ಕುವೆಂಪು; ಇಂದಿನ ಅನಿವಾರ್ಯತೆ

Update: 2022-09-08 06:52 GMT

ವಿಶ್ವಮಾನವತೆಯನ್ನು ಸಾರಿದ ಕನ್ನಡದ ಶ್ರೇಷ್ಠ ಕವಿ, ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಇದುವರೆಗೂ ಮಾತನಾಡಿದ ಯಾವುದೇ ರಾಷ್ಟ್ರಪತಿಯವರ ಭಾಷಣಗಳಿಗೆ ಅಷ್ಟು ಪ್ರಾಮುಖ್ಯತೆ ನೀಡದ ನಮ್ಮ ಅಂತರ್ಜಾಲ ತಾಣಗಳು, ಇತ್ತೀಚೆಗೆ ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಂದು ದ್ರೌಪದಿ ಮುರ್ಮು ಅವರು ಮಾಡಿದ ಭಾಷಣಕ್ಕೆ ನೀಡಿದ್ದವು. ಪ್ರಸಕ್ತ ರಾಜಕಾರಣಿಗಳು ಕುವೆಂಪು ಕುರಿತು ಚರ್ಚಿಸುವುದರ ಜೊತೆಗೆ, ಅವರ ಸೈದ್ಧಾಂತಿಕ ವಿಚಾರಗಳನ್ನು ಗೊಂದಲಮಯಗೊಳಿಸಿ ಜನರನ್ನು ದಿಕ್ಕು ತಪ್ಪಿಸುವ ಎಲ್ಲಾ ಕೆಲಸಗಳು ನಡೆಯುತ್ತಿದ್ದು ಅವರ ಆಲೋಚನೆಗಳನ್ನು, ಸಿದ್ಧಾಂತಗಳನ್ನು ಅವಹೇಳನ ಮಾಡುವ, ತಿರುಚುವ ಕೆಲಸ ಮಾಡಲಾಗುತ್ತಿರುವುದು ಬಹಳ ನೋವಿನ ಸಂಗತಿಯಾಗಿದೆ. ಆಳುವ ಜನರಿಗೂ, ಸಂಘ ಪರಿವಾರಕ್ಕೂ ಇದರ ಹಿಂದಿನ ಮರ್ಮವೇನೆಂಬುದು ಗೊತ್ತಿದೆ.

