ಉತ್ತರದಾಯಿತ್ವದ ಕೊರತೆ ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿಗೆ ಕಾರಣ : ವಿಶ್ವಸಂಸ್ಥೆ ವರದಿ

Update: 2022-09-07 15:27 GMT

ಜಿನೆವಾ, ಸೆ.7: ಶ್ರೀಲಂಕಾದಲ್ಲಿ  ಈ ಹಿಂದೆ ಮತ್ತು ಪ್ರಸ್ತುತ ನಡೆದಿರುವ  ಮಾನವ ಹಕ್ಕುಗಳ ದುರುಪಯೋಗ, ಆರ್ಥಿಕ ಅಪರಾಧ ಮತ್ತು ಭ್ರಷ್ಟಾಚಾರಗಳಿಗೆ ಶಿಕ್ಷೆಯಿಲ್ಲದಿರುವುದು ಹಾಗೂ ಉತ್ತರದಾಯಿತ್ವದ ಬಗ್ಗೆ ನಿರ್ಭಯ  ಶ್ರೀಲಂಕಾದ ಆರ್ಥಿಕ ಕುಸಿತಕ್ಕೆ ಪ್ರಧಾನ ಕಾರಣ ಎಂದು ವಿಶ್ವಸಂಸ್ಥೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಸ್ತುತ ಸವಾಲುಗಳನ್ನು ಎದುರಿಸಲು ಮತ್ತು ಹಿಂದಿನ ಮಾನವ ಹಕ್ಕುಗಳ ಉಲ್ಲಂಘನೆಯ ಪುನರಾವರ್ತನೆಯನ್ನು ತಪ್ಪಿಸಲು ಮೂಲಭೂತ ಬದಲಾವಣೆ ಅಗತ್ಯ ಎಂದು   ವಿಶ್ವಸಂಸ್ಥೆ ಮಾನವ ಹಕ್ಕುಗಳ ಹೈಕಮಿಷನರ್(ಯುಎನ್‌ಎಚ್‌ಸಿಆರ್) ಮಿಷೆಲ್ ಬ್ಯಾಚೆಲೆಟ್ ತಯಾರಿಸಿರುವ, ಮಂಗಳವಾರ ಬಿಡುಗಡೆಗೊಂಡಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜಿನೆವಾದಲ್ಲಿ ಸೆಪ್ಟಂಬರ್ 12ರಿಂದ ಅಕ್ಟೋಬರ್ 7ರವರೆಗೆ ನಡೆಯಲಿರುವ ಯುಎನ್‌ಎಚ್‌ಸಿಆರ್‌ನ 51ನೇ ಅಧಿವೇಶನದ ಸಂದರ್ಭದಲ್ಲೇ ಈ ವರದಿ ಹೊರಬಿದ್ದಿರುವುದು ಕುತೂಹಲ ಮೂಡಿಸಿದೆ. ಅಧಿವೇಶನದಲ್ಲಿ ಶ್ರೀಲಂಕಾಕ್ಕೆ ಸಂಬಂಧಿಸಿ ನಿರ್ಣಯವನ್ನು ಮಂಡಿಸುವ ನಿರೀಕ್ಷೆಯಿದೆ. ಜತೆಗೆ, ಇದೇ ಪ್ರಪ್ರಥಮ ಬಾರಿಗೆ ವಿಶ್ವಸಂಸ್ಥೆಯ ಉನ್ನತ ಘಟಕವೊಂದು ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟನ್ನು ಸಮಗ್ರ ಮಾನವ ಹಕ್ಕುಗಳ ಉಲ್ಲಂಘನೆಗಳೊಂದಿಗೆ ಜೋಡಿಸಿದೆ. ಸುಸ್ಥಿರ ಸುಧಾರಣೆಗಾಗಿ ಹಿಂದಿನ ಮತ್ತು ಪ್ರಸ್ತುತ ಮಾನವ ಹಕ್ಕುಗಳ ಉಲ್ಲಂಘನೆ, ಆರ್ಥಿಕ ಅಪರಾಧಗಳು ಮತ್ತು ಭ್ರಷ್ಟಾಚಾರಕ್ಕೆ ಹೊಣೆಗಾರಿಕೆ ಇಲ್ಲದಿರುವುದು ಸೇರಿದಂತೆ ಈ ಬಿಕ್ಕಟ್ಟಿಗೆ ಕಾರಣವಾದ ಅಂಶಗಳನ್ನು ಪರಿಹರಿಸಲು ಶ್ರೀಲಂಕಾಕ್ಕೆ ನೆರವಾಗುವ ಅಗತ್ಯವಿದೆ ಎಂದು ವರದಿ ಹೇಳಿದೆ.

