ನೀಟ್ ಪರೀಕ್ಷೆಯಲ್ಲಿ ಬೀದರ್ ಶಾಹೀನ್ ಕಾಲೇಜಿನ 12 ಮದರಸ ವಿದ್ಯಾರ್ಥಿಗಳ ಸಾಧನೆ
ಬೆಂಗಳೂರು, ಸೆ.13: 2022ನೆ ಸಾಲಿನ ನೀಟ್ ಪರೀಕ್ಷೆಯಲ್ಲಿ ಬೀದರ್ ಶಾಹೀನ್ ಕಾಲೇಜಿನಲ್ಲಿ ಹಿಫ್ಝುಲ್ ಕುರ್‌ಆನ್ ಪ್ಲಸ್ ಕೋರ್ಸ್ ಅಧ್ಯಯನ ಮಾಡಿದ 12 ಮದರಸ ವಿದ್ಯಾರ್ಥಿಗಳು ರ‍್ಯಾಂಕ್ ಪಡೆಯುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ ಎಂದು ಬೀದರ್ ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ತಿಳಿಸಿದರು.
ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ದಾರುಸ್ಸಲಾಮ್ ಕಟ್ಟಡದ ಬಿಫ್ಟ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮದ್ರಸಾದಲ್ಲಿ ಹಾಫಿಝ್ ಕೋರ್ಸ್ ಪೂರೈಸಿರುವ ಈ 12 ಮಂದಿ ವಿದ್ಯಾರ್ಥಿಗಳು ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಸೀಟುಗಳನ್ನು ಪಡೆಯುವ ನಿರೀಕ್ಷೆಯಿದೆ ಎಂದರು.
ಶಾಲೆಗೆ ಹಾಜರಾಗದೆ ಕೇವಲ ಮದರಸ ಶಿಕ್ಷಣದಲ್ಲಿ ಹಾಫಿಝ್ ಕೋರ್ಸ್ ಪೂರೈಸಿರುವಂತಹ ಹಾಗೂ ಶಾಲಾ ಶಿಕ್ಷಣವನ್ನು ಮೊಟಕಗೊಳಿಸಿರುವಂತಹ ವಿದ್ಯಾರ್ಥಿಗಳಿಗೆ ಶಾಹೀನ್ ಕಾಲೇಜಿನ ಎಐಸಿಯು(ಶೈಕ್ಷಣಿಕ ತೀವ್ರ ನಿಗಾ ಘಟಕ)ನಲ್ಲಿ ಮೂರು ತಿಂಗಳ ಫೌಂಡೇಷನ್ ಕೋರ್ಸ್ ನಲ್ಲಿ ಗಣಿತ ಹಾಗೂ ಭಾಷಾ ಅಧ್ಯಯನ ಕಲಿಸಲಾಗುವುದು. ಆನಂತರ, ಒಂದು ತಿಂಗಳ ಬ್ರಿಡ್ಜ್ ಕೋರ್ಸ್ ಮೂಲಕ ವಿಜ್ಞಾನ ವಿಷಯದ ಬೋಧನೆ ಮಾಡಿ 10ನೆ ತರಗತಿಗೆ ದಾಖಲು ಮಾಡಲಾಗುವುದು ಎಂದು ಅವರು ಹೇಳಿದರು.
ಆನಂತರ ಒಂದು ವರ್ಷ ರಾಜ್ಯ ಪಠ್ಯಕ್ರಮ ಅಥವಾ ಎನ್‌ಐಓಎಸ್ ಪಠ್ಯಕ್ರಮದ ಮೂಲಕ ಬೋಧನೆ ಮಾಡಿ ಮದರಸವಿದ್ಯಾರ್ಥಿಗಳು 10ನೆ ತರಗತಿ ಪರೀಕ್ಷೆ ತೆಗೆದುಕೊಳ್ಳುವಂತೆ ಮಾಡಲಾಗುವುದು. ಆನಂತರ ಎರಡು ವರ್ಷಗಳ ಇಂಟರ್‌ಮೀಡಿಯಟ್ ಕೋರ್ಸ್ ಅಧ್ಯಯನ ಮಾಡಿಸಿ, ವಿದ್ಯಾರ್ಥಿಗಳು ನೀಟ್, ಜೆಇಇ, ಯುಪಿಎಸ್ಸಿ ಪರೀಕ್ಷೆಗಳನ್ನು ತೆಗೆದುಕೊಳ್ಳುವಂತೆ ಸಿದ್ಧಪಡಿಸಲಾಗುವುದು ಎಂದು ಅಬ್ದುಲ್ ಖದೀರ್ ತಿಳಿಸಿದರು.
