ಬೆನ್ನುಮೂಳೆ ಮುರಿತಕ್ಕೊಳಗಾದ ಕೂಲಿ ಕಾರ್ಮಿಕ; ಶಸ್ತ್ರಚಿಕಿತ್ಸೆ ನಡೆಸಲು ಒಪ್ಪಿಕೊಂಡ ವೆನ್ಲಾಕ್ ಆಸ್ಪತ್ರೆಯ ವೈದ್ಯರು
ಮಂಗಳೂರು, ಸೆ.7: ಮರದ ರೆಂಬೆ ಕಡಿಯುವ ವೇಳೆ ಬಿದ್ದು ಬೆನ್ನು ಮೂಳೆಯ ಮುರಿತಕ್ಕೆ ಒಳಗಾಗಿ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ 25 ದಿನಗಳಿಂದ ಉಚಿತ ಶಸ್ತ್ರಚಿಕಿತ್ಸೆಗಾಗಿ ಕಾಯುತ್ತಿದ್ದ ಮೂಡಿಗೆರೆ ತಾಲೂಕಿನ ಕೃಷಿ ಕೂಲಿ ಕಾರ್ಮಿಕ, ಆದಿವಾಸಿ ಮಲೆಕುಡಿಯ ಜನಾಂಗದ ಶ್ರೀನಿವಾಸ (35) ಅವರ ಪರವಾಗಿ ‘ಡಿವೈಎಫ್‌ಐ’ ಸಂಘಟನೆಯು ನಡೆಸಿದ ಪ್ರಯತ್ನಕ್ಕೆ ಪ್ರಥಮ ಹಂತದ ಯಶಸ್ಸು ಸಿಕ್ಕಿದೆ.
ಶ್ರೀನಿವಾಸ ಅವರ ಕುಟುಂಬವು ಬಿಪಿಎಲ್ ಕಾರ್ಡ್ ಹೊಂದಿದೆ. ಆದರೆ ಆಧಾರ್ ಜೋಡಣೆಗೆ ಸಂಬಂಧಿಸಿದ ತಾಂತ್ರಿಕ ಅಡಚಣೆಯಿಂದಾಗಿ ಶ್ರೀನಿವಾಸರ ಹೆಸರು ಕೈ ತಪ್ಪಿತ್ತು. ಇದರಿಂದ ತಾಂತ್ರಿಕ ಸಮಸ್ಯೆಯೂ ಸೃಷ್ಟಿಯಾಗಿತ್ತು. ಬಿಪಿಎಲ್ ಕಾರ್ಡ್‌ನಲ್ಲಿ ಶ್ರೀನಿವಾಸರ ಹೆಸರಿಲ್ಲದ ಕಾರಣಕ್ಕೆ ವೆನ್ಲಾಕ್ ಆಸ್ಪತ್ರೆಯ ವೈದ್ಯರು ಉಚಿತ ಶಸ್ತ್ರಚಿಕಿತ್ಸೆಗೆ ನಿರಾಕರಿಸಿದ್ದರು.
ಇದೀಗ ಆ ಗೊಂದಲ ನಿವಾರಣೆಯಾಗಿದ್ದು, ವೆನ್ಲಾಕ್ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನಡೆಸಲು ಒಪ್ಪಿಕೊಂಡಿದ್ದಾರೆ. ಅದರಂತೆ ಸೆ.10ರಂದು ಚಿಕಿತ್ಸೆ ನಡೆಯಲಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ 72 ಸಾವಿರ ರೂ. ವೆಚ್ಚವಾಗುತ್ತದೆ. ಬಿಪಿಎಲ್ ಕಾರ್ಡ್‌ನಲ್ಲಿ ಹೆಸರಿಲ್ಲದ ಕಾರಣ ಎಪಿಎಲ್ ಕಾರ್ಡ್ ಆಧಾರದಲ್ಲಿ ಶಸ್ತ್ರಚಿಕಿತ್ಸೆ ನಡೆಸಲು ಒಟ್ಟು ಮೊತ್ತದ ಶೇ 70ರಷ್ಟು ವೆಚ್ಚ ಭರಿಸಬೇಕು ಎಂದು ಆಸ್ಪತ್ರೆ ವೈದ್ಯರು ಶ್ರೀನಿವಾಸರಿಗೆ ತಿಳಿಸಿದ್ದರು. ಅಷ್ಟು ಹಣವು ಕೃಷಿಕೂಲಿ ಕಾರ್ಮಿಕ ಶ್ರೀನಿವಾಸರ ಬಳಿ ಇಲ್ಲದ ಕಾರಣ ಮಾಹಿತಿ ಪಡೆದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ದ.ಕ.ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮತ್ತಿತರರು ಮಧ್ಯಪ್ರವೇಶಿಸಿ ವೈದ್ಯರ ಜೊತೆ ಮಾತುಕತೆ ನಡೆಸಿದ್ದರು. ಆರಂಭದಲ್ಲಿ ಉಚಿತ ಶಸ್ತ್ರಚಿಕಿತ್ಸೆ ನಡೆಸಲು ವೆನ್ಲಾಕ್ ವೈದ್ಯರು ನಿರಾಕರಿಸಿದರೂ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಲೇ ವೈದ್ಯರು ಎಚ್ಚೆತ್ತುಕೊಂಡರು.
