×
Ad

"ಕಾಂಗ್ರೆಸ್ ಕಳಿಸಿದ ಮಸಾಲೆ ದೋಸೆ ಇನ್ನೂ ಬಂದಿಲ್ಲ; ಇದರಲ್ಲೂ ಮೋಸ !"

Update: 2022-09-12 13:31 IST

ಬೆಂಗಳೂರು, ಸೆ.12: ಸಂಸದ ತೇಜಸ್ವಿ ಸೂರ್ಯ ಮತ್ತು ಕಾಂಗ್ರೆಸ್ ನಡುವಿನ ಮಸಾಲೆ ದೋಸೆ ಚರ್ಚೆ ಮುಂದುವರಿದಿದೆ. "ನನ್ನ ಮನೆಗೆ ಮಸಾಲೆ ದೋಸೆ ಪಾರ್ಸೆಲ್ ಕಳುಹಿಸಿರುವುದಾಗಿ ಕಾಂಗ್ರೆಸ್ ಹೇಳಿ 24 ಗಂಟೆಗಳೇ ಕಳೆದಿವೆ. ಆದರೆ ಇದುವರೆಗೆ ನನಗೆ ದೋಸೆ ಸಿಕ್ಕಿಲ್ಲ. ಇದರಲ್ಲೂ ಕಾಂಗ್ರೆಸ್ ಮೋಸ ಮಾಡುತ್ತಿದೆ" ಎಂದು ತೇಜಸ್ವಿ ಸೂರ್ಯ ಕಾಂಗ್ರೆಸ್ ನಾಯಕರ ಹಾಗೂ ಕಾರ್ಯಕರ್ತರ ಕಾಲೆಳೆದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ತೇಜಸ್ವಿ ಸೂರ್ಯ, “ಕಾಂಗ್ರೆಸ್ ಸುದ್ದಿಗೋಷ್ಠಿ ನಡೆಸಿ ನನ್ನ ಮನೆಗೆ ಮಸಾಲೆ ದೋಸೆ ಪಾರ್ಸೆಲ್ ಕಳುಹಿಸಿರುವುದಾಗಿ ಘೋಷಿಸಿದೆ. ಅವರು ಹೇಳಿ 24 ಗಂಟೆಗಳಿಗಿಂತ ಹೆಚ್ಚೂ ಸಮಯ ಕಳೆಯಿತು. ಆದರೆ ನನಗಿನ್ನೂ ದೋಸೆ ಸಿಕ್ಕಿಲ್ಲ. ಇದರಲ್ಲೂ ಮೋಸ ಮಾಡಿದ್ದಾರೆ. ಅವರಿಗೆ ಸರಿಯಾಗಿ ದೋಸೆಯನ್ನು ಡೆಲಿವರಿ ಮಾಡಲು ಸಾಧ್ಯವಿಲ್ಲ. ಹೀಗಿದ್ದರೂ ಅವರು ಉತ್ತಮ ಆಡಳಿತ ನೀಡುವ ಕನಸು ಕಾಣುತ್ತಾರೆ” ಎಂದು ಛೇಡಿಸಿದ್ದಾರೆ.

‘ಬೆಂಗಳೂರು ನಗರದ ಜನತೆ ಮಳೆ ಮತ್ತು ಪ್ರವಾಹದಿಂದ ಸಂಕಷ್ಟದಲ್ಲಿದ್ದ ಸಂದರ್ಭ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ 'ಇನ್‌ಸ್ಟಾಗ್ರಾಂನಲ್ಲಿ ದೋಸೆ ಚಿತ್ರ ನೋಡಿ ಟೆಂಪ್ಟ್‌ ಆಗಿ ದೋಸೆ ತಿನ್ನಲು ಬಂದಿದ್ದೇನೆ' ಎಂದು ಹೇಳುತ್ತಾ ಪದ್ಮನಾಭ ನಗರದ ಹೋಟೆಲ್‌ವೊಂದರಲ್ಲಿ ದೋಸೆ ಸವಿಯುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.  ಸಂಸದರ ನಡೆಯನ್ನು ನಾಗರಿಕರು, ರಾಜಕೀಯ ಪಕ್ಷಗಳ ನಾಯಕರು ತೀವ್ರವಾಗಿ ಟೀಕಿಸಿದ್ದರು.    

ಜನರ ಸಂಕಷ್ಟಕ್ಕೆ ಸ್ಪಂದಿಸದ ಸಂಸದರ ನಡೆ ಖಂಡನೀಯ ಎಂದಿದ್ದ ಕಾಂಗ್ರೆಸ್‌ ಕಾರ್ಯಕರ್ತರು, ನಗರದ ವಿವಿಧ ರೆಸ್ಟೋರೆಂಟ್‌ಗಳಲ್ಲಿ ತಯಾರಿಸಲಾದ 10 ಸೆಟ್‌ ದೋಸೆಗಳನ್ನು ಅವರ ಕಚೇರಿಗೆ ಕಳುಹಿಸಿಕೊಟ್ಟಿರುವುದಾಗಿ ಹೇಳಿಕೆ ನೀಡಿದ್ದರು. ಇದೀಗ ಅದೇ ವಿಚಾರವನ್ನು ಕಾಂಗ್ರೆಸ್ ಕಾಲೆಳೆಯಲು ತೇಜಸ್ವಿ ಸೂರ್ಯ ಬಳಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News