ಮದರಸ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಯ ಶಿಕ್ಷಣದ ಜೊತೆ ಜೋಡಿಸುವ ಈ ಕೆಲಸವನ್ನು ಶಾಹೀನ್ ಶಿಕ್ಷಣ ಸಂಸ್ಥೆ 12 ವರ್ಷಗಳ ಹಿಂದೆ ಆರಂಭಿಸಿತು. ಇವತ್ತು ಇಡೀ ದೇಶದಲ್ಲಿ 35 ಎಐಸಿಯು ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಮದರಸವಿದ್ಯಾರ್ಥಿಗಳು ಕೇವಲ ಧಾರ್ಮಿಕ ಶಿಕ್ಷಣಕ್ಕಷ್ಟೇ ಸೀಮಿತವಾಗದೆ ಐಎಎಸ್, ಐಪಿಎಸ್, ಎಂಬಿಬಿಎಸ್, ಎಂಜಿನಿಯರ್ ಪದವಿಗಳನ್ನು ಪಡೆಯುವಂತೆ ಪ್ರೋತ್ಸಾಹಿಸುವುದು ನಮ್ಮ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಬೆಂಗಳೂರು ಸುತ್ತಮುತ್ತಲಿನ ಹಾಫಿಝ್ ಗಳಿಗೂ ಇದರ ಪ್ರಯೋಜನ ಸಿಗಬೇಕು ಎಂಬ ಉದ್ದೇಶದಿಂದ ಬನ್ನಿಕುಪ್ಪೆಯಲ್ಲಿ ಕಳೆದ ವರ್ಷ ಎಐಸಿಯು ಕೇಂದ್ರ ಆರಂಭಿಸಲಾಗಿದೆ. ಅತೀ ಶೀಘ್ರದಲ್ಲೆ ಕನಕಪುರ, ಶ್ರೀರಂಗಪಟ್ಟಣದ ದಾರೂಲ್ ಉಮೂರ್‌ನಲ್ಲಿ ಹೊಸ ಕೇಂದ್ರಗಳು ಆರಂಭವಾಗಲಿವೆ. 2022ನೆ ಸಾಲಿನ ನೀಟ್ ಪರೀಕ್ಷೆಯಲ್ಲಿ 350ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿರುವ ಹಾಫಿಝ್‌ಗಳಿಗೆ ನಮ್ಮ 12 ವಸತಿ ಸಂಕೀರ್ಣಗಳಲ್ಲಿ ಉಚಿತ ತರಬೇತಿ ನೀಡಲಾಗುವುದು ಎಂದು ಅವರು ಪ್ರಕಟಿಸಿದರು.
ಈ ವರ್ಷ ಶಾಹೀನ್ ಶಿಕ್ಷಣ ಸಂಸ್ಥೆಗಳಿಂದ 1800 ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಕೈಗೊಂಡಿದ್ದು 450 ವಿದ್ಯಾರ್ಥಿಗಳಿಗೆ ಉಚಿತ ವೈದ್ಯಕೀಯ ಸೀಟುಗಳು ಸಿಗುವ ನಿರೀಕ್ಷೆಯಿದೆ. ಸರಕಾರಿ ಸೀಟುಗಳ ಪೈಕಿ ಶೇ.14ರಷ್ಟು ಸೀಟುಗಳು ನಮ್ಮ ಸಂಸ್ಥೆಗೆ ಸಿಗುತ್ತಿವೆ ಎಂದು ಅಬ್ದುಲ್ ಖದೀರ್ ಮಾಹಿತಿ ನೀಡಿದರು.