ಬೇರೆ ಬೇರೆ ಜನಾಂಗದ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸಗಳನ್ನು ಈಗಾಗಲೇ ಹಲವಾರು ವರ್ಷಗಳಿಂದ ಮಾಡಿದ್ದಾಗಿದೆ. ಮುಂಬರುವ ಚುನಾವಣಾ ದಿನಗಳಲ್ಲಿ ಈಗಾಗಲೇ ಅಸಮಾನತೆಗೊಳಗಾದ, ಅಧಿಕಾರದಿಂದ ಶೋಷಣೆಗೊಳಗಾದ ಜನರ ವಿಶ್ವಾಸ ಗಳಿಸಬೇಕೆಂದರೆ ಈ ರೀತಿಯಾದ ಮಸಲತ್ತುಗಳನ್ನು ನಡೆಸಬೇಕಾದ ಅನಿವಾರ್ಯತೆ ಇದೆ. ಇದರೊಟ್ಟಿಗೆ ದೇಶ, ಭಾಷೆ, ಧರ್ಮ, ಜನಾಂಗ ಇವೆಲ್ಲಾ ಚುನಾವಣೆಗೂ ಒಂದೆರಡು ವರ್ಷಗಳು ಮೊದಲೇ ಪ್ರಾರಂಭವಾಗುವ ಒಳಿತು/ಕೆಡುಕಿನ ಬಗ್ಗೆ ಮೈಕಾಸುರನ ಭಾಷಣಗಳಾಗಿ ಪರಿವರ್ತನೆಗೊಂಡು ಜನಸಾಮಾನ್ಯರಿಗೆ ಕಿವಿಗಡಚಿಕ್ಕುವುದು ಸರ್ವೇಸಾಮಾನ್ಯವಾದ ವಿಚಾರವಾಗಿದೆ. ಇವೆಲ್ಲಾ ಮಾತುಗಳ ಹಿಂದೆ ವೋಟ್ ಬ್ಯಾಂಕಿನ ಒಂದು ದೊಡ್ಡ ಅಜೆಂಡಾವೇ ಇದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ರಾಷ್ಟ್ರಪತಿ ದ್ರೌಪದಿ ಮುರ್ಮುರವರಿಗೆ ಕುವೆಂಪು ಅವರ ಕವಿತೆ ಕುರಿತು ಮಾತನಾಡಲೇಬೇಕು ಇದರ ಹಿಂದೆ ಯಾವುದೇ ರಾಜಕಾರಣವಿಲ್ಲ ಎನ್ನುವುದಾದರೆ ಅಂತಹ ವಿಚಾರಕ್ಕೆ ಕನ್ನಡಿಗರೆಲ್ಲರಿಂದ ದೊಡ್ಡದೊಂದು ಸಲಾಂ. ಆದರೆ ಕೇವಲ ಅನಿವಾರ್ಯತೆಗಾಗಿ ಕುವೆಂಪು ಅವರ ಹೊಗಳಿಕೆಯಾಗಬಾರದು. ಇದು ಕೇವಲ ವೋಟಿನ ತಂತ್ರಗಾರಿಕೆಯೆಂದರೆ ಅಂತಹ ಮಾತುಗಳಿಗೆ ಹೆಚ್ಚು ಒತ್ತುಕೊಡುವ ಅಗತ್ಯವಿಲ್ಲ. ಅಂತಹ ಮಾತುಗಳಿಗೆ ಸಾಹಿತ್ಯಾಸಕ್ತರು ಕೂಡ ತಲೆಕೆಡಿಸಿಕೊಳ್ಳುವ ಅಗತ್ಯವೂ ಇಲ್ಲವೆನಿಸುತ್ತದೆ.

