×
Ad

ಕೇಂದ್ರ ಸರಕಾರದ ‘ವೋಟ್ ಚೋರಿ’ ಹಗರಣದ ಬಗ್ಗೆ ಜನಜಾಗೃತಿ| ಡಿ.20ರಂದು ಕಾಂಗ್ರೆಸ್‌ನಿಂದ ಉಡುಪಿಯಲ್ಲಿ ಮಾನವ ಸರಪಳಿ

ಸಹಿ ಸಂಗ್ರಹ ಅಭಿಯಾನದ ಸಮಾರೋಪ

Update: 2025-12-19 20:22 IST

ಉಡುಪಿ, ಡಿ.19: ಕೇಂದ್ರ ಸರಕಾರ ಚುನಾವಣಾ ಆಯೋಗದೊಂದಿಗೆ ಸೇರಿ ನಡೆಸುತ್ತಿರುವ ‘ವೋಟ್ ಚೋರಿ’ ಹಗರಣದ ವಿರುದ್ಧ ಜಿಲ್ಲೆಯಲ್ಲಿ ಜನಜಾಗೃತಿಗಾಗಿ ಜಿಲ್ಲಾ ಕಾಂಗ್ರೆಸ್ ಕೈಗೊಂಡಿರುವ ಸಹಿ ಸಂಗ್ರಹ ಅಭಿಯಾನ ಸಮಾರೋಪ ಡಿ.20ರಂದು ಉಡುಪಿಯಲ್ಲಿ ನಡೆಯಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕಕುಮಾರ್ ಕೊಡವೂರು ತಿಳಿಸಿದ್ದಾರೆ.

ನಾಯರ್‌ಕೆರೆಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶನಿವಾರ ಬೆಳಗ್ಗೆ 9:30ಕ್ಕೆ ಉಡುಪಿ ಸಿಟಿ ಬಸ್ ನಿಲ್ದಾಣದಿಂದ ಮಣಿಪಾಲ ಸಿಂಡಿಕೇಟ್ ವೃತ್ತದವರೆಗೆ ಸುಮಾರು ನಾಲ್ಕು ಕಿ.ಮೀ. ಉದ್ದದ ಮಾನವ ಸರಪಳಿಯಲ್ಲಿ ಸಾವಿರಾರು ಕಾಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದರು.

ದೇಶದ ವಿವಿಧ ರಾಜ್ಯಗಳಲ್ಲಿ ನಡೆದಿರುವ ಚುನಾವಣೆಗಳಲ್ಲಿ ಕೇಂದ್ರ ಸರಕಾರದಿಂದ ನಡೆದಿರುವ ಮತ ಕಳ್ಳತನದ ವಿರುದ್ಧ ವಿರುದ್ಧ ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರೂ, ಆಯೋಗ ಯಾವುದೇ ಕ್ರಮ ಕೈಗೊಳ್ಳದಿರುವುದು ಸಂಶಯಕ್ಕೆ ಎಡೆ ಮಾಡಿದೆ. ಮತಗಳ್ಳತನದ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ದುರ್ಬಲ ಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಮತಗಳ್ಳತನದ ಕುರಿತಂತೆ ನಮ್ಮ ನಾಯಕ ರಾಹುಲ್ ಗಾಂಧಿ ದೇಶದ ಮುಂದೆ ಎತ್ತಿರುವ ಪ್ರಶ್ನೆ ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ನೇರವಾಗಿ ಸಂಬಂಧಿಸಿವೆ. ಈ ಬಗ್ಗೆ ದೇಶದ ಪ್ರತಿಯೊಬ್ಬ ನಾಗರಿಕ ನೂ ಗಂಭೀರವಾಗಿ ಆಲೋಚಿಸಬೇಕಿದೆ ಎಂದು ಅಶೋಕ್ ಕೊಡವೂರು ನುಡಿದರು.

ಮುಖ್ಯ ನ್ಯಾಯಮೂರ್ತಿಯನ್ನು ಚುನಾವಣಾ ಆಯೋಗದ ಆಯ್ಕೆ ಸಮಿತಿಯಿಂದ ಯಾಕೆ ತೆಗೆದು ಹಾಕಲಾಗಿದೆ? ಚುನಾವಣಾ ಆಯೋಗದ ಮುಖ್ಯಸ್ಥರು ಅಕ್ರಮ ಎಸಗಿದರೂ ಯಾವುದೇ ಕಾಲಕ್ಕೂ ಶಿಕ್ಷೆಯಾಗದಂತೆ ರಕ್ಷಣೆ ನೀಡುವ ಕಾನೂನನ್ನು 2024ರ ಚುನಾವಣೆಗೆ ಮೊದಲೇ ಜಾರಿಗೊಳಿಸಿದ್ದು ಏಕೆ? ಸಿಸಿಟಿವಿ ಫೂಟೇಜ್‌ನ್ನು 45 ದಿನಗಳಲ್ಲಿ ನಾಶಪಡಿಸುವ ತುರ್ತು ಏನಿತ್ತು? ಇದರ ಹಿಂದಿರುವ ಹುನ್ನಾರ ಏನೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಪ್ರಶ್ನಿಸಿದರೂ ಸರಕಾರ ಉತ್ತರಿಸಿಲ್ಲ ಎಂದರು.

