×
Ad

ರಂಗಕರ್ಮಿ ಎಚ್.ವಿ. ವೆಂಕಟಸುಬ್ಬಯ್ಯ ನಿಧನ

Update: 2022-09-12 18:38 IST

ಬೆಂಗಳೂರು, ಸೆ.12: ಕನ್ನಡ ರಂಗಭೂಮಿಯ ಹಿರಿಯ ನಿರ್ದೇಶಕ, ತಂತ್ರಜ್ಞ, ಎಚ್.ವಿ. ವೆಂಕಟಸುಬ್ಬಯ್ಯ(ಸುಬ್ಬಣ್ಣ) ಸೋಮವಾರ ಬೆಳಗ್ಗೆ ಶೇಷಾದ್ರಿಪುರಂ ಅಪೊಲೋ ಆಸ್ಪತ್ರೆಯಲ್ಲಿ ನಿಧನರಾದರು. 

ಅವರಿಗೆ ಸುಮಾರು 85ವರ್ಷ ವಯಸ್ಸಾಗಿದ್ದು, ವೃತ್ತಿಯಲ್ಲಿ ವೈದ್ಯೆಯಾಗಿದ್ದ ಪತ್ನಿ ಡಾ. ಶಾರದಾ, ವಿದೇಶದಲ್ಲಿ ನೆಲೆಸಿದ ಇಬ್ಬರು ಹೆಣ್ಣುಮಕ್ಕಳನ್ನು ಸೇರಿ ಅಪಾರ ಶಿಷ್ಯರು ಹಾಗೂ ಅಭಿಮಾನಿಗಳನ್ನು ಅವರು ಅಗಲಿದ್ದಾರೆ. ನಾಟಕ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ ಹಾಗೂ ಎರಡು ವರ್ಷಗಳ ಹಿಂದೆ ಜೀವಮಾನ ಸಾಧನೆಗೆ ಬಿ.ವಿ. ಕಾರಂತ ಪ್ರಶಸ್ತಿಗೆ ಅವರು ಭಾಜನರಾಗಿದ್ದರು. 

ಮಕ್ಕಳಾದ ಮಾಳವಿಕಾ ಹಾಗೂ ಮಾನಸ ಅವರು ಅಮೆರಿಕದಿಂದ ಬಂದ ಮೇಲೆ ಬುಧವಾರದಂದು ಅವರ ಪಾರ್ಥಿವ ಶರೀರವನ್ನು ತರಲಾಗುತ್ತದೆ. ಹಾಗಾಗಿ ಬುಧವಾರ(ನಾಳೆ) ಅವರ ಅಂತಿಮ ಯಾತ್ರೆ ರೂಪುರೇಷೆಗಳು ಸಿದ್ಧವಾಗುತ್ತವೆ ಎಂದು ರಂಗ ಸಂಪದದ ಜೆ. ಲೋಕೇಶ್ ತಿಳಿಸಿದ್ದಾರೆ.

ರಂಗಸಂಪದ ತಂಡವನ್ನು ಬಿತ್ತಿ ಬೆಳೆಸಿದ ಪ್ರಮುಖರಲ್ಲಿ ವೆಂಕಟಸುಬ್ಬಯ್ಯನವರು ಬಹಳ ಮುಖ್ಯರಾಗಿದ್ದಾರೆ. ತುರ್ತು ಪರಿಸ್ಥಿತಿಯ ಕಾಲದಲ್ಲಿ ಅವರು ನಿರ್ದೇಶಿಸಿದ ಶ್ರೀರಂಗರ ಸಮಗ್ರ ಮಂಥನ ನಾಟಕ ರಾಜ್ಯದಲ್ಲಿ ಸಂಚಲನವನ್ನು ಉಂಟು ಮಾಡಿತು. ನಂತರ ಅವರ ನಿರ್ದೇಶಿಸಿದ ಐಎನ್‍ಎಸ್ಕೋನ ಮಹಾಪ್ರಸ್ಥಾನ ಕನ್ನಡ ರಂಗಭೂಮಿಯಲ್ಲಿ ಮತ್ತೊಂದು ಮಜಲನ್ನು ಸೃಷ್ಟಿಸಿತು. ಎಂ.ಎಸ್.ಕೆ. ಪ್ರಭು ಅವರ ಗುಲಾಮನ ಸ್ವಾತಂತ್ರ್ಯತ್ರೆ ಅವರ ನಿರ್ದೇಶನ ಮತ್ತೊಂದು ಪ್ರಸಿದ್ಧ ನಾಟಕವಾಗಿದೆ. ಅವರು ಮಾಡಿದ್ದ ನಾಟಕಗಳ ಎಲ್ಲಾ ಡಾಕ್ಯುಮೆಂಟೇಶನ್ ಈಗ ನಾಟಕ ಅಕಾಡೆಮಿಯಲ್ಲಿ ದೊರೆಯುತ್ತವೆ. ಅವರು ಶ್ರೀರಂಗದ ಬಗ್ಗೆ ಬಂದಿದ್ದ ಎಲ್ಲಾ ಲೇಖನಗಳನ್ನು ಒಗ್ಗೂಡಿಸಿ ‘ಶ್ರೀರಂಗ ಸಂಪದ’ ಗ್ರಂಥವನ್ನು ಹೊರತಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News