ನೀಟ್ ಪರೀಕ್ಷೆಯಲ್ಲಿ 680 ಅಂಕಗಳನ್ನು ಪಡೆದಿರುವ ಹಾಫಿಝ್ ಮುಹಮ್ಮದ್ ಅಲಿ ಇಕ್ಬಾಲ್ ಮಾತನಾಡಿ, 4 ವರ್ಷಗಳ ಹಿಫ್ಝುಲ್ ಕುರ್‌ಆನ್ ಪ್ಲಸ್ ಕೋರ್ಸ್ ಬಹಳ ಸಹಕಾರಿಯಾಗಿದೆ. ಶಾಲಾ ಶಿಕ್ಷಣವನ್ನು ಮೊಟಕುಗೊಳಿಸಿ ಹಾಫಿಝ್ ಆಗಿದ್ದ ನಾನು, ಶಾಹೀನ್ ಕಾಲೇಜಿನ ಸಂಪರ್ಕದಿಂದಾಗಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.68ರಷ್ಟು ಅಂಕಗಳು, ಪಿಯುಸಿಯಲ್ಲಿ ಶೇ.96ರಷ್ಟು ಅಂಕಗಳನ್ನು ಪಡೆಯಲು ಸಾಧ್ಯವಾಯಿತು. ಇದೀಗ ನೀಟ್ ಪರೀಕ್ಷೆಯಲ್ಲಿ ಸಾಧನೆ ಮಾಡಿ, ವೈದ್ಯನಾಗಲು ಸಾಧ್ಯವಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಾಮಿಯಾ ಉಲೂಮ್ ಶಾಹೀನ್ ಹಿಫ್ಝ್ ಪ್ಲಸ್ ಅಕಾಡೆಮಿ ನಿರ್ದೇಶಕ ಸೈಯ್ಯದ್ ತನ್ವೀರ್ ಅಹ್ಮದ್, ಫಾಲ್ಕನ್ ಶಾಹೀನ್ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ಸುಭಾನ್, 2022ನೆ ಸಾಲಿನ ನೀಟ್ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದಂತಹ ಮದರಸವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
► ಅತಿ ಹೆಚ್ಚು ಅಂಕ ಪಡೆದ ಮದರಸ ವಿದ್ಯಾರ್ಥಿಗಳು
ಹಾಫಿಝ್ ಮುಹಮ್ಮದ್ ಅಲಿ ಇಕ್ಬಾಲ್(680 ಅಂಕಗಳು)
ಹಾಫಿಝ್ ಗುಲ್ಮಾನ್ ಅಹ್ಮದ್ ಝೆರ್ದಿ(646 ಅಂಕಗಳು)
ಹಾಫಿಝ್ ಮುಹಮ್ಮದ್ ಅಬ್ದುಲ್ಲಾ(632 ಅಂಕಗಳು)
ಹಾಫಿಝ್ ಹುಝೈಫಾ(602 ಅಂಕಗಳು)
ಹಾಫಿಝ್ ಮುಹಮ್ಮದ್ ಸೈಫುಲ್ಲಾ(577 ಅಂಕಗಳು)
ಹಾಫಿಝ್ ಶೇಖ್ ಅಬ್ದುಲ್ ರಫಿ(567 ಅಂಕಗಳು)
ಹಾಫಿಝ್ ಮುಹಮ್ಮದ್ ಫೈಝ್ ಅಕೀಲ್ ಅಹ್ಮದ್(562 ಅಂಕಗಳು)
ಹಾಫಿಝ್ ಗುಲಾಂ ವಾರಿಸ್(560 ಅಂಕಗಳು)
ಹಾಫಿಝ್ ಮುಹಮ್ಮದ್ ಸುಹೇಬ್ ಸಾಜಿದ್ ಹುಸೇನ್(533 ಅಂಕಗಳು)
ಹಾಫಿಝ್ ಮುಹಮ್ಮದ್ ಆಸಿಫ್(504 ಅಂಕಗಳು)
ಹಾಫಿಝ್ ಮುಹಮ್ಮದ್ ಇಷಾಕ್(489 ಅಂಕಗಳು)
ಹಾಫಿಝ್ ಮೋಮಿನ್ ಅಬ್ದುಲ್ಲಾ(484 ಅಂಕಗಳು)
ಹೆಚ್ಚಿನ ಮಾಹಿತಿಗಾಗಿ ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಗಳ ವೆಬ್‌ಸೈಟ್ https://shaheengroup.org/ ಟೋಲ್ ಫ್ರೀ ದೂರವಾಣಿ ಸಂಖ್ಯೆ 1800-121-6235 ಅನ್ನು ಸಂಪರ್ಕಿಸಹಬಹುದಾಗಿದೆ.