ಸಕಲ ಸರಕಾರಿ ಗೌರವಗಳೊಂದಿಗೆ ಉಮೇಶ್ ಕತ್ತಿ ಅಂತ್ಯಕ್ರಿಯೆ: ಸಿಎಂ ಬೊಮ್ಮಾಯಿ

Update: 2022-09-07 05:10 GMT

ಬೆಂಗಳೂರು ಸೆ.7: ಕಳೆದ ರಾತ್ರಿ ನಿಧನರಾದ ಅರಣ್ಯ ಮತ್ತು ಆಹಾರ ಸಚಿವ ಉಮೇಶ್ ಕತ್ತಿಯವರ ಅಂತ್ಯಕ್ರಿಯೆಯನ್ನು ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು. ಅವರ ಅಗಲುವಿಕೆಯಿಂದ ರಾಜ್ಯ ಕ್ರಿಯಾಶಿಲ, ಧೀಮಂತ ನಾಯಕ ಹಾಗೂ ಸಹಕಾರಿ ಧುರೀಣರನ್ನು ಕಳೆದುಕೊಂಡಂತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಂಬನಿ ಮಿಡಿದಿದ್ದಾರೆ.

ಅವರು ನಿನ್ನೆ ತಡರಾತ್ರಿ ರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ಇದನ್ನೂ ಓದಿ | ಮೂಡಿಗೆರೆ | ಟ್ರ್ಯಾಕ್ಟರ್ ಗೆ ತಗುಲಿದ ವಿದ್ಯುತ್ ತಂತಿ: ಇಬ್ಬರು ಯುವತಿಯರ ಸಹಿತ ಮೂವರು ಮೃತ್ಯು

ಇಂದು ಏರ್ ಆ್ಯಂಬುಲೆನ್ಸ್ ಮುಖಾಂತರ ಉಮೇಶ್ ಕತ್ತಿಯವರ  ಪಾರ್ಥೀವ ಶರೀರವನ್ನು ಒಯ್ಯಲಾಗುವುದು. ಬೆಳಗಾವಿಯಿಂದ ಸಂಕೇಶ್ವರದ ಹಿರಾ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಅಪರಾಹ್ನ 2 ಗಂಟೆಯವರೆಗೆ ವ್ಯವಸ್ಥೆ ಮಾಡಲಾಗುವುದು. ಅಲ್ಲಿಂದ ಬಾಗೇವಾಡಿಯ ಅವರ ನಿವಾಸದಲ್ಲಿ ಎಲ್ಲ ವಿಧಿವಿಧಾನಗಳನ್ನು ಪೂರೈಸಿ ಸಂಜೆ 5 ಗಂಟೆಗೆ ಅವರ ಸ್ವಂತ ತೋಟದಲ್ಲಿ ಅಂತಿಮ ಕ್ರಿಯೆಯನ್ನು ಮಾಡಲು ತೀರ್ಮಾನಿಸಲಾಗಿದೆ. ಸಾರ್ವಜನಿಕರ ದರ್ಶನಕ್ಕಾಗಿ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಸಹಕಾರ ನೀಡಬೇಕೆಂದು ಮುಖ್ಯಮಂತ್ರಿ ಕೋರಿದರು.

ಜನಪರ ಕಾಳಜಿ ಮತ್ತು ರೈತ ಹಿತ ಚಿಂತನೆಯ ನಾಯಕ:

