ನಂದಿನಿ ಹಾಲು ಪ್ರತಿ ಲೀಟರ್ ಗೆ 3 ರೂ. ಹೆಚ್ಚಳ?

Update: 2022-09-12 05:36 GMT

ಬೆಂಗಳೂರು, ಸೆ.12: ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಲು ರೈತರ ಆರ್ಥಿಕಾಭಿವೃದ್ಧಿಗೆ ಪ್ರತಿ ಲೀಟರ್ ಹಾಲಿಗೆ 3 ರೂ. ಹೆಚ್ಚಳ ಮಾಡಲು ಕೆಎಂಎಫ್ ನಿರ್ಧರಿಸಿದ್ದು, ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ ಎಂದು ತಿಳಿದುಬಂದಿದೆ.

ಕಳೆದ ಶುಕ್ರವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಜರುಗಿದ ಕೆಎಂಎಫ್‍ನ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಈ ಬಗ್ಗೆ ಸರ್ವಾನುಮತದ ನಿರ್ಣಯ ಕೈಗೊಂಡಿದ್ದು, ಕೆಎಂಎಫ್‍ನ ಎಲ್ಲ 14 ಜಿಲ್ಲಾ ಹಾಲು ಒಕ್ಕೂಟಗಳು ಹಾಲಿನ ದರ ಹೆಚ್ಚಳ ಮಾಡುವುದರ ಬಗ್ಗೆ ಒಲುವು ತೋರಿವೆ ಎಂದು ಹೇಳಲಾಗುತ್ತಿದೆ. ಆದರೆ, ದರ ಹೆಚ್ಚಿಸಲು ಸರಕಾರ ಅನುಮತಿ ನೀಡಿದ ಬಳಿಕವೇ ಈ ನಿರ್ಧಾರ ಜಾರಿಯಾಗಲಿದೆ ಎಂದು ಹೇಳಲಾಗಿದೆ.

ಹಾಲಿನ ದರ ಹೆಚ್ಚಳ ಮಾಡುವಂತೆ ಕಳೆದ 8 ತಿಂಗಳುಗಳಿಂದ ರಾಜ್ಯದ ಜಿಲ್ಲಾ ಹಾಲು ಒಕ್ಕೂಟಗಳು ಕೆಎಂಎಫ್‍ಗೆ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರೂ ಹಾಲಿನ ದರ ಹೆಚ್ಚಳಕ್ಕೆ ಸರಕಾರ ಸೂಕ್ತವಾಗಿ ಸ್ಪಂದನ ನೀಡದ್ದರಿಂದ ಕೊನೆಗೂ ರೈತರ ಅನುಕೂಲಕ್ಕೋಸ್ಕರ ದರ ಹೆಚ್ಚಳಕ್ಕೆ ಮುಂದಾಗಿದೆ ಎಂದು ತಿಳಿದುಬಂದಿದೆ.

ದೇಶದಲ್ಲಿ ಕೆಎಂಎಫ್ ಹೊರತುಪಡಿಸಿ ಉಳಿದೆಲ್ಲ ಬೇರೆ ಬೇರೆ ಖಾಸಗಿ ಬ್ರಾಂಡ್‍ಗಳು ಹಾಲಿನ ದರದಲ್ಲಿ ಭಾರಿ ಬದಲಾವಣೆ ಮಾಡಿವೆ. ಕೆಎಂಎಫ್ ಮಾತ್ರ ಪ್ರತಿ ಲೀಟರ್ ಹಾಲಿಗೆ 37 ರೂ.ಗಳನ್ನು ನೀಡುತ್ತಿದೆ. ಬೇರೆ-ಬೇರೆ ಬ್ರಾಂಡ್‍ಗಳಿಗೆ ಹೋಲಿಕೆ ಮಾಡಿದರೆ 8 ರಿಂದ 10 ರೂ.ಗಳು ವ್ಯತ್ಯಾಸ ಕಂಡುಬರುತ್ತಿದೆ. . ರೈತರ ಹಿತಕ್ಕಾಗಿ ನಂದಿನಿ ಹಾಲಿನ ದರದಲ್ಲಿ ಏರಿಕೆ ಮಾಡಲು ನಿರ್ಧರಿಸಿರುವ ಕೆಎಂಎಫ್, 3 ರೂ. ಹೆಚ್ಚಳ ಮಾಡಲು ಮುಂದಾಗಿದ್ದು ಏರಿಕೆ ಮಾಡಲಿರುವ ದರವನ್ನು ರೈತರಿಗೆ ನೀಡಲು ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.

ಈ ನಡುವೆ ಹಾಲಿನ ದರ ಏರಿಕೆಯ ನಡುವೆಯೇ ತುಪ್ಪದ ದರವನ್ನು ಕೆಎಂಎಫ್ ಏರಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News