ಈ ಮಧ್ಯೆ ಡಿವೈಎಫ್‌ಐ ಸಂಘಟನೆಯ ಸಹಕಾರದೊಂದಿಗೆ ಬಿಪಿಎಲ್-ಆಧಾರ್ ಕಾರ್ಡ್‌ನ ತಾಂತ್ರಿಕ ಲೋಪವನ್ನು ಸರಿಪಡಿಸಿ ಬಿಪಿಎಲ್ ಕಾರ್ಡ್‌ನ ಪ್ರತಿಯನ್ನು ಆಸ್ಪತ್ರೆಗೆ ಒಪ್ಪಿಸಿದ್ದರು.
ಅವಿವಾಹಿತರಾದ ಶ್ರೀನಿವಾಸ ತನ್ನ ಕುಟುಂಬಕ್ಕೆ ಆಧಾರವಾಗಿದ್ದರು. ಆ.11ರಂದು ಕೃಷಿ ಕೂಲಿ ಕೆಲಸದ ವೇಳೆ ಬಿದ್ದು ಬೆನ್ನು ಮೂಳೆ ಮುರಿತಕ್ಕೊಳಗಾಗಿದ್ದರು. ಶ್ರೀನಿವಾಸರ ತಂದೆಗೆ ವಯಸ್ಸಾಗಿದ್ದು, ದುಡಿಯುವ ಸ್ಥಿತಿಯಲ್ಲಿಲ್ಲ. ಅಣ್ಣ ಅಂಗವಿಕಲನಾಗಿದ್ದು, ತಾಯಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ಆಸುಪಾಸಿನವರು, ಸಂಬಂಧಿಕರು ಆ.12ರಂದು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಉಚಿತ ಚಿಕಿತ್ಸೆಗಾಗಿ ಪ್ರಯತ್ನ ಸಾಗಿಸಿದ್ದರು. ಫಲ ಸಿಗದಿದ್ದಾಗ ಶೃಂಗೇರಿಯ ಸಾಮಾಜಿಕ ಕಾರ್ಯಕರ್ತ ಮಣಿಶೇಖರ್ ಅವರು ಡಿವೈಎಫ್‌ಐ ಸಂಘಟನೆಯನ್ನು ಸಂಪರ್ಕಿಸಿದ್ದರು.
*ಶ್ರೀನಿವಾಸ ವೆನ್ಲಾಕ್‌ನಲ್ಲಿ ಮಲಗಿ 25 ದಿನಗಳಾಗಿವೆ. ಆದರೆ ತಾಂತ್ರಿಕ ನೆಪವೊಡ್ಡಿ ಉಚಿತ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ ಮಾಡಿರಲಿಲ್ಲ. ನಮ್ಮ ಮಧ್ಯಪ್ರವೇಶದ ಬಳಿಕ ಇದೀಗ ಎಚ್ಚೆತ್ತುಕೊಂಡಿದ್ದಾರೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
*ಬೆನ್ನುಮೂಳೆ ಮುರಿತಕ್ಕೊಳಗಾದ ಶ್ರೀನಿವಾಸ ಕುಟುಂಬಸ್ಥರು ಇದೀಗ ಬಿಪಿಎಲ್ ಕಾರ್ಡ್ ನೀಡಿದ್ದಾರೆ. ಹಾಗಾಗಿ ಸೆ.10ರಂದು ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದು ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಸದಾಶಿವ ಶ್ಯಾನುಭಾಗ್ ತಿಳಿಸಿದ್ದಾರೆ.