ಜ.10-11: ತ್ರಾಸಿ ಮರವಂತೆ 10ಕಿ.ಮೀ. ಓಟ -ಕಡಲ್ಸೋತ್ಸವ
ಉಡುಪಿ, ಡಿ.19: ಬೈಂದೂರು ಬಿಎಲ್ ಸ್ಪೋಟ್ಸ್ ಫೌಂಡೇಶನ್ ಹಾಗೂ ಬೆಂಗಳೂರು ರೆಡ್ ಎಲೆಮೆಂಟ್ಸ್ ವತಿಯಿಂದ ತ್ರಾಸಿ ಮರವಂತೆ 10ಕಿ.ಮೀ. ಓಟ ಹಾಗೂ ಕಡಲ್ಸೋತ್ಸವವನ್ನು ಜ.10 ಮತ್ತು 11ರಂದು ತ್ರಾಸಿ ಮರವಂತೆ ಕಡಲತೀರದಲ್ಲಿ ಹಮ್ಮಿಕೊಳ್ಳಲಾಗಿದೆ.
ಉಡುಪಿಯಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೌಂಡೇಶನ್‌ನ ಸ್ಥಾಪಕ ನಿರ್ದೇಶಕ ಪ್ರವೀಣ್ ಶೆಟ್ಟಿ, ಸ್ಥಳೀಯ ಪ್ರವಾಸೋದ್ಯಮ ಮತ್ತು ಆರ್ಥಿಕ ಉತ್ತೇಜನ, ಆರೋಗ್ಯ, ಫಿಟ್ನೆಸ್ ಮತು ಕ್ರೀಡಾ ಸಂಸ್ಕೃತಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ವನ್ನು ಆಯೋಜಿಸಲಾಗಿದೆ ಎಂದರು.
ಕಡಲತೀರದ ಬಳಿ ನಡೆಯುವ 10ಕಿ.ಮೀ. ಓಟದಲ್ಲಿ ವಿಜೇತರಿಗೆ ಪ್ರತಿ ವಿಭಾಗದಲ್ಲೂ 50ಸಾವಿರ, 35ಸಾವಿರ 25ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ಅದೇ ರೀತಿ 3 ಕಿ.ಮೀ. ಓಟ ಮತ್ತು ಮೋಜಿನ ಓಟ ಕೂಡ ನಡೆಯಲಿದೆ. ಎಲ್ಲ ವಿಭಾಗಗಳಲ್ಲಿ ಒಟ್ಟು 10ಲಕ್ಷ ರೂ.ಗಿಂತ ಅಧಿಕ ನಗದು ಬಹುಮಾನ ನೀಡಲಾಗುವುದು.
ಎರಡು ದಿನಗಳ ಕಾಲ ಸಂಸ್ಕೃತಿ, ಕ್ರೀಡೆ, ಮನರಂಜನೆ, ಆಹಾರ ಮತ್ತು ಕುಟುಂಬಗಳಿಗಾಗಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪ್ರದರ್ಶನ, ಅಂತರ ಕಾಲೇಜು ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳು, ಬೀಚ್ ಕ್ರೀಡೆಗಳಾದ ವಾಲಿಬಾಲ್, ಕಬಡ್ಡಿ, ಲಗೋರಿ, ಹಗ್ಗಜಗ್ಗಾಟ, ಸುಡುಮದ್ದು ಪ್ರದರ್ಶನ, ಸಂಗೀತ ಕಾರ್ಯಕ್ರಮ ಗಳು ನಡೆಯಲಿವೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ನಂದಿನಿ, ಆರ್‌ಜೆ ನಯನ, ಜೀತು ರಾಧಾಕೃಷ್ಣನ್, ರಾದೇಶ್, ದೀಪಕ್ ಮೊದಲಾದವರು ಉಪಸ್ಥಿತರಿದ್ದರು.