ಉತ್ತರದಾಯಿತ್ವ ಮತ್ತು ಪ್ರಜಾಸತ್ತಾತ್ಮಕ ಸುಧಾರಣೆಗಳಿಗಾಗಿ ಶ್ರೀಲಂಕಾದ ಎಲ್ಲಾ ಸಮುದಾಯಗಳ ಬೇಡಿಕೆಗಳು ಭವಿಷ್ಯದ ಹೊಸ ಮತ್ತು ಸಾಮಾನ್ಯ ದೃಷ್ಟಿಗೆ ಪ್ರಮುಖ ಆರಂಭಿಕ ಹಂತವಾಗಿದೆ. ಈ ಹಿಂದಿನ ಮಾನವ ಹಕ್ಕುಗಳ ಉಲ್ಲಂಘನೆಯ ಪುನರಾವರ್ತನೆಯನ್ನು ತಪ್ಪಿಸಲು ಮೂಲಭೂತ ಬದಲಾವಣೆಯ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕಠೋರವಾದ ಭದ್ರತಾ ಕಾಯ್ದೆಯ ಮೇಲಿನ ಅವಲಂಬನೆಯನ್ನು  ಮತ್ತು ಶಾಂತಿಯುತ ಪ್ರತಿಭಟನೆಗಳ ಮೇಲಿನ ದಬ್ಬಾಳಿಕೆಯನ್ನು ತಕ್ಷಣವೇ ಅಂತ್ಯಗೊಳಿಸಿ, ಮಿಲಿಟರೀಕರಣದ ಕಡೆಗಿನ ದಿಕ್ಚು್ಯತಿಯನ್ನು ಹಿಮ್ಮೆಟ್ಟಿಸಲು ಮತ್ತು ಭದ್ರತಾ  ವಲಯದ ಸುಧಾರಣೆ, ಉತ್ತರದಾಯಿತ್ವದಿಂದ ವಿನಾಯಿತಿ ಸೌಲಭ್ಯವನ್ನು ಅಂತ್ಯಗೊಳಿಸಲು  ರಾನಿಲ್ ವಿಕ್ರಮಸಿಂಘೆ ನೇತೃತ್ವದ ಹಾಲಿ ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ವರದಿ ಕರೆ ನೀಡಿದೆ. ಶ್ರೀಲಂಕಾದ ಕುರಿತ ನಿರ್ಣಯಕ್ಕೆ ಸಂಬಂಧಿಸಿದ ಕರಡು ನಿರ್ಣಯವನ್ನು ಸೆಪ್ಟಂಬರ್ 23ರಂದು ಯುಎನ್‌ಎಚ್‌ಸಿಆರ್ ಮಂಡಿಸುವ ನಿರೀಕ್ಷೆಯಿದೆ. ಬಳಿಕ ಅಕ್ಟೋಬರ್ 6ರಂದು ನಿರ್ಣಯದ ಮೇಲೆ ಸದಸ್ಯ ದೇಶಗಳು ಮತ ಚಲಾಯಿಸಲಿವೆ.

