ಅಧಿಕ ಬಡ್ಡಿ ಆಮಿಷವೊಡ್ಡಿ ವಂಚನೆ ಆರೋಪ: ಬೆಂಗಳೂರಿನ ಶುಶೃತಿ ಕೋ ಆಪರೇಟಿವ್ ಬ್ಯಾಂಕ್ ವಿರುದ್ಧ ದೂರು
ಬೆಂಗಳೂರು, ಸೆ.3: ಅಧಿಕ ಬಡ್ಡಿ ಆಮಿಷವೊಡ್ಡಿ ಗ್ರಾಹಕರಿಗೆ ವಂಚಿಸಿರುವ ಆರೋಪದಡಿ ವಿಲ್ಸನ್ ಗಾರ್ಡನ್‍ನ ಶುಶೃತಿ ಕೋ ಆಪರೇಟಿವ್ ಬ್ಯಾಂಕ್ ವಿರುದ್ಧ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ನಗರದ ವಿಲ್ಸನ್ ಗಾರ್ಡನ್ ಹಾಗೂ ರಾಜಗೋಪಾಲನಗರ ಠಾಣೆಯಲ್ಲಿ ಬ್ಯಾಂಕ್ ಅಧ್ಯಕ್ಷ ಶ್ರೀನಿವಾಸ್ ಮೂರ್ತಿ, ಪತ್ನಿ ಧಾರಿಣಿದೇವಿ, ಮಗಳು ಮೋಕ್ಷತಾರ ಹಾಗೂ ನಿರ್ದೇಶಕ ರತ್ನಂ ವಿರುದ್ಧ ಪ್ರತ್ಯೇಕ ದೂರುಗಳು ದಾಖಲಾಗಿವೆ.
ವಿಲ್ಸನ್ ಗಾರ್ಡನ್, ಪೀಣ್ಯಾ, ಚಿಕ್ಕಲಸಂದ್ರ, ರಾಜಗೋಪಾಲನಗರದಲ್ಲಿ ತನ್ನ ಶಾಖೆ ಹೊಂದಿರುವ ಶುಶೃತಿ ಕೋ ಆಪರೇಟಿವ್ ಬ್ಯಾಂಕ್ ಬೇರೆ ಬ್ಯಾಂಕ್‍ಗಳಿಗಿಂತ ಹೆಚ್ಚಿನ ಬಡ್ಡಿ ನೀಡುವ ಆಮಿಷವೊಡ್ಡಿ ನೂರಾರು ಜನರಿಂದ ಹಣ ಡೆಪಾಸಿಟ್ ಮಾಡಿಸಿಕೊಂಡಿತ್ತು. ಬಹುತೇಕ ನಿವೃತ್ತ ನೌಕರರು, ಹಿರಿಯ ನಾಗರಿಕರು ಹೂಡಿಕೆ ಮಾಡಿದ್ದರು ಎನ್ನಲಾಗಿದೆ.
ಮೊದಲು ವಾರ್ಷಿಕ ಶೇ.9ರಷ್ಟು ಬಡ್ಡಿ ನೀಡುತ್ತಿದ್ದ ಬ್ಯಾಂಕ್ ನಂತರ ಶೇ.4ರಷ್ಟು ಬಡ್ಡಿ ನೀಡಲು ಆರಂಭಿಸಿತ್ತು. ಇದರಿಂದಾಗಿ ಬೇಸತ್ತ ಗ್ರಾಹಕರು ತಮ್ಮ ಠೇವಣಿ ಹಣ ವಾಪಸ್ ಪಡೆಯಲು ಮುಂದಾಗಿದ್ದಾರೆ. ಆದರೆ ಹಣ ಹಿಂದಿರುಗಿಸದೇ ಗ್ರಾಹಕರಿಗೆ ಬೆದರಿಕೆ ಹಾಕುತ್ತಿರುವ ಆರೋಪ ಬ್ಯಾಂಕ್‍ನ ಆಡಳಿತ ಮಂಡಳಿ ವಿರುದ್ಧ ಕೇಳಿ ಬಂದಿದೆ.