‘‘ಸರ್ವ ಜನಾಂಗದ ಶಾಂತಿಯ ತೋಟ ರಸಿಕರ ಕಂಗಳ ಸೆಳೆಯುವ ನೋಟ ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಗ ಜೈನರುದ್ಯಾನ’’ ಎಂದು ಹೇಳಿದ ಕುವೆಂಪು ಅವರು ರಾಷ್ಟ್ರಕವಿಯೇ ಹೊರತು ಯಾವುದೇ ಜನಾಂಗದ ಕವಿಯಾಗಿ ನಾಡಿನೊಳಗೆ ಬಂದವರಲ್ಲ. ವಿಶ್ವಮಾನವ ಸಂದೇಶವನ್ನು ಸಾರಿದ, ಸಮಾನತೆಯ ಸಮಾಜದ ಕನಸನ್ನು ಕಂಡ ಒಬ್ಬ ಪ್ರಜ್ಞಾವಂತ ಮೇಧಾವಿ ಎಂದರೆ ತಪ್ಪಾಗಲಾರದು. ಬಹಳ ಮುಖ್ಯ ವಿಚಾರವೆಂದರೆ ಕಳೆದ 8-10 ವರ್ಷಗಳ ಹಿಂದೆ ಜಗತ್ತಿನ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಭಾರತ 3ನೇ ಸ್ಥಾನದಲ್ಲಿತ್ತು. ಆದರೆ ಇಂದು ಜಗತ್ತಿನ ಮುಂದುವರಿದ ರಾಷ್ಟ್ರಗಳ ಪಟ್ಟಿಯಲ್ಲಿ 163ನೇ ಸ್ಥಾನಕ್ಕೆ ಬಂದಿದೆಯೆಂದರೆ ನಾವುಗಳೆಲ್ಲಾ ಯೋಚಿಸಬೇಕಾಗಿದೆ. ಭಾರತ ಮುಂದುವರಿಯುತ್ತಿರುವ ರಾಷ್ಟ್ರವೇ? ರಾಷ್ಟ್ರಗಳ ಅಭಿವೃದ್ಧಿಯ ಪಥದಲ್ಲಿ ದೇಶವು ಸಾಗಬೇಕಾದರೆ ಇಂದಿನ ಯುವಪೀಳಿಗೆ ಎಷ್ಟು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಚಿಂತಿಸಬೇಕಾಗಿದೆ. ಕಳೆದ ಕೆಲವು ವರ್ಷಗಳಿಂದ ಜಿಎಸ್‌ಟಿ ಹೆಸರಿನಲ್ಲಿ ಆರ್ಥಿಕವಾಗಿ ಜನಸಾಮಾನ್ಯರ ಬದುಕನ್ನು ತಲ್ಲಣಕ್ಕೆ ಸಿಲುಕಿಸಲಾಗಿದೆ. ಕೊರೋನ ನೆಪದಿಂದ ಸಾಮಾಜಿಕ ಬದುಕನ್ನು ದುರಂತಗೊಳಿಸಲಾಯಿತು. ದೇಶಪ್ರೇಮದ ಹೆಸರಲ್ಲಿ, ಜಾತಿಯ ಹೆಸರಿನಲ್ಲಿ, ಉಡುಗೆ ತೊಡುಗೆಗಳ ನೆಪದಲ್ಲಿ ಧರ್ಮಗಳನ್ನು ವಿರೂಪಗೊಳಿಸಲಾಯಿತು. ಹಲವಾರು ಹೊಸ ಯೋಜನೆಗಳು ಹಾಗೂ ಸಂಘಟನೆಗಳ ನೆಪದಲ್ಲಿ ಜನರನ್ನು ಒಗ್ಗೂಡಿಸುವಲ್ಲಿ ದೇಶದ ಏಕತೆಯ ಮನೋಭಾವವನ್ನು ಛಿದ್ರಗೊಳಿಸಲಾಯಿತು.

