈ ಮಹತ್ವಾಕಾಂಕ್ಷಿ ಯೋಜನೆಯಾದ ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿಯಾಗಿ ನಿಮ್ಮನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ ಎಂದು ಹೇಳಿದ್ದಾರೆ.
ಪಶು ಸಂಗೋಪನೆ ಇಲಾಖೆಯು ಜಾನುವಾರುಗಳ ರಕ್ಷಣೆಗಾಗಿ ಕೈಗೊಂಡಿರುವ ಕಾರ್ಯಕ್ರಮಗಳನ್ನು ಪ್ರಚುರಪಡಿಸಿ ಹೈನುಗಾರಿಕೆಗೆ ಉತ್ತೇಜನ ನೀಡುವ ಕಾರ್ಯದಲ್ಲಿ ಸರಕಾರದ ಜೊತೆ ಕೈಜೋಡಿಸಿ ಸಾರ್ವಜನಿಕರಲ್ಲಿ ಸ್ಫೂರ್ತಿ ತುಂಬಲು ತಮ್ಮನ್ನು ತಮ್ಮ ಜನ್ಮದಿನದ ಈ ಶುಭ ಸಂದರ್ಭದಲ್ಲಿ ಈ ನೇಮಕಾತಿ ಮಾಡಲಾಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.