×
Ad

ನಾಚಿಕೆಯಿಲ್ಲದೆ ಸುಳ್ಳುಗಳನ್ನು ಹೇಳುತ್ತಿರುವ ಮೋದಿ: ಸೀತಾರಾಂ ಯೆಚೂರಿ

Update: 2022-09-03 18:25 IST

ಬೆಂಗಳೂರು, ಸೆ.3: ತಾನೊಬ್ಬ ಭಾರತದ ಪ್ರಧಾನಿ ಎನ್ನುವುದನ್ನೂ ಮರೆತು ತನ್ನ ಹಾಗೂ ತನ್ನ ಸರಕಾರವನ್ನು ಹೊಗಳುವ ಭರದಲ್ಲಿ ನಾಚಿಕೆಯಿಲ್ಲದೆ ಸುಳ್ಳುಗಳನ್ನು ಹೇಳುತ್ತಿರುವ ನರೇಂದ್ರ ದಾಮೋದರ ಮೋದಿ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಟೀಕಿಸಿದ್ದಾರೆ.

ಐ.ಎನ್.ಎಸ್.ವಿಕ್ರಾಂತ್ ಯುದ್ಧ ನೌಕೆ ಲೋಕಾರ್ಪಣೆಯಾಗುತ್ತಿರುವ ಸಂಗತಿ ಎಲ್ಲ ಭಾರತೀಯರೂ ಹೆಮ್ಮೆಪಡುವುದಾಗಿದೆ. ಇಡೀ ಭಾರತ ಎದ್ದು ನಿಂತು ಭಾರತೀಯ ನೌಕಾದಳವನ್ನು ಅಭಿನಂದಿಸುತ್ತದೆ. ಯುದ್ಧ ವಿಮಾನಗಳನ್ನು ಹೊತ್ತೊಯ್ಯುವ ಈ ದೇಶೀಯ ಯುದ್ಧ ನೌಕೆಯನ್ನು ಭಾರತದಲ್ಲೇ ನಿರ್ಮಿಸಬೇಕೆಂದು 2004ರಲ್ಲಿ ಎಡ ಪಕ್ಷಗಳ ಬೆಂಬಲ ಪಡೆದ ಯುಪಿಎ ಸರಕಾರ ತೀರ್ಮಾನ ಮಾಡಿತು ಎಂದು ಅವರು ಹೇಳಿದ್ದಾರೆ.

ಆಗ ಸಂಚಾರ, ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಕುರಿತ ಸಂಸದೀಯ ಸಮಿತಿಯ ಅಧ್ಯಕ್ಷನಾಗಿ ನಾನು ನೌಕೆ ನಿರ್ಮಾಣ ಮಾಡುವ ಕೊಚಿನ್ ಹಡಗುಕಟ್ಟೆಗೆ ಹೋಗಿ ಸಮೀಕ್ಷೆ ಮಾಡಿದ ನೆನಪು ಇನ್ನೂ ಹಸಿರಾಗಿಯೇ ಇದೆ. ಆ ಸಮಿತಿಯ ಶಿಫಾರಸ್ಸನ್ನು ಅಂಗೀಕರಿಸಿದ ಕೇಂದ್ರ ಸರಕಾರವು ಐ.ಎನ್.ಎಸ್. ವಿಕ್ರಾಂತ್ ಯುದ್ಧ ನೌಕೆಯ ನಿರ್ಮಾಣಕ್ಕೆ ತೀರ್ಮಾನಿಸಿತು ಎಂದು ಸೀತಾರಾಂ ಯೆಚೂರಿ ತಿಳಿಸಿದ್ದಾರೆ.

2014ರ ಚುನಾವಣೆಗೆ ಮುಂಚೆಯೇ ಯುದ್ಧ ನೌಕೆ ಸಿದ್ಧವಾಗಿ ಲೋಕಾರ್ಪಣೆಯಾಯಿತು. ಬಳಕೆಗೆ ಮುಂಚೆ ಕೆಲವು ಕಟ್ಟುನಿಟ್ಟಾದ ಕ್ರಮಗಳನ್ನು ಅನುಸರಿಸಬೇಕಾಗಿತ್ತು. ಈಗ ಅದು ಪೂರ್ಣ ಬಳಕೆಗೆ ಸಿದ್ಧವಾಗಿದೆ. ನಿಜಸ್ಥಿತಿ ಹೀಗಿರುವಾಗ, ಈ ಐ.ಎನ್.ಎಸ್. ವಿಕ್ರಾಂತ್ ಯುದ್ಧ ನೌಕೆಯು ತನ್ನ ಆಡಳಿತಾವಧಿಯಲ್ಲಿ ನಿರ್ಮಾಣವಾಗಿದೆ ಎಂದು ಹೇಳಿಕೊಳ್ಳುವುದು ಪ್ರಧಾನಿ ಪಟ್ಟಕ್ಕೆ ಶೋಭೆ ತರುವ ಮಾತಲ್ಲ. ಆದುದರಿಂದ, ಇಂತಹ ಕೀಳುಮಟ್ಟದ ರಾಜಕೀಯ ಮಾಡಬೇಡಿ ಎಂದು ಸರಕಾರವನ್ನು ಒತ್ತಾಯಿಸುತ್ತೇವೆ ಎಂದು ಸೀತಾರಾಂ ಯೆಚೂರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News