ಇದರ ಜೊತೆ ಜೊತೆಯಲ್ಲಿಯೇ ದೇಶದೆಲ್ಲೆಡೆ ಅರಾಜಕತೆ, ಲೈಂಗಿಕ ಕಿರುಕುಳ, ದಲಿತರ ಮೇಲೆ ದೌರ್ಜನ್ಯಗಳು, ದಲಿತ ವಿದ್ಯಾರ್ಥಿಗಳ ಮೇಲಿನ ಹಲ್ಲೆಗಳು, ಅಧಿಕಾರಿಗಳ ಮಾರಣ ಹೋಮ, ಧರ್ಮದ ಹೆಸರಿನಲ್ಲಿ ಸ್ವಧರ್ಮ ಮತ್ತು ಅನ್ಯಧರ್ಮೀಯರ ಮೇಲಿನ ದೌರ್ಜನ್ಯ ಎಲ್ಲವೂ ಜನರಿಗೆ ಸರ್ವೇಸಾಮಾನ್ಯವಾಗಿಬಿಟ್ಟಿವೆ. ಇವೆಲ್ಲವೂ ಇಂದು ನಮ್ಮನ್ನು ಆಳುತ್ತಿರುವ ಹಾಗೂ ಅಧಿಕಾರದ ಗದ್ದುಗೆಯೇರಲು ಬಯಸುವ ಪಕ್ಷಗಳು ತಮ್ಮ ಅಧಿಕಾರಕ್ಕಾಗಿ ತಮ್ಮಗಳ ಹಿತಾಸಕ್ತಿಗಾಗಿ ನಡೆಸುವ ಹೊಡೆದಾಟ/ಬಡಿದಾಟದ ಹುನ್ನಾರಗಳೆಂದು ತಿಳಿದುಬರುತ್ತಿದೆ. ಮಾನ್ಯ ರಾಷ್ಟ್ರಪತಿಗಳಾದ ಮುರ್ಮು ಅವರು ಸಾಹಿತಿಗಳ ವಿಚಾರಗಳನ್ನು ಮಾತನಾಡುವಾಗ ತಮಿಳುನಾಡು, ಆಂಧ್ರ, ತೆಲಂಗಾಣ ಕವಿಗಳ ಬಗ್ಗೆಯೂ ಮಾತನಾಡಬಹುದಿತ್ತು. ಆದರೆ ಅದರ ಅನಿವಾರ್ಯತೆ ಇಲ್ಲವೇನೋ ಅನಿಸುತ್ತಿದೆ. ಆ ಎರಡೂ ರಾಜ್ಯಗಳಲ್ಲಿ ಈಗಾಗಲೇ ಹೊಂದಾಣಿಕೆ ರಾಜಕಾರಣ ನಡೆಯುತ್ತಿರುವುದು ಜನಸಾಮಾನ್ಯರಿಗೂ ತಿಳಿದ ವಿಚಾರವಾಗಿದೆ. ಆದರೆ ಇಂದು ಅಭದ್ರತೆ, ಅತಂತ್ರತೆ ಸೃಷ್ಟಿಯಾಗುತ್ತಿರುವುದು ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಮಾತ್ರ. ಆ ಕಾರಣಕ್ಕಾಗಿ ಇವರಿಗೆ ಒಕ್ಕಲಿಗರ ಮನವೊಲಿಸುವ ಅನಿವಾರ್ಯತೆ ಬಂದೊದಗಿದೆ. ಕುವೆಂಪು ಸಮುದಾಯದ ಮತ ಬೇಟೆಯ ಅನಿವಾರ್ಯತೆ ಬಂದೊದಗಿದೆ.