ಸಂವಿಧಾನ, ಚುನಾವಣೆ, ಮತದಾನದ ಪಾವಿತ್ಯಕ್ಕೆ ಸಂಬಂಧಿಸಿ ಉಡುಪಿ ಜಿಲ್ಲೆಯಲ್ಲಿ 1.30ಲಕ್ಷ ಸಹಿ ಸಂಗ್ರಹಿಸಿ ದಿಲ್ಲಿಗೆ ಕಳಿಸಲಾಗಿದೆ. ಜಿಲ್ಲೆಯ 1,111 ಬೂತ್‌ಗಳಲ್ಲಿ 100ರಿಂದ 150 ಜನರು ಸಹಿ ಹಾಕಿದ ಪ್ಲೆಕ್ಸ್ ಪ್ರದರ್ಶನವನ್ನು ಮಾನವ ಸರಪಳಿ ನಡೆವ 4ಕಿ.ಮೀ. ಹಾದಿಯುದ್ದಕ್ಕೂ ಮಾಡಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತ ರಿದ್ದ ಮಾಜಿ ಸಚಿವ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ತಿಳಿಸಿದರು.

ಪ್ರಜಾಪ್ರಭುತ್ವ ಉಳಿವಿಗಾಗಿ ನಡೆದಿರುವ ಹೋರಾಟದಲ್ಲಿ ನಾಳೆ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜ, ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ, ವಿನಯಕುಮಾರ್ ಸೊರಕೆ, ಗೋಪಾಲ ಪೂಜಾರಿ, ಪ್ರಸಾದ್ ರಾಜ್ ಕಾಂಚನ್, ಮುನಿಯಾಲು ಉದಯ ಕುಮಾರ್ ಶೆಟ್ಟಿ ಮುಂತಾದವರು ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲೆಯ ಕಾಂಗ್ರೆಸ್ ನಾಯಕರಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಜ್ಯೋತಿ ಹೆಬ್ಬಾರ್, ಪ್ರಶಾಂತ್ ಜತ್ತನ್ನ, ದಿನೇಶ್ ಹೆಗ್ಡೆ ಮೊಳಹಳ್ಳಿ, ವೈ.ಸುಕುಮಾರ್, ಶರ್ಫುದ್ದೀನ್ ಶರೀಫ್, ರಾಘವೇಂದ್ರ ಶೆಟ್ಟಿ, ಕಿರಣ್ ಹೆಗ್ಡೆ, ಭಾಸ್ಕರ ರಾವ್ ಕಿದಿಯೂರು, ರಾಜು ಪೂಜಾರಿ, ರಮೇಶ್ ಕಾಂಚನ್, ಅಣ್ಣಯ್ಯ ಶೇರಿಗಾರ್, ಗೋಪಿನಾಥ ಭಟ್ ಉಪಸ್ಥಿತರಿದ್ದರು.

ಉಡುಪಿಯಲ್ಲೂ ಮತಗಳ್ಳತನದಿಂದ ಸೋಲು!

ಕಳೆದ 10ವರ್ಷಗಳಿಂದ ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಬಿಜೆಪಿ ಮಾಡುತ್ತಿರುವ ಮತಗಳ್ಳತನವೇ ಕಾರಣ ಎಂದು ಅಶೋಕಕುಮಾರ್ ಕೊಡವೂರು ಆರೋಪಿಸಿದರು.

ಬಿಜೆಪಿ ಉಡುಪಿಯಲ್ಲೂ ಮತಕಳ್ಳತನ ನಡೆಸಿದ್ದು, ಇದರಿಂದ ಕಾಂಗ್ರೆಸ್ ನಾಯಕರಿಗೆ ಸೋಲಾಗಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಂದಾಪುರ ಕ್ಷೇತ್ರದಲ್ಲಿ ಸಿಕ್ಕಿತ್ತು ಎಂದ ಅವರು ಈ ಕುರಿತಂತೆ ಕಾರ್ಯಕರ್ತರಿಗೆ ಅರಿವು ಮೂಡಿಸುವ ಕೆಲಸವಾಗುತ್ತಿದೆ ಎಂದು ತಿಳಿಸಿದರು.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News