ಉಮೇಶ್ ಕತ್ತಿ ನಿಧನಕ್ಕೆ ಪ್ರಧಾನಿ ಮೋದಿ, ಸಿದ್ದರಾಮಯ್ಯ ಸಂತಾಪ

Update: 2022-09-07 05:17 GMT
ಉಮೇಶ್ ಕತ್ತಿ 

ಬೆಂಗಳೂರು, ಸೆ.7: ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ (Umesh Katti) ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi, Prime Minister of India) ತೀವ್ರ ಸಂತಾಪ ಸೂಚಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, ಉಮೇಶ ಕತ್ತಿ ಕರ್ನಾಟಕದ ಅಭಿವೃದ್ಧಿಗೆ ಉತ್ಕೃಷ್ಟ ಕೊಡುಗೆಗಳನ್ನು ನೀಡಿದ ಅನುಭವಿ ನಾಯಕರಾಗಿದ್ದರು. ಅವರ ನಿಧನದಿಂದ ನೋವಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಸಂತಾಪ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಉಮೇಶ್ ಕತ್ತಿ ನಿಧನಕ್ಕೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಕಂಬನಿ ಮಿಡಿದಿದ್ದಾರೆ.

'ಉಮೇಶ್ ಕತ್ತಿ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಕುಟುಂಬವರ್ಗಕ್ಕೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ' ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

-----------------------------------------------------------

'ರಾಜ್ಯ ವಿಧಾನ ಸಭೆಯ ಹಿರಿಯ ನಾಯಕರಾಗಿದ್ದ ಉಮೇಶ್ ಕತ್ತಿ ಅವರ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. 25ನೇ ವಯಸ್ಸಿಗೆ ವಿಧಾನಸಭೆ ಪ್ರವೇಶಿಸಿದ್ದ ಅವರು ಉತ್ತರ ಕರ್ನಾಟಕದ ಗಟ್ಟಿ ಧ್ವನಿಯಾಗಿದ್ದರು. ಇದ್ದುದನ್ನು ಇದ್ದಂತೆ ಹೇಳುವ ನೇರ ನಡೆ-ನುಡಿಯ ವ್ಯಕ್ತಿತ್ವ ಹೊಂದಿದ್ದ ಉಮೇಶ್ ಕತ್ತಿ ಅವರು ಜನರ ಸಮಸ್ಯೆ, ಭಾವನೆಗಳಿಗೆ ಧ್ವನಿ ಆಗುವಾಗ ಆಡಳಿತ ಪಕ್ಷ, ವಿರೋಧ ಪಕ್ಷ ಎಂದು ಭೇದ ಮಾಡುತ್ತಿರಲಿಲ್ಲ. ಅದೇ ಕಾಲಕ್ಕೆ ಎಂಥದೇ ಗಂಭೀರ ಪರಿಸ್ಥಿತಿಯನ್ನು ನವಿರು ಹಾಸ್ಯದ ಮೂಲಕ ತಿಳಿಗೊಳಿಸುವ ಸ್ವಭಾವ ಅವರದಾಗಿತ್ತು. ಸಹಕಾರ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುವ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದ ಕತ್ತಿ ಅವರು ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಹಲವು ಪ್ರಮುಖ ಖಾತೆಗಳನ್ನು ನಿಭಾಯಿಸಿದ್ದರು. ಸಕ್ಕರೆ ಉದ್ಯಮಕ್ಕೆ ಅವರ ಕೊಡುಗೆ ಮರೆಯುವಂತಿಲ್ಲ. ಕತ್ತಿ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ಈ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ'

ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರು. 

ಇದನ್ನೂ ಓದಿ: ಹೃದಯಾಘಾತದಿಂದ ಸಚಿವ ಉಮೇಶ್ ಕತ್ತಿ ನಿಧನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News