ದಲಿತ ನಾಯಕರು ತಮ್ಮ ಮೀಸಲು ಕ್ಷೇತ್ರಗಳಲ್ಲಿ ಗೆದ್ದು ಬಂದ ನಂತರದ ದಿನಗಳಲ್ಲಿ ಆಳುವ ಪಕ್ಷಗಳ ಜೊತೆ ಅಥವಾ ತಮಗೆ ಭದ್ರತೆ ಒದಗಿಸುವ ಪಕ್ಷಗಳ ಜೊತೆ ಕೈ ಜೋಡಿಸಿರುವಾಗ ದಲಿತರ ವೋಟನ್ನು ಕಬಳಿಸುವ ದಾರಿ ಬಹಳ ಸುಗಮವಾಗಿದೆ. ಇನ್ನು ಉಳಿದಿರುವುದು ಸೋಲಿಗ ಸಮುದಾಯದ ವೋಟುಗಳ ಕಬಳಿಕೆಯಷ್ಟೇ. ಅದರ ಹುನ್ನಾರವೆಂಬಂತೆ ಮುರ್ಮುರನ್ನು ಅಧಿಕಾರಕ್ಕೆ ತರಲೇಬೇಕಾದ ಅನಿವಾರ್ಯತೆ ಬಂದೊದಗಿದೆ. ದಲಿತರ ವೋಟಿಗಿಂತ, ಕುವೆಂಪು ಸಮುದಾಯದ ಓಟುಗಳೇ ಬಹಳ ಮುಖ್ಯ ಎನ್ನುವುದನ್ನು ಇಂದಿನ ಕರ್ನಾಟಕ ರಾಜಕಾರಣದ ಮುಂಚೂಣಿ ನಾಯಕರು ಚೆನ್ನಾಗಿ ಅರಿತಿದ್ದಾರೆ. ಒಬ್ಬ ಶ್ರೇಷ್ಠ ಕವಿಯನ್ನು ಈ ರೀತಿ ರಾಜಕೀಯವೆಂಬ ಬಾಣಲೆಯಲ್ಲಿ ಹಾಕಿ ತಮ್ಮ ಬೇಳೆಕಾಳು ಬೇಯಿಸಿ ಎಲ್ಲರಿಗೂ ಉಣಬಡಿಸುವ ಪ್ರಯತ್ನದಲ್ಲಿ ಮುಂದಾಗಿದ್ದಾರೆ. ಇದು ಇಲ್ಲಿನ ಒಕ್ಕಲಿಗ ಹಾಗೂ ಜನಸಾಮಾನ್ಯ ಯುವ ಪೀಳಿಗೆಗೆ, ಶೋಷಿತ ಸಮುದಾಯಗಳಿಗೆ ಅರ್ಥವಾಗಬೇಕಿದೆ. ದಯವಿಟ್ಟು ಇಂತಹ ಧರ್ಮದ, ಜಾತಿಯ ರಾಜಕಾರಣದ ಜೊತೆಗೆ ಕೈ ಜೋಡಿಸುವುದರಿಂದ ದೇಶದ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಅದು ಶುಭ ಸೂಚಕವೂ ಅಲ್ಲ ಎನ್ನುವುದನ್ನು ಮನಗಾಣಬೇಕಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು ಎನ್ನುವುದನ್ನು ಅರಿತ ಬಾಬಾಸಾಹೇಬ್ ಡಾ. ಅಂಬೇಡ್ಕರ್ ಅವರು ‘‘ದೇಶದ ಪ್ರಧಾನಿಗೂ ಒಂದೇ ಓಟಿನ ಹಕ್ಕು, ಕೂಲಿ ಕಾರ್ಮಿಕನಿಗೂ ಒಂದೇ ಓಟಿನ ಹಕ್ಕನ್ನು ನೀಡಿದ್ದೇನೆ. ಇಲ್ಲಿ ಯಾವುದೇ ರೀತಿಯ ತಾರತಮ್ಯವಿಲ್ಲ, ಸಂವಿಧಾನದ ಮುಂದೆ ಎಲ್ಲರೂ ಸಮಾನರೇ’’ ಎಂದು ಹೇಳಿದ್ದಾರೆ. ಮುಂದುವರಿದು ‘‘ಮೀಸಲಾತಿ ಎಂಬುದು ಜಾತಿ ಜನಸಂಖ್ಯೆವಾರು ಎಲ್ಲಾ ಜನಾಂಗಗಳಿಗೂ ಸಮಾನ ಸ್ಥಾನಮಾನಗಳು, ಅವಕಾಶಗಳು ಸಿಗಲೇಬೇಕು ಎಂದು ಸಂವಿಧಾನದಲ್ಲಿ ಅಳವಡಿಸಲಾಗಿದೆಯೇ ವಿನಃ, ಯಾವುದೋ ಒಂದು ಜನಾಂಗಕ್ಕೆ ಸೀಮಿತವಾದದ್ದಲ್ಲ’’ ಎಂದಿದ್ದಾರೆ. ಸಂವಿಧಾನವನ್ನು ಜಾರಿಮಾಡುವ ಜನರು ಸರಿಯಾದ ಸಮಯಕ್ಕೆ ಸರಿಯಾಗಿ ಜಾರಿ ಮಾಡಿದರೆ ಈ ದೇಶ ಪ್ರಬುದ್ಧ ಭಾರತವಾಗುತ್ತದೆ ಎಂದು ಹೇಳಿರುವುದನ್ನು ನಾವು ಅರಿಯಬೇಕಾದ ಅನಿವಾರ್ಯತೆ ಬಂದೊದಗಿದೆ.

ಮತ ಮನುಜಮತವಾಗಬೇಕು

ಪಥ ವಿಶ್ವಪಥವಾಗಬೇಕು

ಮಾನವ ವಿಶ್ವಮಾನವನಾಗಬೇಕು

Writer - ಧಮ್ಮಪ್ರಿಯ ಬೆಂಗಳೂರು

contributor

Editor - ಧಮ್ಮಪ್ರಿಯ ಬೆಂಗಳೂರು

contributor

Similar News