ಬೆಂಗಳೂರು ಬಿಟ್ಟು ಹೋಗುವುದಾಗಿ ಎಚ್ಚರಿಕೆ ನೀಡಿದ ಐಟಿ ಕಂಪೆನಿಗಳು: ಸಿಎಂ ಬೊಮ್ಮಾಯಿಗೆ ಪತ್ರ
ಬೆಂಗಳೂರು, ಸೆ.3: ಮಳೆಯಿಂದ ಸೃಷ್ಟಿಯಾಗಿರುವ ಸಮಸ್ಯೆಗಳನ್ನು ಸೂಕ್ತ ರೀತಿಯಲ್ಲಿ ಸರಿಪಡಿಸದೆ ಇದ್ದಲ್ಲಿ ಬೆಂಗಳೂರಿನಿಂದ ಬೇರೆಡೆ ಐಟಿ ಕಂಪೆನಿಗಳನ್ನು ಸ್ಥಳಾಂತರ ಮಾಡಲಾಗುವುದು ಎಂದು ರಾಜ್ಯ ಸರಕಾರಕ್ಕೆ ಹೊರ ವರ್ತುಲ ರಸ್ತೆ ಕಂಪೆನಿಗಳ ಸಂಘ (ORRCA) ಎಚ್ಚರಿಕೆ ನೀಡಿದೆ.
ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಸಂಘದ ಪ್ರಮುಖರು, ಮಾರತಹಳ್ಳಿ ಸರ್ಜಾಪುರ ಔಟರ್ ರಿಂಗ್‍ರೋಡ್‍ನಲ್ಲಿ ನಿರಂತರವಾಗಿ ಮಳೆ ಸುರಿದ ಪರಿಣಾಮ ಅಲ್ಲಲ್ಲಿ ಮಳೆ ನೀರು ನಿಲ್ಲುತ್ತಿದೆ. ಇದರಿಂದಾಗಿ ಐಟಿ ಕಂಪೆನಿಗಳಿಗೆ ಭಾರೀ ನಷ್ಟವಾಗಿದ್ದು, ಅಂದಾಜು 225 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ.
ಹಾಗಾಗಿ, ಐಟಿ ಕಾರಿಡಾರ್ ಪ್ರದೇಶದಲ್ಲಿ ಸಮಪರ್ಕ ಮೂಲಸೌಕರ್ಯಗಳನ್ನು ಸರಕಾರ ಒದಗಿಸದಿದ್ದರೆ ಐಟಿ ಕಂಪನಿಗಳು ಪರ್ಯಾಯ ಸ್ಥಳ ಹುಡುಕಿಕೊಳ್ಳಲಿವೆ ಎಂದು ತಿಳಿಸಿದ್ದಾರೆ.
ಪ್ರಮುಖವಾಗಿ ಮೂಲಸೌಕರ್ಯಗಳನ್ನು ಸುಧಾರಿಸಬೇಕು. ನಂತರ ಕೆಆರ್ ಪುರಂ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್ ಸುಧಾರಣೆ ಮಾಡಬೇಕು. ಬಿಎಂಟಿಸಿಯಿಂದ ವೋಲ್ವೋ ಬಸ್‍ಗಳನ್ನು ಬಿಡಬೇಕು, ದಟ್ಟಣೆ ತಡೆಯಲು ರಸ್ತೆಬದಿಗಳಲ್ಲಿ ಪಾರ್ಕಿಂಗ್ ನಿಷೇಧಿಸಬೇಕು.
ಪಾದಚಾರಿ ಮಾರ್ಗ ಹಾಗೂ ಸೈಕಲ್ ಸವಾರರಿಗೆ ಅನಕೂಲವಾಗುವ ನಿಟ್ಟಿನಲ್ಲಿ ದಾರಿ ನಿರ್ಮಾಣ ಮಾಡಬೇಕು, ಪಾದಚಾರಿಗಳು ರಸ್ತೆ ದಾಟಲು ಅನುಕೂಲವಾಗುವಂತೆ ಪ್ರತಿ 500 ಮೀಟರ್‍ಗೆ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಮಾಡಬೇಕು ಎಂದು ಸರಕಾರಕ್ಕೆ ಮನವಿ ಮಾಡಿಕೊಂಡಿದೆ.
ಒಂದೊಮ್ಮೆ ತಾನು ಸರಕಾರದ ಮುಂದಿಟ್ಟ ಬೇಡಿಕೆಗಳನ್ನು ಈಡೇರಿಸದಿದ್ದರೆ ಕಂಪೆನಿಗಳು ಪರ್ಯಾಯ ಸ್ಥಳಗಳನ್ನು ಹುಡುಕಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಸಂಘವು ಪತ್ರದಲ್ಲಿ ಉಲ್ಲೇಖಿಸಿದೆ.
ಇದನ್ನೂ ಓದಿ: ಬೆಂಗಳೂರು: ರೇಜರ್ ಪೇ, ಪೇಟಿಎಂ, ಕ್ಯಾಶ್‍ಫ್ರೀ ಘಟಕಗಳ ಮೇಲೆ ಈ.ಡಿ. ದಾಳಿ
Memorandum Submitted by ORRCA to CM @BSBommai : pic.twitter.com/BgTgL4r2tJ
— ORRCA (@Namma_ORRCA) September 1, 2022