ಪ್ರವಾಹ ಪೀಡಿತ ಬೆಂಗಳೂರಿನಲ್ಲಿ ಹೋಟೆಲ್ ರೂಂ ದರ ದುಪ್ಪಟ್ಟು !

Update: 2022-09-07 02:15 GMT
ಬೆಂಗಳೂರು 

ಬೆಂಗಳೂರು: ವ್ಯಾಪಕ ಮಳೆ ಹಾಗೂ ಪ್ರವಾಹ ಪರಿಸ್ಥಿತಿಯಿಂದಾಗಿ ಬೆಂಗಳೂರಿನ ಟೆಕ್ ಕಾರಿಡಾರ್ ಅಕ್ಷರಶಃ ಕಂಗೆಟ್ಟಿದ್ದು, ಸ್ಥಳಾಂತರಿತ ಕುಟುಂಬಗಳು ಅನಿವಾರ್ಯವಾಗಿ ಹೋಟೆಲ್ ರೂಂಗಳನ್ನು ಆಶ್ರಯಿಸಬೇಕಾದ ಸ್ಥಿತಿ ಉದ್ಭವಿಸಿದೆ.

ಆದರೆ ಐಷಾರಾಮಿ ಹೋಟೆಲ್ ಕೊಠಡಿಗಳ ದರ ಒಂದು ರಾತ್ರಿಗೆ 30,000-40,000 ರೂಪಾಯಿಗೆ ಹೆಚ್ಚಿದ್ದು, ನುಂಗಲಾರದ ತುತ್ತಾಗಿದೆ. ಸಾಮಾನ್ಯವಾಗಿ ಇಂಥ ಹೋಟೆಲ್ ದರ ಪ್ರತಿ ದಿನಕ್ಕೆ 10 ಸಾವಿರದಿಂದ 20 ಸಾವಿರ ಇರುತ್ತದೆ.

ಯೆಮಲೂರಿನಲ್ಲಿರುವ ತಮ್ಮ ಐಷಾರಾಮಿ ವಸತಿ ಸಂಕೀರ್ಣ ಪ್ರವಾಹದಲ್ಲಿ ಸಿಲುಕಿಕೊಂಡಿರುವುದರಿಂದ ಹಳೆ ವಿಮಾನ ನಿಲ್ದಾಣ ರಸ್ತೆಯ ಹೋಟೆಲ್ ಒಂದರಲ್ಲಿ ನಾಲ್ಕು ಮಂದಿಯ ಕುಟುಂಬ ಹೋಟೆಲ್ ಮೊರೆ ಹೋಗಿದ್ದು, ಒಂದು ರಾತ್ರಿಗೆ 42,000 ರೂಪಾಯಿ ವೆಚ್ಚ ಮಾಡಿದೆ ಎಂದು ಪರ್ಪಲ್‍ಫ್ರಂಟ್ ಟೆಕ್ನಾಲಜೀಸ್ ಸಿಇಓ ಮತ್ತು ಸಂಸ್ಥಾಪಕಿ ಮೀನಾ ಗಿರೀಶಬಲ್ಲಾ ಹೇಳಿದ್ದಾರೆ.

ವೈಟ್‍ಫೀಲ್ಡ್, ಹೊರವರ್ತುಲ ರಸ್ತೆ, ಹಳೆ ವಿಮಾನ ನಿಲ್ದಾಣ ರಸ್ತೆ ಹಾಗೂ ಕೋರಮಂಗಲದ ಹಲವು ಹೋಟೆಲ್‍ಗಳನ್ನು ಸಂಪರ್ಕಿಸಿದಾಗ, "ಶುಕ್ರವಾರದ ವರೆಗೆ ಎಲ್ಲ ಕೊಠಡಿಗಳು ಕಾಯ್ದಿರಸಲ್ಪಟ್ಟಿವೆ" ಎಂಬ ಉತ್ತರ ಬಂತು. ದುಬಾರಿ ಬೆಲೆ ನೀಡಲು ಸಿದ್ಧರಿದ್ದರೂ, ಹೋಟೆಲ್‍ಗಳಲ್ಲಿ ಕೊಠಡಿಗಳು ಸಿಗುತ್ತಿಲ್ಲ ಎನ್ನುವುದು ವಸತಿ ಸಂಕೀರ್ಣಗಳ ನಿವಾಸಿಗಳ ಅಳಲು. ಪ್ರವಾಹ ನೀರು ಹೆಚ್ಚುವವರೆಗೂ ನಾವು ನಮ್ಮ ವಿಲ್ಲಾದ ಮೊದಲ ಮಹಡಿಯಲ್ಲಿ ವಾಸ್ತವ್ಯ ಇರಬಹುದು ಎಂದು ತೀರ್ಮಾನಿಸಿದ್ದೆವು. ಆದರೆ ಪರ್ಯಾಯ ವಿದ್ಯುತ್ ವ್ಯವಸ್ಥೆ ಕೈಕೊಟ್ಟಿತು. ನಮಗೆ ಇದ್ದ ಏಕೈಕ ಆಯ್ಕೆ ಎಷ್ಟೇ ದುಬಾರಿ ದರ ತೆತ್ತಾದರೂ ಹೋಟೆಲ್‍ಗೆ ಸ್ಥಳಾಂತರಗೊಳ್ಳುವುದು ಎಂದು ನಿವಾಸಿಯೊಬ್ಬರು ಹೇಳಿದರು.

ಹಲವು ಹೋಟೆಲ್‍ಗಳಲ್ಲಿ ಸಾಕುಪ್ರಾಣಿಗಳನ್ನು ಹೊಂದಿದ ಅತಿಥಿಗಳಿಗೆ ಅವಕಾಶ ನೀಡುತ್ತಿಲ್ಲ. ಕೆಲವೆಡೆ ಈ ಕಾರಣಕ್ಕಾಗಿ ದುಬಾರಿ ದರ ಆಗ್ರಹಿಸಲಾಗುತ್ತಿದೆ. ಬಹುತೇಕ ತಾರಾ ಹೋಟೆಲ್‍ಗಳ ಕೊಠಡಿಗಳು ಮುಂದಿನ 15 ದಿನಗಳಿಗೆ ಕಾಯ್ದಿರಿಸಲ್ಪಟ್ಟಿದೆ ಎಂದು ಅವರು ತಿಳಿಸಿದ್ದು, ಈ ಬಗ್ಗೆ timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News