×
Ad

ಪುತ್ತೂರು : ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ

Update: 2022-09-12 18:16 IST

ಪುತ್ತೂರು : ಸರ್ಕಾರ ಅರ್ಹ ರೈತರ ಸಾಲಮನ್ನಾ ಹಣವನ್ನು ಶೀಘ್ರವಾಗಿ ರೈತರ ಖಾತೆಗೆ ಜಮೆ ಮಾಡದಿದ್ದಲ್ಲಿ ದೊಡ್ಡ ಸಂಖ್ಯೆಯಲ್ಲಿ ರೈತರನ್ನು ಸೇರಿಸಿಕೊಂಡು ಜಿಲ್ಲಾ ಮಟ್ಟದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ ಕಾರ್ಯಕಾರಿ ಸಮಿತಿಯ ಸದಸ್ಯ ಸುಬ್ರಾಯ.ಬಿ.ಎಸ್ ಎಚ್ಚರಿಸಿದರು.

ಅವರು ಎಲ್ಲಾ ಅರ್ಹ ರೈತರ ಬೆಳೆಸಾಲ ಮನ್ನಾ ಮಾಡಬೇಕು. ವೈಜ್ಞಾನಿಕ ಬೆಲೆಯಾಗಿ ಹಾಲಿಗೆ ಲೀಟರ್ ಒಂದಕ್ಕೆ ಕನಿಷ್ಠ ರೂ.75 ನೀಡಬೇಕು. ಕುಮ್ಮಿ ಭೂಮಿಯ ಹಕ್ಕುಪತ್ರವನ್ನು ಸಂಬಂಧಪಟ್ಟ ರೈತರಿಗೆ ನೀಡಬೇಕು. ಬೆಲೆ ಕುಸಿತದಿಂದ ಸಂಕಷ್ಟಕ್ಕೀಡಾಗಿರುವ ರಬ್ಬರ್ ಬೆಳೆಗಾರರನ್ನು ರಕ್ಷಿಸುವ ಸಲುವಾಗಿ ತಕ್ಷಣ ಬೆಂಬಲ ಬೆಲೆ ಘೋಷಿಸಬೇಕು ಎಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಸೋಮವಾರ ಪುತ್ತೂರು ನಗರದಲ್ಲಿ ರೈತರ ಕಾಲ್ನಡಿಗೆ ಜಾಥಾ ಮತ್ತು ತಾಲೂಕು ಆಡಳಿತ ಸೌಧದ ಮುಂಬಾಗದಲ್ಲಿ ನಡೆದ  ಧರಣಿ ಪ್ರತಿಭಟನೆಯಲ್ಲಿ ಮಾತನಾಡಿದರು.

ಭಾರತೀಯ ಕಿಸಾನ್ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಾಂಭವಿ ಮಾತನಾಡಿ ಬೆಳ್ಳಿ-ಬಂಗಾರವನ್ನು ತಿನ್ನಲು ಆಗವುದಿಲ್ಲ, ರೈತರು ಬೆಳೆದ ಅನ್ನ ಆಹಾರ ಉತ್ಪನ್ನಗಳನ್ನೇ ನಾವು ತಿನ್ನಬೇಕಾಗುತ್ತದೆ. ಇದು ಎಲ್ಲರಿಗೂ ನೆನಪಿನಲ್ಲಿರಬೇಕು. ಹೈನುಗಾರಿಕೆ ಸೇರಿದಂತೆ ರೈತರ ಎಲ್ಲಾ ಬೇಡಿಕೆಗಳನ್ನು ಸರ್ಕಾರ ಈಡೇರಿಸುವುದಿಲ್ಲ ಎಂದಾದರೆ ರೈತರೆಲ್ಲರೂ ಒಗ್ಗಟ್ಟಾಗಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದರು.

ಸೇವಾ ಭಾರತಿ ಸಾವಯವ ಕೃಷಿ ಪರಿವಾರದ ಅಧ್ಯಕ್ಷ ಎ.ಪಿ.ಸದಾಶಿವ ಮರಿಕೆ, ಭಾರತೀಯ ಕಿಸಾನ್ ಸಂಘದ ಹಿರಿಯ ಮುಖಂಡ ಮೂಲಚಂದ್ರ, ಶಾಂತಿಗೋಡು ಗ್ರಾಮ ಸಮಿತಿಯ ಅಧ್ಯಕ್ಷ ಎಸ್.ಪಿ. ನಾರಾಯಣ ಗೌಡ ಪಾದೆ, ಶಾಂತಿಗೋಡು ಗ್ರಾಮ ಸಮಿತಿಯ ಕಾರ್ಯದರ್ಶಿ ವಿಶ್ವನಾಥ ಬಲ್ಯಾಯ, ಕೃಷಿಕ ಪಿ.ಎಂ.ಅಶ್ರಫ್ ಮುಕ್ವೆ, ರಬ್ಬರ್ ಬೆಳೆಗಾರ ಪ್ರಕಾಶ್ ಧರ್ಮಸ್ಥಳ ಅವರು ಮಾತನಾಡಿದರು.  

ಭಾರತೀಯ ಕಿಸಾನ್ ಸಂಘದ ನರಿಮೊಗ್ರು ಗ್ರಾಮ ಸಮಿತಿಯ ಅಧ್ಯಕ್ಷ ಸುರೇಶ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು. ಧರಣಿ ನಿರತ ರೈತರ ಬಳಿಗೆ ಆಗಮಿಸಿದ ಪುತ್ತೂರು ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಅವರು ಮನವಿ ಸ್ವೀಕರಿಸಿದರು. ಧರಣಿ ಪ್ರತಿಭಟನೆಗೆ ಮೊದಲು ನಗರದ ದರ್ಜೆ ಜಂಕ್ಷನ್ ಬಳಿ ಸೇರಿದ್ದ ರೈತರು ಅಲ್ಲಿಂದ ಮುಖ್ಯರಸ್ತೆಯಾಗಿ ಕಾಲ್ನಡಿಗೆ ಜಾಥಾದ ಮೂಲಕ ಮಿನಿವಿಧಾನಸೌಧ ಕಚೇರಿಗೆ ಬಂದು ಧರಣೆ ಆರಂಭಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News