ಯುಎನ್‌ಎಚ್‌ಸಿಆರ್ 2013ರಿಂದ ಯುದ್ಧ ಅಪರಾಧಗಳಿಗೆ ಹೊಣೆಗಾರರನ್ನಾಗಿಸುವ ಕರೆ ನೀಡುವ ನಿರ್ಣಯಗಳನ್ನು ಅಂಗೀಕರಿಸಿದೆ. ಶ್ರೀಲಂಕಾದ ಉತ್ತರ ಮತ್ತು ಪೂರ್ವ ವಲಯಗಳಲ್ಲಿ ಪ್ರತ್ಯೇಕ ದೇಶ ಸ್ಥಾಪನೆಯ ಉದ್ದೇಶದ ಹಿಂಸಾತ್ಮಕ ಅಭಿಯಾನದ ಸಂದರ್ಭ ನಡೆದ ಮಾನವ ಹಕ್ಕುಗಳ ವ್ಯಾಪಕ ಉಲ್ಲಂಘನೆ ಮತ್ತು ಯುದ್ಧಾಪರಾಧಗಳಿಗೆ  ಸರಕಾರಿ ಪಡೆ ಮತ್ತು ಎಲ್‌ಟಿಟಿಇ ಸಂಘಟನೆಯ ಮೇಲೆ ಆರೋಪ ಹೊರಿಸಲಾಗಿದೆ. 2015ರಲ್ಲಿ ಮಂಡಿಸಲಾಗಿದ್ದ ಮತ್ತೊಂದು ನಿರ್ಣಯವು ಕಾಮನ್‌ವೆಲ್ತ್ ಮತ್ತು ಇತರ ವಿದೇಶೀ ನ್ಯಾಯಾಧೀಶರು, ರಕ್ಷಣಾ ವಕೀಲರು ಮತ್ತು ಅಧಿಕೃತ ಪ್ರಾಸಿಕ್ಯೂಟರ್‌ಗಳು, ತನಿಖಾಧಿಕಾರಿಗಳ ಭಾಗವಹಿಸುವಿಕೆಯೊಂದಿಗೆ ವಿಶ್ವಾಸಾರ್ಹ ನ್ಯಾಯಾಂಗ ಪ್ರಕ್ರಿಯೆಯನ್ನು ಸ್ಥಾಪಿಸಲು ಶ್ರೀಲಂಕಾವನ್ನು ಆಗ್ರಹಿಸಿತ್ತು. ಆದರೆ ಈ ಒತ್ತಾಯವನ್ನು ಶ್ರೀಲಂಕಾ ನಿರಂತರವಾಗಿ ವಿರೋಧಿಸುತ್ತಾ ಬಂದಿದೆ. 2021ರಲ್ಲಿ ಮಂಡಿಸಲಾಗಿದ್ದ ಮತ್ತೊಂದು ನಿರ್ಣಯದಲ್ಲಿ, ಅಂದಿನ ಅಧ್ಯಕ್ಷ ಗೊತಬಯ ರಾಜಪಕ್ಸ ಸರಕಾರ ಪ್ರಸ್ತಾವಿಸಿದ್ದ ದೇಶೀಯ ವ್ಯವಸ್ಥೆಯ ಬಗ್ಗೆ  ಪ್ರಸ್ತಾವನೆಯಿತ್ತು. ಈ ನಿರ್ಣಯದ ವಿರುದ್ಧ 22 ಮತ್ತು ಪರ 11 ಮತ ಚಲಾವಣೆಯಾಗಿ ನಿರ್ಣಯ ತಿರಸ್ಕೃತಗೊಂಡಿತ್ತು.

ಶ್ರೀಲಂಕಾವು 1948ರ ಬಳಿಕದ ಅತ್ಯಂತ ತೀವ್ರ ಆರ್ಥಿಕ ಬಿಕ್ಕಟ್ಟಿನ ಸಮಸ್ಯೆ ಎದುರಿಸುತ್ತಿದ್ದು ದೇಶದಲ್ಲಿ  ಹಣದುಬ್ಬರ, ದೈನಂದಿನ ಅಗತ್ಯದ ವಸ್ತುಗಳ ತೀವ್ರ ಕೊರತೆ ಉಂಟಾಗಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News