ಸಿಲಿಕಾನ್‌ಸಿಟಿಯಲ್ಲಿ ಮಳೆ; ವಾರ್ಡ್ ವಾರು ದೂರು ಪರಿಹಾರ ಕೇಂದ್ರ ಆರಂಭಿಸಲು ಹೈಕೋರ್ಟ್ ಆದೇಶ

Update: 2022-09-07 14:08 GMT

ಬೆಂಗಳೂರು, ಸೆ.7: ಅತಿಯಾದ ಮಳೆಯಿಂದ ಸಂಕಷ್ಟ ಅನುಭವಿಸುತ್ತಿರುವ ಬೆಂಗಳೂರಿನ ನಿವಾಸಿಗಳ ಸಮಸ್ಯೆ ನಿವಾರಣೆಗೆ ವಾರ್ಡ್ ವಾರು ದೂರು ಪರಿಹಾರ ಕೇಂದ್ರವನ್ನು ತಕ್ಷಣವೇ ಆರಂಭಿಸಲು ಬಿಬಿಎಂಪಿಗೆ ಹೈಕೋರ್ಟ್ ಆದೇಶ ನೀಡಿದೆ.

ನಗರದ ರಸ್ತೆ ದುಃಸ್ಥಿತಿಯ ಬಗ್ಗೆ ಕೋರಮಂಗಲದ ನಿವಾಸಿ ವಿಜಯ್ ಮೆನನ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಬುಧವಾರ ಈ ಆದೇಶ ನೀಡಿದೆ. 

ಅರ್ಜಿದಾರರ ಪರ ವಾದಿಸಿದ ವಕೀಲರು, ಆಗ್ನೇಯ ಬೆಂಗಳೂರಿನ ವಿವಿಧೆಡೆ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆ ಮತ್ತು ಇದರಿಂದಾಗಿ ರಸ್ತೆಗಳ ದುಃಸ್ಥಿತಿ ಬಗ್ಗೆ ನ್ಯಾಯಪೀಠದ ಗಮನ ಸೆಳೆದರು. ಚರಂಡಿಗಳಿಂದ ತುಂಬಿ ಹರಿಯುತ್ತಿರುವ ನೀರಿನ ಸಮಸ್ಯೆಯನ್ನು ಪೀಠಕ್ಕೆ ತಿಳಿಸಿದರು.

ಬಿಬಿಎಂಪಿ ಪರ ವಾದಿಸಿದ ವಕೀಲರು, ಮಳೆ ನೀರು ನಿಂತಿರುವ ತಗ್ಗು ಪ್ರದೇಶಗಳಲ್ಲಿ ಈಗಾಗಲೇ ಪಂಪ್ ಸೆಟ್‌ಗಳನ್ನು ಅಳವಡಿಸಿ ನೀರು ಖಾಲಿ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ನೆರೆಪೀಡಿತ ಪ್ರದೇಶಗಳಿಂದ ನೀರು ಹರಿಸಲು ವಲಯವಾರು ಮಟ್ಟದಲ್ಲಿ ನಿರಂತರ ಕ್ರಮ ಕೈಗೊಳ್ಳಲಾಗಿದೆ ಎಂದು ಪೀಠಕ್ಕೆ ಹೇಳಿದರು. 

ಅತಿವೃಷ್ಟಿ ಸಂದರ್ಭದಲ್ಲಿ ಕೆರೆಗಳ ಒತ್ತುವರಿ ನಿಯಂತ್ರಿಸಲು ಮತ್ತು ಒತ್ತುವರಿ ತಡೆಗಟ್ಟಲು ನಗರದ ಎಲ್ಲ ಕೆರೆ ತೂಬುಗಳಿಗೆ ಗೇಟ್ ಅಳವಡಿಸಲು ಪಾಲಿಕೆಯಿಂದ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ ಎಂದು ಬಿಬಿಎಂಪಿ ಪರ ವಕೀಲರು ತಿಳಿಸಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಈ ದಿಸೆಯಲ್ಲಿ ಬಿಬಿಎಂಪಿ ಪ್ರಸ್ತಾವನೆಯನ್ನು ಸಿದ್ಧಪಡಿಸಬೇಕು. ಇದಕ್ಕೆ ರಾಜ್ಯ ಸರಕಾರ ಶೀಘ್ರವೇ ಒಪ್ಪಿಗೆ ನೀಡಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿದೆ.

ಇದನ್ನೂ ಓದಿ: ಮಗುವಿಗೆ ಪಾಸ್‍ಪೋರ್ಟ್ ನೀಡಲು ತಂದೆಯ ಒಪ್ಪಿಗೆ ಬೇಕಿಲ್ಲ: ಹೈಕೋರ್ಟ್ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News