×
Ad

ಎಂಸಿಎಫ್ ಉದ್ಯೋಗಿ ನಿಗೂಢ ಕಾಣೆ; ಕುಟುಂಬಸ್ಥರಿಂದ ತನಿಖೆಗೆ ಮನವಿ

Update: 2022-09-10 21:47 IST

ಮಂಗಳೂರು, ಸೆ.10: ಮೂಲತಃ ಯಾದಗಿರಿ ಜಿಲ್ಲೆಯವರಾದ ಪಣಂಬೂರಿನ ಎಂಸಿಎಫ್‌ನಲ್ಲಿ ಉದ್ಯೋಗಿಯಾಗಿದ್ದ ಆದಿತ್ಯ ವಿ. ಅಲಗೂರು (27) ನಾಪತ್ತೆಯಾಗಿ 50 ದಿನಗಳು ಕಳೆದಿದೆ. ಆದರೆ ಈವರೆಗೂ ಆತನ ಬಗ್ಗೆ ಯಾವುದೇ ಮಾಹಿತಿ ಇಲ್ಲ.  ಈ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು ಎಂದು  ಆತನ ತಂದೆ ವಿ.ಎಸ್.ಅಲಗೂರು ಮನವಿ ಮಾಡಿದ್ದಾರೆ.

ಎಂಸಿಎಫ್ ಫ್ಯಾಕ್ಟರಿಯ ಪ್ರೊಡಕ್ಷನ್ ಡಿಪಾರ್ಟ್‌ಮೆಂಟ್‌ನಲ್ಲಿ ಉದ್ಯೋಗಿಯಾಗಿದ್ದ ಆದಿತ್ಯ ನಗರದ ಕುಂಜತ್ತಬೈಲ್‌ನ ಟೌನ್‌ಶಿಪ್ ಕ್ವಾಟ್ರರ್ಸ್‌ನಲ್ಲಿ ವಾಸವಾಗಿದ್ದ. ಆತನ ತಂದೆ, ತಾಯಿ ಮತ್ತು ಸಹೋದರ ಕೂಡ ಜೊತೆಗಿದ್ದರು. ಜು.16ರಂದು ತಂದೆ ಮತ್ತು ತಾಯಿ ಕೆಲಸದ ನಿಮಿತ್ತ ಊರಿಗೆ ಹೋಗಿದ್ದ ವೇಳೆ ಕ್ವಾಟ್ರರ್ಸ್‌ನಲ್ಲಿ ಆದಿತ್ಯ ಮತ್ತಾತನ ಸಹೋದರ ಅಭಿಷೇಕ್ ಮಾತ್ರ ಇದ್ದರು ಎನ್ನಲಾಗಿದೆ.

‘ಅಂದು ಸಂಜೆ ಆದಿತ್ಯ ಸ್ಕೂಟರ್‌ನಲ್ಲಿ ಮನೆಯಿಂದ ಹೊರಗೆ ಹೋಗಿದ್ದ. 7:20ರ ವೇಳೆಗೆ ಅಭಿಷೇಕ್‌ನಿಗೆ ಕರೆ ಮಾಡಿದ ಆದಿತ್ಯ ‘ಮನೆಗೆ ಬರುವಾಗ ತಡವಾಗುತ್ತದೆ’ ಎಂದಿದ್ದ. 7:45ಕ್ಕೆ ಅಭಿಷೇಕ್ ಕರೆ ಮಾಡಿದಾಗ ಆದಿತ್ಯನ ಮೊಬೈಲ್ ಸ್ವಿಚ್‌ಆಫ್ ಆಗಿತ್ತು. ಮರುದಿನ ಆದಿತ್ಯನ ಬಗ್ಗೆ ಸ್ನೇಹಿತರಲ್ಲಿ ವಿಚಾರಿಸಿದರೂ ಮಾಹಿತಿ ಸಿಗಲಿಲ್ಲ. ಕಾವೂರು, ಮರವೂರು ಪರಿಸರದಲ್ಲಿ ಹುಡುಕಾಡಿದಾಗ ಜು.21ರಂದು ಮರವೂರು ಡ್ಯಾಂ ಬಳಿ ಆದಿತ್ಯನ ಸ್ಕೂಟರ್ ಪತ್ತೆಯಾಗಿತ್ತು. ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಆದಿತ್ಯನ ತಂದೆ ವಿ.ಎಸ್.ಅಲಗೂರು ತಿಳಿಸಿದ್ದಾರೆ.

ಜು.16ರಂದು ಸಂಜೆ ಆದಿತ್ಯ ಸ್ಕೂಟರ್‌ನಲ್ಲಿ ಮರಕಡ ಕಡೆಯಿಂದ ಕಾವೂರಿಗೆ ಹೋಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಳಿಕ ಎಲ್ಲಿಗೆ ಹೋಗಿದ್ದಾನೆಂಬುದು ತಿಳಿದಿಲ್ಲ. ಈಜುಪಟುವಾಗಿದ್ದ ಆದಿತ್ಯ ನೀರಿನಲ್ಲಿ ಮುಳುಗಲು ಸಾಧ್ಯವಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವನೂ ಅಲ್ಲ. ಸಹಕಾರಿ ಬ್ಯಾಂಕ್‌ನಲ್ಲಿ 3.50 ಲಕ್ಷ ರೂ. ಸಾಲ ಮಾಡಿದ್ದರೂ ಆತನ ಸಂಬಳದಲ್ಲಿ ಅದು ಕಡಿತವಾಗುತ್ತಿತ್ತು. ಆದಿತ್ಯನ ಮೊಬೈಲ್ ಸ್ಕೂಟರ್‌ನಲ್ಲೇ ಇತ್ತು. ಕೀ ಕೂಡ ಸ್ಕೂಟರ್ ಸೀಟಿನಡಿಯಲ್ಲಿತ್ತು. ಅದನ್ನು ಪೊಲೀಸರಿಗೆ ಒಪ್ಪಿಸಿದ್ದೇವೆ. ಆದಿತ್ಯ 5 ವರ್ಷದಿಂದ ಎಂಸಿಎಫ್ ಟೌನ್‌ಶಿಪ್ ಕ್ವಾಟ್ರರ್ಸ್‌ನಲ್ಲೇ ಇದ್ದ. 2 ವರ್ಷಗಳಿಂದ ಅವನಿಗೆ ಸ್ಥಳೀಯ ಕೆಲವರ ಪರಿಚಯವಾಗಿತ್ತು. ಆತನ ನಿಗೂಢ ಕಾಣೆಯ ಬಗ್ಗೆ 3-4 ಮಂದಿಯ ಮೇಲೆ ಸಂಶಯವಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ ಎಂದು ವಿ.ಎಸ್. ಅಲಗೂರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News