ರವಿ ಕಟಪಾಡಿ ವೇಷಧರಿಸಿ ಸಂಗ್ರಹಿಸಿದ 14ಲಕ್ಷ ರೂ. 11 ಮಕ್ಕಳ ಚಿಕಿತ್ಸೆಗೆ ಹಸ್ತಾಂತರ
ಕಾಪು: ರವಿ ಕಟಪಾಡಿ ಮತ್ತು ಫ್ರೆಂಡ್ಸ್ ತಂಡವು ಎಂಟನೇ ಬಾರಿಗೆ ಅಷ್ಟಮಿ ವೇಷಧಾರಿಯಾಗಿ ಸಂಗ್ರಹಿಸಿದ 14,36,385 ರೂ.ವನ್ನು 11 ಮಂದಿ ಅನಾರೋಗ್ಯ ಪೀಡಿತ ಬಡ ಮಕ್ಕಳ ವೈದ್ಯಕೀಯ ನೆರವು ಹಸ್ತಾಂತರಿಸುವ ಸಮಾರಂಭ ಮಂಗಳವಾರ ಸಂಜೆ ಕಟಪಾಡಿ ಶ್ರೀ ಕ್ಷೇತ್ರ ಪೇಟೆಬೆಟ್ಟು ಶ್ರೀ ಬಬ್ಬುಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ಜರಗಿತು.
ಕೇಮಾರು ಶ್ರೀ ಸಾಂದೀಪನಿ ಆಶ್ರಮದ ಶ್ರೀ ಈಶ ವಿಟ್ಠಲದಾಸ ಸ್ವಾಮೀಜಿ ಆಶೀರ್ವಚನ ನೀಡಿದರು. ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚೇಂದ್ರ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಮಾತನಾಡಿದರು.
ಈ ಸಂದರ್ಭದಲ್ಲಿ ರವಿ ಕಟಪಾಡಿ ಮತ್ತು ಅವರ ತಾಯಿ ದೇಯಿ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಈವರೆಗೆ ೮ ಬಾರಿ ಅಷ್ಟಮಿ ವೇಷಧಾರಿಯಾಗಿ ಒಟ್ಟು ರೂಪಾಯಿ 1,04,30,685ರೂ. ಹಣವನ್ನು ಬಡ ಅಶಕ್ತ ಮಕ್ಕಳ ವೈದ್ಯಕೀಯ ಚಿಕಿತ್ಸೆಗಾಗಿ ರವಿ ಕಟಪಾಡಿ ನೀಡಿದ್ದಾರೆ.
ಬರ್ಕೆ ಫ್ರೆಂಡ್ಸ್ ಸಂಸ್ಥಾಪಕ ಯಜ್ನೇಶ್ ಬರ್ಕೆ, ಉದ್ಯಾವರ ಜಯಲಕ್ಷ್ಮಿ ಸಿಲ್ಕ್‌ನ ರವೀಂದ್ರ ಹೆಗ್ಡೆ, ಬರ್ಕೆ ಫ್ರೆಂಡ್ಸ್ ಅಧ್ಯಕ್ಷ ಕಿಶನ್ ಕುಮಾರ್, ಸುಚೀಂದ್ರ, ಕಟಪಾಡಿ ಪೇಟೆಬೆಟ್ಟು ಶ್ರೀಬಬ್ಬುಸ್ವಾಮಿ ಕೊರಗಜ್ಜ ದೈವಸ್ಥಾನದ ಗುರಿಕಾರ ಹರಿಶ್ಚಂದ್ರ ಪಿಲಾರು ಮೊದಲಾದವರು ಉಪಸ್ಥಿತರಿದ್ದರು. ರವಿ ಫ್ರೆಂಡ್ಸ್ ಮಾರ್ಗದರ್ಶಕ ಮಹೇಶ್ ಶೆಣೈ ಸ್ವಾಗತಿಸಿದರು. ದಿನೇಶ್ ಸುವರ್ಣ ರಾಯಿ ನಿರೂಪಿಸಿ, ವಂದಿಸಿದರು.