×
Ad

ವಿದ್ಯುತ್ ಸ್ಪರ್ಶಿಸಿ ಯುವತಿ ಸಾವು ಪ್ರಕರಣ: ಜಾಹೀರಾತು ಸಂಸ್ಥೆಯ ನಿರ್ಲಕ್ಷ್ಯ ಕಾರಣ ಎಂದ ಬೆಸ್ಕಾಂ

Update: 2022-09-07 17:33 IST
 ಅಖಿಲಾ-  ಮೃತ ಯುವತಿ

ಬೆಂಗಳೂರು, ಸೆ.7: ವೈಟ್ ಫೀಲ್ಡ್ ರಸ್ತೆಯ ಸಿದ್ದಾಪುರದಲ್ಲಿ ವಿದ್ಯುತ್ ಸ್ಪರ್ಶಿಸಿ ಯುವತಿ ಮೃತಪಡಲು ಜಿ.ಎಸ್.ಮಿಡಿಯಾ ಜಾಹೀರಾತು ಸಂಸ್ಥೆಯ ನಿರ್ಲಕ್ಷ್ಯ ಕಾರಣ ಎಂದು ಬೆಸ್ಕಾಂನ ಗುಣಮಟ್ಟ, ಪ್ರಮಾಣಿತ ಸುರಕ್ಷತೆ ನಿಗಮ ವರದಿ ನೀಡಿದೆ.

ಯುವತಿಯ ಸಾವಿನ ಸಂಬಂಧಿಸಿದಂತೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ವರದಿ ನೀಡಿದ್ದು, ಈ ಸಾವಿಗೆ ಬೆಸ್ಕಾಂ ಜವಾಬ್ದಾರರಲ್ಲ. ಘಟನೆಗೆ ಜಿಎಸ್ ಮೀಡಿಯಾ ಸಂಸ್ಥೆಯವರೇ ಸಂಪೂರ್ಣ ಜವಾಬ್ದಾರರು. ಮೃತರ ಕುಟುಂಬಕ್ಕೆ ಆ ಸಂಸ್ಥೆಯೇ ಸೂಕ್ತ ಪರಿಹಾರ ನೀಡಬೇಕು ಎಂದು ಉಲ್ಲೇಖಿಸಿದ್ದಾರೆ.

ಸೆ.5ರಂದು ಸುರಿದ ಭಾರಿ ಮಳೆಗೆ ಅವಘಡ ನಡೆದ ರಸ್ತೆಯಲ್ಲಿ ನೀರು ತುಂಬಿತ್ತು. ರಾತ್ರಿ ಸುಮಾರು 8.10ರ ವೇಳೆಗೆ ಅಖಿಲಾ ಎಂಬ ಯುವತಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ಆಯತಪ್ಪಿ ರಸ್ತೆಯ ವಿಭಜಕದ ಮೇಲೆ ಅಳವಡಿಸಿದ್ದ ಜಿಎಸ್ ಮೀಡಿಯಾಗೆ ಸೇರಿದ ಜಾಹೀರಾತು ಫಲಕದ ಮೇಲೆ ಬಿದ್ದಿದ್ದರು. 

ಈ ಸಂದರ್ಭದಲ್ಲಿ ಅದರಲ್ಲಿ ಪ್ರವಹಿಸುತ್ತಿದ್ದ ವಿದ್ಯುತ್ ಸ್ಪರ್ಶಿಸಿ ಸಾವಿಗೀಡಾಗಿದ್ದರು. ಈ ಘಟನೆಯ ಸಂಬಂಧ ಬೆಸ್ಕಾಂ ಸಹಾಯಕ ಇಂಜಿನಿಯರ್ ಘಟನಾ ಸ್ಥಳದಲ್ಲಿ ಪರಿಶೀಲಿಸಿದಾಗ ಜಾಹೀರಾತು ಫಲಕ ಜಿಎಸ್ ಮೀಡಿಯಾ ಎಂಬ ಸಂಸ್ಥೆಗೆ ಸೇರಿರುವುದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News