ಮಂಗಳೂರು: ಆಲ್ಜೈಮರ್ಸ್ ಮಾಸಾಚರಣೆಗೆ ಚಾಲನೆ
ಮಂಗಳೂರು, ಸೆ.3: ನಗರದ ಪೀಪಲ್ಸ್ ಅಸೋಸಿಯೇಶನ್ ಜೆರಿಯಾಟ್ರಿಕ್ ಎಂಪವರ್‌ಮೆಂಟ್ (ಪೇಜ್) ಸಂಸ್ಥೆಯು ಹಮ್ಮಿಕೊಂಡಿರುವ ಮರೆಗುಳಿತನ (ಆಲ್ಜೈಮರ್ಸ್) ಮಾಸ ಆಚರಣೆಗೆ ಶನಿವಾರ ಕದ್ರಿ ಉದ್ಯಾನದಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯರಲ್ಲದೆ ಯುವಜನರೂ ಪಾಲ್ಗೊಂಡಿದ್ದರು. ಮರೆಗುಳಿತನವಿರುವವರ ಬಗ್ಗೆ ಕಾಳಜಿ ವಹಿಸುವ ಮೂಲಕ ಅಲ್ಝೈಮರ್ ಸ್ನೇಹಿ ನಗರವನ್ನಾಗಿ ಮಂಗಳೂರನ್ನು ರೂಪಿಸಲು ಪಣತೊಡುವ ಕುರಿತು ಸಂಕಲ್ಪತೊಟ್ಟರು. ಕೆಂಪು ಹಾಗೂ ಬಿಳಿ ಬಣ್ಣದ ದಿರಿಸು ಧರಿಸಿ ಬಂದಿದ್ದವರು ಹಾಡಿ, ಕುಣಿದರು, ಕಷ್ಟ ಸುಖ ಹಂಚಿಕೊಂಡರು.
ಸಾರ್ವಜನಿಕರಿಗಾಗಿ ಫಿಟ್ನೆಸ್ ಪರೀಕ್ಷೆ, ನೆನಪಿನ ಶಕ್ತಿ ಪರೀಕ್ಷೆ ಹಾಗೂ ಆರೋಗ್ಯ ತಪಾಸಣೆ ನಡೆಸಲಾಯಿತು. ನಡಿಗೆಯಲ್ಲಾಗುವ ಮಾರ್ಪಾಡುಗಳ ಬಗ್ಗೆ ತರಬೇತಿ ನೀಡಲಾಯಿತು.
ಪೇಜ್‌ನ ಟ್ರಸ್ಟಿ ಡಾ. ಪ್ರಭಾ ಅಧಿಕಾರಿ ಮಾತನಾಡಿ ಮರೆಗುಳಿತನವು ವಯೋಸಹಜ ಬೆಳವಣಿಗೆ ಎಂದು ಹೆಚ್ಚಿನವರು ಅಸಡ್ಡೆ ಮಾಡುತ್ತಾರೆ. ಹೊರಗೆ ಬಿಟ್ಟರೆ ಎಲ್ಲಾದರೂ ಹೋಗಬಹುದು ಎಂಬ ಆತಂಕದಿಂದ ಅಂತಹವರ ಕಾಲಿಗೆ ಸರಪಳಿ ಹಾಕುವುದನ್ನೂ ಗಮನಿಸಿದ್ದೇವೆ. ಸಕಾಲದಲ್ಲಿ ಚಿಕಿತ್ಸೆ ಕೊಡಿಸಿದರೆ ಈ ಕಾಯಿಲೆ ಹೊಂದಿರುವವರೂ ಇಳಿವಯಸ್ಸಿನ ದಿನಗಳನ್ನು ಘನತೆಯಿಂದ ಬದುಕಲು ಸಾಧ್ಯ ಎಂದರು.
ಪೇಜ್ನ ಟ್ರಸ್ಟಿ ಜೆರಾಡಿನ್ ಡಿಸೋಜ, ಪೇಜ್‌ನ ಟ್ರಸ್ಟಿ ಮೋಹನ್ ರಾಜ್ ಮಾತನಾಡಿದರು.
ಮರೆಗುಳಿತನ ಮಾಸಾಚರಣೆ ಅಂಗವಾಗಿ ಮರೆಗುಳಿತನದಿಂದ ಬಳಲುತ್ತಿರುವವರಿಗಾಗಿ ಪೇಜ್ ಸಂಸ್ಥೆಯು ಈ ತಿಂಗಳು ವಿವಿಧ ಸ್ಪರ್ಧೆಗಳನ್ನು ಹಾಗೂ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನಗರದ ಪುರಭವನದಲ್ಲಿ ಸೆ.23ರಂದು ಏರ್ಪಡಿಸಿರುವ ಸಮಾರಂಭದಲ್ಲಿ ಬಹುಮಾನ ವಿತರಣೆ ನಡೆಯಲಿದೆ.