ಉಮೇಶ್ ಕತ್ತಿ ನನ್ನ ಆತ್ಮೀಯ ಸಹೋದರರು. ಸುಮಾರು 4 ದಶಕಗಳಿಗೂ ಹೆಚ್ಚು ನಮ್ಮ ಅವರ ಕುಟುಂಬದ ಒಡನಾಟವಿತ್ತು. ಅವರ ತಂದೆ ವಿಶ್ವನದಾಥ ಕತ್ತಿಯವರು ನಮ್ಮ ತಂದೆಯವರ ಜೊತೆಗೆ ಆತ್ಮೀಯ ಒಡನಾಟವಿತ್ತು. ಅವರು ವಿಧಾನಸಭೆಯ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತಕ್ಕೊಳಗಾಗಿ ವಿಧಿವಶರಾಗಿದ್ದರು. ಆ ಸಂದರ್ಭದಲ್ಲಿ ಅತ್ಯಂತ ಕಿರಿಯ ವಯಸ್ಸಿನ ಉಮೇಶ್ ಕತ್ತಿ 25 ವರ್ಷದವರಾಗಿದ್ದಾಗ, ಶಾಸಕಾರಾಗಿ ಸಾರ್ವಜನಿಕ ಜೀವನದಲ್ಲಿ ಪಾದಾರ್ಪಣೆ  ಮಾಡಿದ ಅವರು ಎಂದೂ ತಿರುಗಿ ನೋಡಲಿಲ್ಲ.  ಎಂಟು ಬಾರಿ ಶಾಸಕರಾಗಿ ಆಯ್ಕೆಯಾಗಿ ರಾಜ್ಯದ ಒಬ್ಬ ಪ್ರಮುಖ ನಾಯಕನಾಗಿ ಹೊರಹೊಮ್ಮಿದ್ದರು. ಈ ವಿಧಾನಸಭೆಯಲ್ಲಿ ಅತಿ ಹೆಚ್ಚು ಬಾರಿ ಶಾಸಕರಾದವರಲ್ಲಿ ಅವರೇ ಹಿರಿಯರು. ಅವರ ಜನಪರ ಕಾಳಜಿ, ವಿಶೇಷವಾಗಿ ರೈತರಿಗೆ, ರೈತ ಹಿತಚಿಂತಕರಾಗಿ ಅವರ ಕೆಲಸಗಳು ಮತ್ತು ರಾಜ್ಯದ ಸಚಿವ ಸಂಪುಟದ ಸದಸ್ಯರಾಗಿ ಜೆ.ಎಚ್.ಪಟೇಲ್ ರ ಸಚಿವ ಸಂಪುಟದಲ್ಲಿ ಸಕ್ಕರೆ, ಬಂಧಿಖಾನೆ ಹಾಗು ಲೋಕಕೋಪಯೋಗಿ ಸಚಿವಾರಗಿ ಕೆಲಸ ಮಾಡಿದ್ದರು. ಯಡಿಯೂರಪ್ಪ ಸಚಿವಸಂಪುಟದಲ್ಲಿ ತೋಟಗಾರಿಕೆ ಮತ್ತು ಕೃಷಿ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು. ಉತ್ತರ ಕರ್ನಾಟಕದ ಬಗ್ಗೆ ವಿಶೇಷ ಕಾಳಜಿ, ಪ್ರೀತಿ ಇತ್ತು. ಎಂದರು.

ಆಹಾರ ಮತ್ತು ಅರಣ್ಯ ಖಾತೆಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ ಸಚಿವ :

ಆಹಾರ ಮತ್ತು ಅರಣ್ಯ ಸಚಿವರಾಗಿ ಅತ್ಯುತ್ತಮವಾಗಿ ನಿಭಾಯಿಸುತ್ತಿದ್ದರು. ಯಾವುದೇ ಖಾತೆ ನೀಡಿದರೂ ತಮ್ಮದೇ ಆದ ಛಾಪನ್ನು ಮೂಡಿಸುತ್ತಿದ್ದರು. ಅವರು ಆಹಾರ ಸಚಿವರಾದ ನಂತರ ಉತ್ತರ ಕರ್ನಾಟಕದಲ್ಲಿ ಬೆಳೆಯುವ ಜೋಳ , ದಕ್ಷಿಣ ಕರ್ನಾಟಕದಲ್ಲಿ ಬೆಳೆಯುವ ರಾಗಿ ಇದನ್ನು ಪಿಡಿಎಸ್ ನಲ್ಲಿ ತರಲು, ಗಟ್ಟಿಯಾಗಿ ನಿಂತು ರೈತರ ಬೆಳೆಗೆ ಯೋಗ್ಯ ಬೆಲೆ ದೊರೆಯಲು ಮತ್ತು ರಾಜ್ಯದ ಆಹಾರ ಜನರಿಗೂ ತಲುಪಿಸಿದಂತಾಗುತ್ತದೆ ಎಂದು ಮಾಡಿದ ಕಾರ್ಯ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಸಿಎಂ ಸ್ಮರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News